More

    ಗುರು ಕರುಣೆಯಿಂದ ಆತ್ಮಸಾಕ್ಷಾತ್ಕಾರ

    ಬಾಳೆಹೊನ್ನೂರು: ಶ್ರೀ ಗುರುವಿನ ಕರುಣೆಯಿಂದ ಆತ್ಮಸಾಕ್ಷಾತ್ಕಾರ ಆಗಲಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

    ಶ್ರೀ ರಂಭಾಪುರಿ ಪೀಠದಲ್ಲಿ ಶುಕ್ರವಾರ ಏರ್ಪಡಿಸಿದ್ದ 29ನೇ ವರ್ಷದ ಶ್ರಾವಣ ತಪೋನುಷ್ಠಾನ ಹಾಗೂ ಲಿಂ. ಶ್ರೀ ಶಿವಾನಂದ ಜಗದ್ಗುರುಗಳ 73ನೇ ವರ್ಷದ ಪುಣ್ಯಸ್ಮರಣೋತ್ಸವದಲ್ಲಿ ಆಶೀರ್ವಚನ ನೀಡಿದರು.

    ಗುರುಕಾರುಣ್ಯದ ಶಕ್ತಿ ಅದ್ಭುತವಾಗಿದೆ. ಶ್ರೀ ಗುರುವು ಅರಿವು, ಆಚಾರಗಳ ಚೈತನ್ಯಮೂರ್ತಿ. ಆಧ್ಯಾತ್ಮ ಸಾಮ್ರಾಜ್ಯದ ಚಕ್ರವರ್ತಿ. ನವ ನಿರ್ಮಾಣ ಶಿಲ್ಪಿ ಎಂದೇ ಪ್ರಖ್ಯಾತಿ ಪಡೆದ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಭಗವತ್ಪಾದರು ನಿರಂತರ ಪರಿಶ್ರಮ ಮತ್ತು ಸಾಧನೆಯಿಂದ ಶ್ರೀಪೀಠದ ವರ್ಚಸ್ಸನ್ನು ಹೆಚ್ಚಿಸಿದರು ಎಂದು ತಿಳಿಸಿದರು.

    ವೀರಶೈವ ಧರ್ಮದಲ್ಲಿ ಗುರುವಿಗೆ ಮೊದಲ ಸ್ಥಾನವಿದೆ. ಗುರು-ಶಿಷ್ಯರ ಸಂಬಂಧ ಘನವಾಗಿದೆ. ಸಕಲ ಜೀವರಾಶಿಗಳಿಗೆ ಒಳಿತನ್ನು ಬಯಸುವ ಶ್ರೀಗುರು ಕರುಣಾ ಸಾಗರ. ತಾನು ಕಂಡ ಆತ್ಮ ತತ್ವದ ನಿಜವನ್ನು ಲೋಕಕ್ಕೆ ತಿಳಿಸಬೇಕು ಎಂಬುದು ಗುರುವಿನ ಧರ್ಮವಾಗಿದೆ. ನಿರಾಕಾರನಾದ ಪರಮಾತ್ಮ ಭಕ್ತರ ಭಕ್ತಿಗೆ ಮೆಚ್ಚಿ ಸಾಕಾರ ಗುರು ರೂಪ ತೊಟ್ಟು ಬಂದಿರುವುದನ್ನು ರೇಣುಕ ಗೀತೆ ನಿರೂಪಿಸುತ್ತದೆ. ಶ್ರೀ ಶಿವಾನಂದ ಜಗದ್ಗುರುಗಳ ಜೀವನದ ಸಿದ್ಧಿ ಸಾಧನೆಗಳು ಶ್ರೀಪೀಠದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿವೆ ಎಂದರು.

    ಲಿಂ. ಶ್ರೀ ಶಿವಾನಂದ ಜಗದ್ಗುರುಗಳ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಪೂಜೆ ಸಲ್ಲಿಸಲಾಯಿತು. ಅಬ್ಬಿಗೇರಿ ಹಿರೇಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದಿಗೆಮಠದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾರಾಷ್ಟ್ರದ ಸುಲೆಪೇಟೆ ಹಿರೇಮಠದ ನಂದಿಕೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಖಾಂಡ್ಯ ಮತ್ತು ಜಾಗರ ಹೋಬಳಿ ಸದ್ಭಕ್ತರು ಅನ್ನದಾಸೋಹ ಸೇವೆ ಸಲ್ಲಿಸಿದರು.

    ಕ್ಷೇತ್ರದ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ವೀರಭದ್ರಸ್ವಾಮಿಗೆ, ಸೋಮೇಶ್ವರ ಮಹಾಲಿಂಗಕ್ಕೆ, ಶಕ್ತಿ ಸ್ವರೂಪಿಣಿ ಭದ್ರಕಾಳಿ ಚೌಡೇಶ್ವರಿಗೆ ರುದ್ರಾಭಿಷೇಕ ಪೂಜೆ ನಡೆಸಲಾಯಿತು. ಲೋಕ ಕಲ್ಯಾಣ, ಜಗದ ಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts