More

    ವರ್ಷಧಾರೆಗೆ ತತ್ತರಿಸಿದ ರಾಮನಗರ: ತುಂಬಿದ ಜಲಾಶಯ, ಜಮೀನು, ಮನೆಗೆ ನುಗ್ಗಿದ ನೀರು ರಸ್ತೆ ಸಂಪರ್ಕ ಕಡಿತ

    ರಾಮನಗರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಮನಗರ ಜಿಲ್ಲೆ ಸಂಪೂರ್ಣ ತತ್ತರಿಸಿಹೋಗಿದೆ. ಜಲಾಶಯಗಳು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಕಳೆದ ಶನಿವಾರದಿಂದಲೂ ಜಿಲ್ಲೆಯಲ್ಲಿ ಗಾಳಿ ಸಹಿತ ಬಿರುಸು ಮಳೆಯಾಗುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯೂ ಆಗಿದೆ. ಅಲ್ಲದೆ, ಸಂಪರ್ಕ ರಸ್ತೆಗಳೂ ನೀರು ಪಾಲಾಗಿದ್ದು, ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ತುಂಬಿ ಹರಿದ ಅರ್ಕಾವತಿ ರಾಮನಗರ ಜಿಲ್ಲೆಯ ಜೀವನದಿ ಅರ್ಕಾವತಿ ಕಳೆದ ಮೂರು ದಶಕದಿಂದಲೂ ಸಂಪೂರ್ಣ ತುಂಬಿ ಹರಿದ ಉದಾಹರಣೆ ಇಲ್ಲ. ಆದರೆ, ಈ ಬಾರಿ ಅವಧಿಗೂ ಮುನ್ನವೇ ಅರ್ಕಾವತಿ ಮೈ ತುಂಬಿ ಹರಿಯುತ್ತಿದ್ದಾಳೆ. ರಾಮನಗರ ಜನತೆ ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    1976ರಲ್ಲಿ ಮಂಚನಬೆಲೆ ಮುಖ್ಯ ಜಲಾಶಯ ನಿರ್ಮಾಣ ಕಾಮಗಾರಿ ಆರಂಭಗೊಂಡು 1989ರ ವೇಳೆಗೆ ಜಲಾಶಯ ನಿರ್ಮಾಣಗೊಂಡಿತು. ಇದಕ್ಕೂ ಮುನ್ನ ಪ್ರತಿವರ್ಷ ಮಳೆಗಾಲದಲ್ಲಿ ನದಿ ತುಂಬಿ ಹರಿಯುತಿತ್ತು. ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಜಮೀನುಗಳಿಗೆ ನುಗ್ಗಿ ನಷ್ಟವೂ ಉಂಟಾಗುತಿತ್ತು.

    ಮನೆಗೆ ನುಗ್ಗಿದ ನೀರು: ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ನಗರಕ್ಕೆ ಹೊಂದಿಕೊಂಡಿರುವ ಭಕ್ಷಿ ಕೆರೆ ತುಂಬಿ ಕಾಲುವೆಗೆ ನೀರು ಹರಿದಿದೆ. ಈ ವೇಳೆ ಟಿಪ್ಪು ನಗರದ ಬಳಿ ಇರುವ ಸುಮಾರು 3 ಅಡಿ ವ್ಯಾಸದ ಪೈಪ್‌ನಲ್ಲಿ ಥರ್ಮೋಕೋಲ್, ಪ್ಲಾಸ್ಟಿಕ್ ಬಾಟಲ್‌ಗಳು, ಇತರ ಕಸ ಕಡ್ಡಿ ಸೇರಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿ ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಇದರಿಂದಾಗಿ ಫಿಲೇಚರ್, ಸುಮಾರು 20 ಮನೆಗಳಿಗೆ ನೀರು ನುಗ್ಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ಕಾಲುವೆಯನ್ನು ಸ್ವಚ್ಛಗೊಳಿಸಿದರು. ನಂತರ ನೀರು ಸರಾಗವಾಗಿ ಹರಿದು ಹೆಚ್ಚಿನ ಅನಾಹುತ ತಪ್ಪಿದೆ.

    ತುಂಬಿ ಹರಿದ ಕೆರೆಗಳು: ಶನಿವಾರ ಮತ್ತು ಸೋಮವಾರ ಸುರಿದ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆಗಳು ಮತ್ತು ಜಲಾಶಯಗಳು ಭರ್ತಿಯಾಗಿವೆ. ಮಾಗಡಿಯ ಮಂಚನಬೆಲೆ ಜಲಾಶಯ, ಚನ್ನಪಟ್ಟಣದ ಕಣ್ವ ಜಲಾಶಯ, ಇಗ್ಗಲೂರು ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿದೆ. ಇನ್ನು ಬಿಸ್ಕೂರು ಕೆರೆ, ಗೌರಮ್ಮ ಕೆರೆ, ಬಿಡದಿಯ ನೆಲ್ಲಿಗುಡ್ಡೆ, ಚನ್ನಪಟ್ಟಣ ತಾಲೂಕಿನ ಬಹುತೇಕ ಕೆರೆಗಳು ತುಂಬಿವೆ.

    ಹೆದ್ದಾರಿ ಬಣ್ಣ ಬಯಲು: ಕಲವೇ ದಿನಗಳಲ್ಲಿ ಉದ್ಘಾಟನೆ ಆಗಬೇಕಿರುವ ಬೆಂಗಳೂರು – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ನಿಜ ಬಣ್ಣ ಸೋಮವಾರ ಸುರಿದ ಮಳೆಗೆ ಬಯಲಾಗಿದೆ. ಹಿಂದಿನಿಂದಲೂ ಸರ್ವೀಸ್ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಲೇ ಇದ್ದರು. ಆದರೆ ಹೆದ್ದಾರಿ ಪ್ರಾಧಿಕಾರ ಗಮನ ಹರಿಸಿರಲಿಲ್ಲ. ಆದರೆ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಬಿಡದಿ, ರಾಮನಗರ, ಚನ್ನಪಟ್ಟಣ ಬಳಿಯ ತಿಟ್ಟಮಾರನಹಳ್ಳಿ, ರಾಮನಗರದ ಬಿಳಗುಂಬ, ಸಂಗನ ಬಸವನದೊಡ್ಡಿ, ಬಿಡದಿ ಕೇತಿಗಾನಹಳ್ಳಿ ಸೇರಿ ಹಲವಾರು ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಕೆರೆಗಳಂತೆ ಆಗಿವೆ. ಇದರಿಂದ ವಾಹನ ಸವಾರರು ಪರದಾಡುವಂತೆ ಆಯಿತು. ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಸಂಗನಬಸವನದೊಡ್ಡಿ ಬಳಿ ಬದಲಿ ಮಾರ್ಗದಲ್ಲಿ ಕಳಿಸಬೇಕಾಯಿತು.

    ಬೆಳೆ ನಷ್ಟ: ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಹರಿದ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿದೆ. ಕೇತಿಗಾನಹಳ್ಳಿ ಬಳಿ ಕೆರೆ ಏರಿ ಒಡೆದು ಕೃಷಿ ಭೂಮಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಶೇ.16ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ. ಇದರ ಹೊರತಾಗಿಯೂ ತೋಟಗಾರಿಕೆ ಇಲಾಖೆ ಬೆಳೆಗಳಿಗೂ ನಷ್ಟವಾಗಿದ್ದು, ಇನ್ನಷ್ಟೇ ಬೆಳೆ ನಷ್ಟದ ವರದಿ ಬರಬೇಕಿದೆ.

    ಎಲ್ಲೆಲ್ಲಿ, ಎಷ್ಟು ಮಳೆ?: ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳೆ ಮಾಪನ ಕೇಂದ್ರಗಳಲ್ಲಿ ಲಭ್ಯವಾದ ದತ್ತಾಂಶದಂತೆ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ ನೀಡಿರುವ ಮಾಹಿತಿಯಂತೆ ಜಿಲ್ಲೆಯ ಹಲವಾರು ಕಡೆಗಳಲ್ಲಿ ನೂರಕ್ಕೂ ಹೆಚ್ಚು ಮಿ.ಮೀ. ಮಳೆಯಾಗಿದೆ. ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು 130.5 ಮಿಮೀ ಮಳೆಯಾಗಿದ್ದರೆ, ಸುಳ್ಳೇರಿಯಲ್ಲಿ 125.5 ಮಿಮೀ, ಚಕ್ಕೆರೆಯಲ್ಲಿ 125 ಮಿಮೀ., ಮಾಗಡಿ ತಾಲೂಕಿನ ಮಾಡಬಾಳ್ ಗ್ರಾಪಂ ವ್ಯಾಪ್ತಿಯಲ್ಲಿ 125ಮಿಮೀ., ಬಿಸ್ಕೂರು ಗ್ರಾಪಂನಲ್ಲಿ 109.50 ಮಿಮೀ., ರಾಮನಗರದ ಲಕ್ಷ್ಮೀಪುರ ಗ್ರಾಪಂನಲ್ಲಿ 83.50 ಮಿಮೀ ಮಳೆಯಾಗಿದೆ. ಉಳಿದಂತೆ ಬಹುತೇಕ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರಾಸರಿಯಲ್ಲಿ 40-60 ಮಿಮೀ. ಮಳೆಯಾಗಿದೆ.

    1962ರಲ್ಲೂ ಇದೇ ಪರಿಸ್ಥಿತಿ: 1962ರ ಆಗಸ್ಟ್ 31ರ ಶುಕ್ರವಾರ ರಾಮನಗರದ ಛತ್ರದ ಬೀದಿಯ ಮೈನ್ ಸ್ಕೂಲ್, ಮುಖ್ಯರಸ್ತೆಯ ಗಣಪತಿ ದೇವಸ್ಥಾನದವರೆಗೆ ನೀರು ಬಂದಿತ್ತು. ಅರ್ಕೇಶ್ವರ ದೇವಾಲಯ ಸಂಪೂರ್ಣ ಮುಳುಗಡೆಯಾಗಿತ್ತು. 1986ರಲ್ಲಿ ಸೇತುವೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿದಿತ್ತು. ಅರ್ಕೇಶ್ವರ ದೇವಾಲಯದ ನಂದಿ ಮಂಟಪದವರಿಗೆ ನೀರು ಬಂದಿತ್ತು. ಈಗಿನ ಹಳೆ ಬಸ್ ನಿಲ್ದಾಣ ಸೇರಿ ನದಿ ಅಕ್ಕಪಕ್ಕ ಪ್ರದೇಶಗಳು ಮುಳುಗಡೆಯಾಗಿದ್ದವು.

    ಕೊಚ್ಚಿ ಹೋದ ಸೇತುವೆ: ರಾಮನಗರ ತಾಲೂಕಿನ ಮೆಳೇಹಳ್ಳಿ ಬಳಿ ಕಣ್ವ ನದಿಗೆ ಅಡ್ಡಲಾಗಿ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಮಂಗಳವಾರ ಬೆಳಗ್ಗೆ ಕೊಚ್ಚಿ ಹೋಗಿದೆ. ಇದರಿಂದಾಗಿ ಜನರು ಓಡಾಟಕ್ಕೆ ಪರದಾಡುತ್ತಿದ್ದು, ನಾಲ್ಕೈದು ಕಿ.ಮೀ. ಬಳಸಿಕೊಂಡು ಮುಖ್ಯರಸ್ತೆಗೆ ಬರಬೇಕಿದೆ. ಕಳೆದ ನವೆಂಬರ್‌ನಲ್ಲಿ ಅತಿವೃಷ್ಟಿಯಿಂದಾಗಿ ಇಲ್ಲಿನ ಸೇತುವೆ ಕೊಚ್ಚಿ ಹೋಗಿತ್ತು. ನಂತರದಲ್ಲಿ ಜನರ ಓಡಾಟಕ್ಕೆಂದು ಜಿಲ್ಲಾಡಳಿತ ತಾತ್ಕಾಲಿಕವಾದ ಸೇತುವೆಯನ್ನು ನಿರ್ಮಿಸಿತ್ತು.


    ರಾಮನಗರದಲ್ಲಿ ಮಂಗಳವಾರ ಮುಂಜಾನೆ ಭಕ್ಷಿ ಕೆರೆಯಿಂದ ನೀರು ಹರಿದು ಟಿಪ್ಪು ನಗರದ ಮನೆಗಳಿಗೆ ನುಗ್ಗಿತ್ತು. ತಕ್ಷಣವೇ ಕಾರ್ಯಾಚರಣೆ ನಡೆಸಿ ಅನಾಹುತ ತಪ್ಪಿಸಲಾಗಿದೆ. ಗುರುವಾರ ತುರ್ತುಸಭೆ ಕರೆದು ಮಳೆ ಹಾನಿ ನಿರ್ವಹಣೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.

    | ಬಿ.ನಂದಕುಮಾರ್ ಆಯುಕ್ತ, ರಾಮನಗರ ನಗರಸಭೆ

    ಹಾನಿ ಬಗ್ಗೆ ಇನ್ನೂ ವರದಿ ಬಂದಿಲ್ಲ. ಬಿತ್ತನೆ ಕಾರ್ಯ ಕಡಿಮೆ ಆಗಿದೆ. ಅಧಿಕಾರಿಗಳು ಈಗಾಗಲೇ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ.

    | ಸೋಮಶೇಖರ್ ಜಂಟಿ ನಿರ್ದೇಶಕ, ಕೃಷಿ ಇಲಾಖೆ

    ಸುಮಾರು 80ರ ದಶಕದಲ್ಲಿ ಇಂತಹ ಹೊಳೆಯನ್ನು ನೋಡಿದ್ದೆ. ಡ್ಯಾಂ ನಿರ್ಮಾಣದ ನಂತರ ಇದೇ ಮೊದಲ ಬಾರಿಗೆ ಅರ್ಕಾವತಿ ನದಿ ತುಂಬಿ ಹರಿಯುತ್ತಿರುವುದನ್ನು ನೋಡಿ ಸಂತಸವಾಗಿದೆ.

    | ನರಸಿಂಗರಾವ್ ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts