More

    ಗವಿನಾಗಮಂಗಲದಲ್ಲೊಬ್ಬ ಮಾದರಿ ರೈತ ಕೃಷಿ ಪಂಡಿತ ರಾಮಚಂದ್ರಯ್ಯ

    ಸಿದ್ದಲಿಂಗೇಶ್ವರ್ ಮಾಗಡಿ
    ‘ಬೇಸಾಯ ಎಂದರೆ ನಾ ಸಾಯ… ನೀ ಸಾಯ… ಮನೆ ಮಂದಿ ಸಾಯ…’ ಎಂಬ ಗಾದೆಗೆ ವಿರುದ್ಧವಾಗಿ ಸಮಗ್ರ ಕೃಷಿಯಲ್ಲಿ ತೊಡಗಿ ಇತರರಿಗೆ ಮಾದರಿಯಾಗಿದ್ದಾರೆ ತಾಲೂಕಿನ ಗವಿನಾಗಮಂಗಲದ ಜಿ.ಆರ್.ರಾಮಚಂದ್ರಯ್ಯ.

    10 ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ಕೃಷಿ ಕೈಗೊಂಡು ಹಸಿರು ವನ ಮಾಡಿರುವ ಜಿ.ಆರ್.ರಾಮಚಂದ್ರಯ್ಯ ಪದವೀಧರರಾಗಿದ್ದು, ಚಿಕ್ಕ ವಯಸ್ಸಿನಿಂದಲೇ ಕೃಷಿಯಲ್ಲಿ ತೊಡಗಿ ನೈಸರ್ಗಿಕ ಬೇಸಾಯಕ್ಕೆ ಒತ್ತು ನೀಡಿದ್ದಾರೆ.

    ಜೇನು, ಮೀನು ಸಾಕಣೆ ಮಾಡುವ ಇವರು, ಕೃಷಿಗಾಗಿ ಎರೆಹುಳು ಘಟಕ, ಜೀವಾಮೃತ ಘಟಕ, ಚೆಕ್ ಡ್ಯಾಂ ನಿರ್ಮಾಣ ಮಾಡಿಕೊಂಡಿದ್ದಾರೆ. ರಾಗಿ, ತೊಗರಿ, ಹುರುಳಿ, ಕಡಲೆ, ಸಿಹಿ ಗೆಣಸು, ಸಿರಿಧಾನ್ಯಗಳಾದ ಬರಗು, ಕೊರಲೆ, ಸಾಮೆ, ನವಣೆ ಬೆಳೆಯುತ್ತಾರೆ. ತೇಗ, ಸಿಲ್ವರ್, ಮಹಾಗನಿ, ಹುಣಸೇಮರ ಬೆಳೆದಿದ್ದಾರೆ.
    ಸೀಬೆ, ಸಪೋಟ, ಆ್ಯಪಲ್, ಬಟರ್‌ರ್ೂಟ್, ಅಂಜೂರ, ಜಂಬುನೇರಳೆ, ನೆಲ್ಲಿ, ಹಲಸು, ಪಪ್ಪಾಯ, ನಿಂಬೆ, ಕಿತ್ತಳೆ, ರಾಮಫಲ, ಸೀತಾಫಲದಂತಹ ಹಣ್ಣುಗಳನ್ನೂ ಇವರ ಜಮೀನಿನಲ್ಲಿ ಕಾಣಬಹುದು. ತೋಟಗಾರಿಕೆ ಬೆಳೆಯಾಗಿ ಮಾವು, ಅಡಕೆ, ತೆಂಗು, ಬಾಳೆ ಬೆಳೆದಿದ್ದಾರೆ.

    ಗವಿನಾಗಮಂಗಲದಲ್ಲೊಬ್ಬ ಮಾದರಿ ರೈತ ಕೃಷಿ ಪಂಡಿತ ರಾಮಚಂದ್ರಯ್ಯ

    ಔಷಧೀಯ ಸಸ್ಯ

    ಹಿಪ್ಪಲಗಿ, ಅಮೃತ್‌ನೋನಿ, ರಣ ಫಲ, ಟಿಂಚರ್ ಗಿಡ, ಶುಗರ್ ಗಿಡ, ಲೆಮನ್ ಗ್ರಾಸ್, ಒಂದೆಲಗ, ದೊಡ್ಡ ಪತ್ರೆ, 4 ಬಗೆಯ ತುಳಸಿ ಗಿಡದಂತಹ ಔಷಧೀಯ ಸಸ್ಯಗಳನ್ನು ಬೆಳೆದಿದ್ದಾರೆ. ಜತೆಗೆ ಸಂಬಾರ ಪದಾರ್ಥಗಳಾದ ಚಕ್ಕೆ, ಲವಂಗ, ಏಲಕ್ಕಿ, ಜಾಯಿಕಾಯಿಗಳನ್ನು ರಾಮಚಂದ್ರಯ್ಯ ಬೆಳೆದಿದ್ದಾರೆ.

    ಗೊಬ್ಬರ ಉತ್ಪಾದನೆ
    ಮೇಕೆ, ದೇಸಿ ತಳಿ ಹಸುಗಳು, ಎಚ್‌ಎಫ್ ಮಿಶ್ರ ತಳಿ ಹಸುಗಳು, ನಾಟಿ ಕೋಳಿ ಸಾಕಿದ್ದಾರೆ. ಅವುಗಳ ತ್ಯಾಜ್ಯ ಗೊಬ್ಬರವಾಗುತ್ತಿದೆ.

    ಜೇನು ಸಾಕಣೆ

    ಜೇನು ಸಾಕಣೆ ಘಟಕ ಮತ್ತು ಸಂಸ್ಕರಣೆ ಆರಂಭಿಸಿರುವ ರಾಮಚಂದ್ರಯ್ಯ, ಮಧು ಜೇನು ಹನಿ ಎಂಬ ಹೆಸರಿನಲ್ಲಿ ಬೆಂಗಳೂರು, ಮಂಡ್ಯ, ಹಾಸನ, ತುಮಕೂರು, ರಾಮನಗರ ಸೇರಿ ರಾಜ್ಯದ ಹಲವೆಡೆ ಜೇನುತುಪ್ಪ ಸರಬರಾಜು ಮಾಡುತ್ತಿದ್ದಾರೆ. ವಿಶೇಷ ಎಂದರೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಂಡಿದ್ದು, ಹೆಚ್ಚು ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತರಕಾರಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸದೆ, ಎರೆಹುಳು ಮತ್ತು ಕಾಂಪೋಸ್ಟ್ ಗೊಬ್ಬರ ಬಳಸುವುದರಿಂದ ಇವರು ಬೆಳೆಯುವ ತರಕಾರಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಜಮೀನಿನ ಬಳಿಯೇ ಖರೀದಿಸಲು ಜನ ಮುಗಿಬೀಳುತ್ತಾರೆ.

    ಆನ್‌ಲೈನ್ ಮಾರಾಟ

    ಪ್ರತಿವರ್ಷ ಸುಮಾರು 30 ಟನ್ ಮಾವು ಬೆಳೆಯುತ್ತಿದ್ದು ಆನ್‌ಲೈನ್ ಮೂಲಕ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ವ್ಯವಸಾಯಕ್ಕೆ ಹೆಚ್ಚಿನ ಕಾರ್ಮಿಕರನ್ನು ಅವಲಂಬಿಸದ ಇವರಿಗೆ ಪತ್ನಿ ಎಸ್.ಜಿ. ಸುವರ್ಣ ಸಾಥ್ ನೀಡುತ್ತಿದ್ದಾರೆ.

    ಗವಿನಾಗಮಂಗಲದಲ್ಲೊಬ್ಬ ಮಾದರಿ ರೈತ ಕೃಷಿ ಪಂಡಿತ ರಾಮಚಂದ್ರಯ್ಯ
    ಪ್ರಶಸ್ತಿಗಳು

    ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಜಿಲ್ಲಾ ಮಟ್ಟದ ಕೃಷಿಕ ಪ್ರಶಸ್ತಿ, ಹೆಚ್ಚು ರಾಗಿ ಇಳುವರಿಗಾಗಿ ಪ್ರಶಸ್ತಿ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಶಸ್ತಿಗೆ ರಾಮಚಂದ್ರಯ್ಯ ಭಾಜನರಾಗಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಕೃಷಿ ಆಧ್ಯಯನಕ್ಕಾಗಿ ಪ್ರತಿದಿನ ನೂರಾರು ಕೃಷಿ ವಿವಿ ವಿದ್ಯಾರ್ಥಿಗಳು ಇವರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕೃಷಿಯಲ್ಲಿ ಅನುಭವ ಹೊಂದಿರುವ ಇವರಿಗೆ ರೈತರು ಕೃಷಿ ಪಂಡಿತ ಎಂದೇ ಕರೆಯುತ್ತಾರೆ. ಇವರ ಸಾಧನೆಗಳನ್ನು ಗುರುತಿಸಿ ತಾಲೂಕು ಆಡಳಿತ, ಮಾಧ್ಯಮಗಳು ಮತ್ತು ರೈತಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ.

    ವಿದ್ಯಾಬ್ಯಾಸ
    ಜಿ.ಆರ್.ರಾಮಚಂದ್ರಯ್ಯ ಆಟೋ ಮೊಬೈಲ್‌ನಲ್ಲಿ ಡಿಪ್ಲೊಮಾ ಮಾಡಿದ್ದು, 80ರ ದಶಕದಲ್ಲಿ ಕೃಷಿ ಇಲಾಖೆಯಲ್ಲಿ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದರು. ಕರ್ನಾಟಕ ವಿದ್ಯುತ್ ಮಂಡಳಿಯಲ್ಲಿ ಕಿರಿಯ ಸಹಾಯಕ ಹುದ್ದೆಗೆ ಆಯ್ಕೆಯಾದರೂ ಅದನ್ನು ನಿರಾಕರಿಸಿ ಕೃಷಿಯತ್ತ ಮುಖಮಾಡಿ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಜಿಕೆವಿಕೆ, ಚಂದೂರಾಯನಹಳ್ಳಿ ಕೆವಿಕೆ, ತೋಟಗಾರಿಕೆ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ ಸೇರಿ ವಿವಿಧ ಸರ್ಕಾರಿ ಇಲಾಖೆಗಳ ಮಾರ್ಗದರ್ಶನ ಇವರ ಸಾಧನೆಗೆ ಕಾರಣವಾಗಿವೆ.

    ರೈತ ಮನಸ್ಸು ಮಾಡಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಸಾಧನೆ ಮಾಡಬಹುದು. ಇದಕ್ಕೆ ತೋಟಗಾರಿಕೆ, ಕೃಷಿ ಇಲಾಖೆ ಸಹಕಾರ ನೀಡುತ್ತದೆ. ನನ್ನ ಸಾಧನೆಯಲ್ಲಿ ಪತ್ನಿಯ ಸಹಕಾರ ಹೆಚ್ಚಿದೆ. ಕೃಷಿಯಲ್ಲಿ ಮತ್ತಷ್ಟು ಸಾಧಿಸುವ ಹಂಬಲವಿದೆ.
    ಜಿ.ಆರ್.ರಾಮಚಂದ್ರಯ್ಯ, ಪ್ರಗತಿಪರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts