More

    ್ರೀರಾಮ ಪ್ರತಿಷ್ಠಾಪಿಸಿದ ರಾಮೇಶ್ವರ ಲಿಂಗ

    ಗೋಣಿಕೊಪ್ಪ: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗಾಮ ಪಂಚಾಯಿತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಇರ್ಪು ಪ್ರದೇಶದಲ್ಲಿರುವ ರಾಮೇಶ್ವರ ದೇವಾಲಯಲ್ಲಿ ಸ್ವತಃ ಶ್ರೀರಾಮನೇ ಲಿಂಗ ಪ್ರತಿಷ್ಠಾಪನೆ ಮಾಡಿದ ಎಂಬುದು ಇತಿಹಾಸದಿಂದ ತಿಳಿದು ಬಂದಿದ್ದು, ಈ ಕಾರಣಕ್ಕೆ ದೇವಾಲಯ ಹೆಸರುವಾಸಿಯಾಗಿದೆ.

    ಶ್ರೀರಾಮಚಂದ್ರನು ಪಿತೃವಾಕ್ಯ ಪರಿಪಾಲನೆಗೆ 14 ವರ್ಷ ವನವಾಸಕ್ಕೆಂದು ಹೊರಟು, ದೇಶದ ನಾನಾ ಭಾಗದ ಕಾಡುಗಳಲ್ಲಿ ವಾಸ ಮಾಡುವ ವೇಳೆ ರಾವಣನಿಂದ ಸೀತೆ ಅಪಹರಣವಾಗುತ್ತದೆ. ಈ ಸಂದರ್ಭದಲ್ಲಿ ಸೀತೆಯನ್ನು ಕುಡುಕತ್ತ ದಕ್ಷಿಣ ಭಾರತದ ಈಗಿನ ಇರ್ಪು ಪ್ರದೇಶಕ್ಕೆ ಆಗಮಿಸುತ್ತಾನೆ. ಈ ಸಂದರ್ಭದಲ್ಲಿ ರಾಮನಿಗೆ ಬಾಯಾರಿಕೆ ಆದಾಗ ತಮ್ಮ ಲಕ್ಷ್ಮಣನಿಗೆ ನೀರು ತರುವಂತೆ ಆದೇಶಿಸಿದಾಗ ಲಕ್ಷ್ಮಣ ಈ ಪ್ರದೇಶದಲ್ಲಿ ಎಷ್ಟೇ ಹುಡುಕಾಡಿದರೂ ನೀರು ಸಿಗುವುದಿಲ್ಲ. ಆಗ ಲಕ್ಷ್ಮಣ ಕಾಡಿನತ್ತ ಬಾಣ ಹೂಡುತ್ತಾನೆ. ಬಾಣ ನಾಟಿದ ಜಾಗದಿಂದ ನೀರು ಚಿಮ್ಮಿ ಜಲಪಾತವಾಗಿ ಹರಿಯುತ್ತದೆ. ಅದುವೇ ಈಗಿನ ಇರ್ಪು ಜಲಪಾತ. ಹೀಗಾಗಿಯೇ ಈ ನದಿಗೆ ಲಕ್ಷ್ಮಣತೀರ್ಥ ಎಂದು ಹೆಸರು ಬಂದಿತು. ಅಲ್ಲದೆ ನದಿಯ ಪಕ್ಕದಲ್ಲಿಯೇ ರಾಮೇಶ್ವರ ದೇವಾಲಯವಿದೆ.

    ಹಿನ್ನೆಲೆ: ಪೌರಾಣಿಕ ಕಥೆಯ ಪ್ರಕಾರ ಇಲ್ಲಿನ ರಾಮೇಶ್ವರ ದೇವಾಲಯದಲ್ಲಿ ಪೂಜಿಸಲ್ಪಡುವ ಶಿವಲಿಂಗವನ್ನು ರಾಮನೇ ಸ್ವತಃ ಪ್ರತಿಷ್ಠಾಪಿಸಿದ್ದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪೌರಾಣಿಕ ಕಥೆಯೂ ಪ್ರಚಲಿತದಲ್ಲಿದೆ. ಸೀತೆಯನ್ನು ಕರೆದೊಯ್ದು ಲಂಕೆಯ ಅಶೋಕವನದಲ್ಲಿ ರಾವಣನು ಇರಿಸಲ್ಪಟ್ಟಾಗ ಸೀತೆಯನ್ನು ಹುಡುಕತ್ತ ಹೊರಟ ರಾಮ-ಲಕ್ಷ್ಮಣರಿಗೆ ತನ್ನ ಅಣ್ಣ ವಾಲಿಯಿಂದ ಹೊರದೂಡಲ್ಪಟ್ಟ ಸುಗ್ರೀವನ ಪರಿಚಯವಾಗುತ್ತದೆ. ನಂತರ ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ ರಾಮನಿಗೆ ಸಹಾಯ ಮಾಡುವ ಸಲುವಾಗಿ ಹನುಮಂತ ಸೇರಿದಂತೆ ಕಪಿ ಸೈನ್ಯವನ್ನು ಸೀತೆಯನ್ನು ಹುಡುಕಲು ಸುಗ್ರೀವ ಕಳುಹಿಸುತ್ತಾನೆ. ಈ ವೇಳೆ ಸೀತೆಯನ್ನು ರಾವಣ ಕದ್ದೊಯ್ದ ವಿಚಾರ ಜಟಾಯುವಿನಿಂದ ಗೊತ್ತಾಗುತ್ತದೆ.

    ಈ ಸಂದರ್ಭದಲ್ಲಿ ಶ್ರೀರಾಮ ಈ ಪ್ರದೇಶದಲ್ಲಿ ಲಿಂಗ ಪ್ರತಿಷ್ಠಾಪನೆಗೆ ಸಮಯ, ದಿನ ನಿಗದಿಪಡಿಸಿ ಮುನಿಪುಂಗವರನ್ನು ಆಹ್ವಾನಿಸಿ ವ್ಯವಸ್ಥೆ ಮಾಡುತ್ತಾನೆ. ಶ್ರೀರಾಮನ ಆಜ್ಞೆಯಂತೆ ಆಂಜನೇಯ ಲಿಂಗ ತರಲೆಂದು ಕಾಶಿಗೆ ಹೋಗುತ್ತಾನೆ. ಆದರೆ ನಿಗದಿ ಮಾಡಿದ್ದ ಮುಹೂರ್ತ ಸಮೀಪಿಸಿದರೂ ಲಿಂಗ ತರಲು ಹೋದ ಆಂಜನೇಯನ ಸುಳಿವೇ ಇಲ್ಲದಂತಾಗುತ್ತದೆ. ಈ ವೇಳೆ ಶ್ರೀರಾಮ ಸ್ವತಃ ಮರಳಿನಲ್ಲಿ ಲಿಂಗವನ್ನು ಮಾಡಿ ಮುಹೂರ್ತದ ಸಮಯಕ್ಕೆ ಸರಿಯಾಗಿ ಪ್ರತಿಷ್ಠಾಪನೆ ಮಾಡುತ್ತಾನೆ. ಆ ಲಿಂಗವೇ ಈಗಿನ ರಾಮೇಶ್ವರ ದೇವಾಲಯದಲ್ಲಿರುವ ಲಿಂಗ ಎಂಬುದು ಇಲ್ಲಿನ ಜನರ ನಂಬಿಕೆ.

    ಮೂಹೂರ್ತ ಮೀರಿದ ಬಳಿಕ ಆಂಜನೇಯ ಲಿಂಗವನ್ನು ಹೊತ್ತು ಬರುತ್ತಾನೆ. ಆದರೆ ಅಷ್ಟರಲ್ಲಿಯೇ ಲಿಂಗಪ್ರತಿಷ್ಠಾಪನೆ ಕಾರ್ಯ ಮುಗಿದಿರುತ್ತದೆ. ಈಗ ಏನು ಮಾಡುವುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ರಾಮ, ಆಂಜನೇಯನ ಬೆನ್ನು ತಟ್ಟಿ ಸಮಾಧಾನಪಡಿಸುತ್ತ ಅಲ್ಲಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ಹೇರ್ಮಾಡು ಎಂಬಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸುತ್ತಾನೆ. ಅದರಂತೆ ಆಂಜನೇಯ ಅಲ್ಲಿ ಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಹೀಗಾಗಿ ಹೇರ್ಮಾಡಿನಲ್ಲಿರುವ ಶಿವಲಿಂಗವೂ ಮಹತ್ವ ಹೊಂದಿದ್ದು, ಅಲ್ಲಿಯೂ ವಿವಿಧ ಪೂಜಾ ಕೈಂಕರ್ಯ ವಿಜೃಂಭಣೆಯಿಂದ ನೆರವೇರಿಸಿ, ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

    ಆಚರಣೆ: ಪ್ರತಿ ವರ್ಷ ಶಿವರಾತ್ರಿಯ ಮಾರನೇ ದಿನ ಇಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ಜಾಗರಣೆ ಮುಗಿಸಿ ಇರ್ಪುವಿನಲ್ಲಿರುವ ಲಕ್ಷ್ಮಣತೀರ್ಥದ ಜಲಧಾರೆಯಲ್ಲಿ ಸ್ನಾನ ಮಾಡಿ ಪಕ್ಕದಲ್ಲಿರುವ ರಾಮೇಶ್ವರ ದೇಗುಲದಲ್ಲಿ ಶಿವಲಿಂಗ ದರ್ಶನ ಮಾಡಿ ಪೂಜೆ ಸಲ್ಲಿಸುವುದು ಸಂಪ್ರದಾಯ. ದಂಪತಿಗಳು ಇಲ್ಲಿ ಕೈಹಿಡಿದು ಸ್ನಾನ ಮಾಡಿದರೆ ದಾಂಪತ್ಯ ಗಟ್ಟಿಯಾಗಿ ಸುಖ, ಸಂತೋಷ, ನೆಮ್ಮದಿ ವೃದ್ಧಿಸುತ್ತದೆ ಎಂಬ ನಂಬಿಕೆ ಭಕ್ತರ ವಲಯದಲ್ಲಿದೆ.

    ಮಾರ್ಗ: ಮಡಿಕೇರಿಯಿಂದ 85 ಕಿಮೀ ದೂರದಲ್ಲಿರುವ ಇರ್ಪುಗೆ ಮಡಿಕೇರಿ ಕಡೆಯಿಂದ ಹೋಗುವವರು ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಥವಾ ಹುಣಸೂರು, ನಾಗರಹೊಳೆ, ಕುಟ್ಟದ ಮೂಲಕವೂ ತೆರಳಬಹುದಾಗಿದೆ.

    ಇರ್ಪು ಜಲಪಾತ: ಪಶ್ಚಿಮ ಘಟ್ಟದ ಬೆಟ್ಟ ಸಾಲುಗಳ ಬ್ರಹ್ಮಗಿರಿ ಶ್ರೇಣಿಯಲ್ಲಿದೆ. ಸುಮಾರು 60 ಅಡಿಗಳಿಂದ ಧುಮ್ಮಿಕ್ಕಿ ಹರಿಯುವ ಮನಮೋಹಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ನಿತ್ಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

    ಇದೊಂದು ಪುರಾಣ ಪ್ರಸಿದ್ಧ ದೇವಾಲಯ. ರಾಮಾಯಣ ಕಾಲದಲ್ಲಿ ಶ್ರೀರಾಮಚಂದ್ರನ ಬಾಯಾರಿಕೆ ನೀಗಿಸಲು ಈ ಸ್ಥಳದಲ್ಲಿ ಲಕ್ಷ್ಮಣ ಬಾಣ ಹೂಡಿ ನೀರು ಚಿಮ್ಮಿಸಿದ. ಅಂತೆಯೆ ರಾಮನೂ ಇಲ್ಲಿ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ ಎಂದು ಪುರಾಣ ಹೇಳುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶಿವರಾತ್ರಿ ದಿನದಂದು ಇಲ್ಲಿ ವಿಶೇಷವಾಗಿ ಪೂಜೆ ಕೈಂಕರ್ಯ ನೆರವೇರಲಿದೆ.
    ಚೋಕೀರ ಹ್ಯಾರಿ ಗೌರವ ಕಾರ್ಯದರ್ಶಿ, ದೇವಸ್ಥಾನ ಅಭಿವೃದ್ಧಿ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts