More

    ಈಡಿಗರಪಾಳ್ಯ ಜನರ ಓಡಾಟಕ್ಕೆ ತೆಪ್ಪ, ಬೋಟ್: ರಸ್ತೆ ಸಂಪರ್ಕ ಕಳಕೊಂಡ ಗ್ರಾಮ


    ವಿಶೇಷ ವರದಿ ಮಾಗಡಿ
    ಸಂಪರ್ಕ ರಸ್ತೆ ಇಲ್ಲದೆ ತಾಲೂಕಿನ ಈಡಿಗರಪಾಳ್ಯ ಗ್ರಾಮದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮದಲ್ಲಿ ಸುಮಾರು 25 ಕುಟುಂಬಗಳು ವಾಸಿಸುತ್ತಿದ್ದು, ಹೈನುಗಾರಿಕೆ ಮತ್ತು ಕೃಷಿ ಜೀವನಾಧಾರವಾಗಿದೆ. ಗ್ರಾಮಕ್ಕೆ ಯಲ್ಲಾಪುರ ಮತ್ತು ಚನ್ನಬೈರಪ್ಪನಪಾಳ್ಯದದಿಂದ ರಸ್ತೆಯಿದ್ದು ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಪ್ರತಿನಿತ್ಯ ವಾಯಸಂದ್ರ, ಯಲ್ಲಾಪುರ ಡೇರಿಗೆ ಸರಬರಾಜು ಮಾಡುತ್ತಿದ್ದ 500 ಲೀಟರ್ ಹಾಲು ಪೂರೈಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನತೆ ಗ್ರಾಮದಿಂದ ಹೊರಗೆ ಹೋಗಲಾಗುತ್ತಿಲ್ಲ. ಗ್ರಾಮದ ಜನರು ದಿನನಿತ್ಯದ ವ್ಯವಹಾರಕ್ಕೆ ವಾಯಸಂದ್ರ, ಯಲ್ಲಾಪುರಕ್ಕೆ ಬರಬೇಕು. ಆದರೆ, ಸಂಪರ್ಕ ರಸ್ತೆಯಲ್ಲಿ 6 ಅಡಿಗಳಷ್ಟು ನೀರು ಹರಿಯುತ್ತಿದ್ದು, ಮಹಿಳೆಯರು, ಮಕ್ಕಳಿಗೆ ಓಡಾಡಲು ತೊಂದರೆಯಾಗಿದೆ.

    ಶಾಸಕ ಎ.ಮಂಜುನಾಥ್ ಅವರು ಗ್ರಾಮದ ಜನರ ಓಡಾಟಕ್ಕೆಂದು ಮೀನುಗಾರಿಕೆ ಇಲಾಖೆಯಿಂದ ಒಂದು ತೆಪ್ಪದ ವ್ಯವಸ್ಥೆ ಮಾಡಿದ್ದಾರೆ. ಆದರೆ ಇದನ್ನು ಬಳಸುವಷ್ಟು ಪರಿಣತಿ ಹೊಂದಿದವರು ಇಲ್ಲದಿರುವುದರಿಂದ ಕಾಯಿಲೆಯಿಂದ ನರಳುತ್ತಿರುವ ವಯೋವೃದ್ದರು, ಮಕ್ಕಳನ್ನು ವಾಯಾಸಂದ್ರ, ಯಲ್ಲಾಪುರ, ಕುದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿಬರಲು ಅನಿವಾರ್ಯವಾಗಿ ತೆಪ್ಪವನ್ನೇ ಆಶ್ರಯಿಸಬೇಕಾಗಿದೆ. ಮಳೆಯ ಅವಾಂತರಕ್ಕೆ ಬಿತ್ತಿದ್ದ ಬೆಳೆ ನಷ್ಟವಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಗ್ರಾಮದ ಮಕ್ಕಳಿಗೆ ಶಿಕ್ಷಣ ಸದ್ಯಕ್ಕೆ ದೂರವಾಗಿದೆ.

    ಮಸ್ಯೆಗೆ ಸ್ಪಂದಿಸಿದ್ದ ಪುನೀತ್: ಎರಡು ವರ್ಷಗಳ ಹಿಂದೆ ಈಡಿಗರಪಾಳ್ಯದ ಗ್ರಾಮಸ್ಥರು ನಟ ಪುನೀತ್ ರಾಜ್‌ಕುವಾರ್ ಅವರನ್ನು ಭೇಟಿ ಮಾಡಿ ಮಾಯಸಂದ್ರದಿಂದ ಈಡಿಗರ ಪಾಳ್ಯಕ್ಕೆ ಸಂಪರ್ಕ ರಸ್ತೆಯಿಲ್ಲ. ಸಂಚಾರಕ್ಕೆ ತೊಂದರೆಯಾಗಿದೆ. ಇರುವ ತೊರೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಅವರು ಕೂಡ ಪೂರಕವಾಗಿ ಸ್ಪಂದಿಸಿದ್ದರು. ಆದರೆ, ಅವರ ಅಕಾಲಿಕ ಮರಣದಿಂದಾಗಿ ಈ ಕಾರ್ಯ ಆಗಲಿಲ್ಲ ಎಂದು ಗ್ರಾಮದ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

    ಮಳೆರಾಯ ಅಬ್ಬರ ನಿಲ್ಲಿಸಿದರೂ, ಈಗ ಸುರಿದಿರುವ ಮಳೆಯಿಂದಾಗಿ ಮುಂದಿನ 3 ತಿಂಗಳು ಗ್ರಾಮದ ಜನರ ಸಂಕಷ್ಟ ಮುಂದುವರಿಯಲಿದೆ. ಚುನಾಯಿತ ಪ್ರತಿನಿಧಿಗಳು ಎಚ್ಚೆತ್ತು ಸೇತುವೆ ನಿರ್ವಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಗ್ರಾಮಸ್ಥರ ತಾಳ್ಮೆಯ ಕಟ್ಟೆ ಒಡೆದರೆ ಪರಿಸ್ಥಿತಿ ಎಲ್ಲಿಗೆ ಮುಟ್ಟುತ್ತದೆ ಎಂಬುದನ್ನು ಹೇಳಲಾಗದು.

    ಶಾಸಕರಿಂದ ಪರಿಶೀಲನೆ: ವಿಷಯ ತಿಳಿದ ಶಾಸಕ ಎ. ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶ್ರೀದಲ್ಲಿಯೇ ಸೇತುವೆ ನಿರ್ಮಿಸುವ ಭರವಸೆ ನೀಡಿ ಗ್ರಾಮಸ್ಥರ ಪರಿಸ್ಥಿತಿ ಅವಲೋಕಿಸಿ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.

    ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಭೇಟಿ ನೀಡಿ, ಲೋಕೋಪಯೋಗಿ ಇಲಾಖೆ, ಜಿಪಂ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ತಾತ್ಕಾಲಿಕವಾಗಿ ಮೋಟಾರ್‌ಬೋಟ್ ವ್ಯವಸ್ಥೆ ಮಾಡಿದರೆ ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುವುದಾಗಿ ತಿಳಿಸಿದರು. ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

    ಬೋಟ್, ತೆಪ್ಪದ ವ್ಯವಸ್ಥೆ: ಶನಿವಾರ ಬೆಳಗ್ಗೆ ಲೋಕೋಪಯೋಗಿ ಇಲಾಖೆ ಎಇಇ ವಿಜಯಗೋಪಾಲ್ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಏರ್ ಬೋಟ್ ಮತ್ತು ತೆಪ್ಪದ ಮೂಲಕ ಗ್ರಾಮಸ್ಥರನ್ನು ಸುರಕ್ಷಿತವಾಗಿ ದಾಟಿಸುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರ ಸಂಕಷ್ಟ ಅರಿತು ಈಡಿಗ ಸಂದಿಂದ ಅಗತ್ಯವಸ್ತುಗಳು ಹಾಗೂ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts