More

    ಲಾಠಿ ಹಿಡಿದ ಕೈಗಳು ಸಲಿಕೆ ಹಿಡಿದವು: ರಸ್ತೆ ಗುಂಡಿ ಮುಚ್ಚಿದ ಕಗ್ಗಲಿಪುರ ಪೊಲೀಸರು

    ಹಾರೋಹಳ್ಳಿ: ಎರಡು ದಿನಗಳ ಹಿಂದೆ ಹಾರೋಹಳ್ಳಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಗುಂಡಿ ಮುಚ್ಚುವ ಮೂಲಕ ಸುದ್ದಿಯಾಗಿದ್ದರು. ಇದೀಗ ಕಗ್ಗಲೀಪುರ ಪೊಲೀಸರೂ ಇದೇ ರೀತಿಯ ಮಾದರಿ ಕೆಲಸಕ್ಕೆ ಮುಂದಾಗಿದ್ದು, ಪ್ರಶಂಸೆಗೆ ಕಾರಣವಾಗಿದೆ.

    ಬೆಂಗಳೂರು-ಹಾರೋಹಳ್ಳಿ ನಡುವಿನ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದನ್ನು ಮನಗಂಡ ಪೊಲೀಸರು ಗುಂಡಿ ಮುಚ್ಚಲು ಮುಂದಾಗಿದ್ದಾರೆ. ಕಗ್ಗಲೀಪುರ ಠಾಣಾ ವ್ಯಾಪ್ತಿಯ ಸೋಮನಹಳ್ಳಿಯ ಎಡಿಫೈ ಶಾಲೆ ಬಳಿ ಶನಿವಾರ ಸಂಜೆ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿತ್ತು. ಇದರಿಂದ ಸಂಚರಿಸಲು ಸಾಧ್ಯವಾಗದೆ ಸುಮಾರು 5 ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಸವಾರರ ಕಷ್ಟ ಅರಿತ ಕಗ್ಗಲೀಪುರ ಪೊಲೀಸರು ಸ್ವತಃ ಕಾರ್ಯಾಚರಣೆಗೆ ಇಳಿದು, ಸಲಿಕೆ, ಗುದ್ದಲಿ ಹಿಡಿದು ಪಕ್ಕದಲ್ಲೇ ಇದ್ದ ಮಣ್ಣನ್ನು ಬಳಸಿಕೊಂಡು ಜೆಸಿಬಿ ಸಹಾಯದಿಂದ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಇನ್ನು ಲಾಠಿ ಹಿಡಿದು ಕಾನೂನಿನ ಪಾಠ ಹೇಳುತ್ತಿದ್ದ ಪೊಲೀಸರು ಗುದ್ದಲಿ, ಸನಿಕೆ ಹಿಡಿದು ಕೆಲಸಕ್ಕೆ ಮುಂದಾಗಿದ್ದು ಅವರ ಮಾನವೀಯ ಗುಣಗಳನ್ನು ಅನಾವರಣಗೊಳಿಸಿದೆ.
    ಕಗ್ಗಲೀಪುರ ಠಾಣೆಯ ಇನ್‌ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಗಿರೀಶ್, ಯಂಕೋಬಾ, ಸುಖದೇವ್, ಸುನೀಲ್, ಮಡಿಯಪ್ಪ ಮತ್ತಿತರರು ಮಾದರಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಪೊಲೀಸರು ಇಷ್ಟು ದಿನ ಲಾಠಿ ಹಿಡಿದು ಕಾನೂನಿನ ಪಾಠ ಹೇಳುತ್ತಿದ್ದರು. ಅವರನ್ನು ಕಂಡರೆ ಸ್ವಲ್ಪ ಭಯವೂ ಆಗುತ್ತಿತ್ತು. ಆದರೆ, ಇಂದು ಗುದ್ದಲಿ, ಸಲಿಕೆಗಳನ್ನು ಹಿಡಿದು ಹಳ್ಳ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಪೊಲೀಸರ ಮೇಲಿನ ಗೌರವ ಹೆಚ್ಚಾಗಿದೆ.
    | ಶಶಿ, ಭಾರ್ಗವ ಸಾರ್ವಜನಿಕರು
    \

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts