More

    ಹೋರಾಟದ ತವರೂರು ಅರಳಾಳುಸಂದ್ರ ರೈತ ಚಳವಳಿಗೆ ಪ್ರೇರಣೆ, ಶಕ್ತಿ ಕೊಟ್ಟ ಸೌಹಾರ್ದದ ನೆಲೆವೀಡು ಎಂಬುದು ವಿಶೇಷ

    ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

    ಚನ್ನಪಟ್ಟಣ ಎಂದರೆ ಕೇವಲ ಬೊಂಬೆಗಳ ನಾಡಲ್ಲ. ಹೋರಾಟದ ತವರೂರು, ಚಳವಳಿಗಾರರ ಶಕ್ತಿಕೇಂದ್ರ. 80ರ ದಶಕದಲ್ಲಿ ರಾಜ್ಯಾದ್ಯಂತ ಅನ್ನದಾತರಿಗೆ ಹೋರಾಟದ ಕಿಚ್ಚು ಹತ್ತಿಸಿದ ಕರ್ನಾಟಕ ರಾಜ್ಯ ರೈತಸಂಕ್ಕೆ ತಾಲೂಕಿನ ಗ್ರಾಮವೊಂದು ಪ್ರೇರಣೆ ಹಾಗೂ ಬೆನ್ನೆಲುಬು ಎಂಬುದು ವಿಶೇಷ.

    ಹೌದು…, ತಾಲೂಕಿನ ಅರಳಾಳುಸಂದ್ರ ಅಥವಾ ವಿದ್ಯಾಸಂದ್ರ ಗ್ರಾಮವೇ ರೈತ ಚಳವಳಿಗೆ ಪ್ರೇರಣೆ ಹಾಗೂ ಶಕ್ತಿಕೊಟ್ಟ ಗ್ರಾಮವಾಗಿದೆ. ವೈಚಾರಿಕವಾಗಿ ಪ್ರತಿರೋಧಿಸುವ ಮನಸ್ಥಿತಿ, ಮಾನವೀಯ ಮೌಲ್ಯ ಹಾಗೂ ಹೋರಾಟದಿಂದ ಎಲ್ಲವನ್ನೂ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟ ಈ ಗ್ರಾಮಕ್ಕೆ ಸಾಕಷ್ಟು ಇತಿಹಾಸವಿದ್ದು, ಅಂದಿನಿಂದ ಇಂದಿನವರೆಗೆ ಹೋರಾಟದ ಜತೆಗೆ, ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಈ ಗ್ರಾಮ ತಾಲೂಕಿನ ವಿಶೇಷ.

    ಗ್ರಾಮದ ಇತಿಹಾಸ!
    ಅರಳಾಳುಸಂದ್ರ ಅತ್ಯಂತ ಪುರಾತನ ಗ್ರಾಮವಾಗಿದೆ. ನಿಷ್ಪತ್ತಿ (ಗ್ರಾಮದ ಹಿಂದಿನ ಹೆಸರು) ಅಲ್ಲಾಹ್​ ಸಮುಂದರ್​ ಅಥವಾ ಅಲ್ಲಾಸಮುದ್ರ ಎಂಬುದು ಹಿರಿಯರಿಂದ ತಿಳಿದುಬರುತ್ತದೆ. ಲೋಕಸಂಚಾರದಲ್ಲಿದ್ದ ಪ್ರವಾದಿ ಮಹಮ್ಮದ್​ರ ಅನುಯಾಯಿಯೊಬ್ಬರು ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ತಮ್ಮ ಜತೆಗಿದ್ದ ಪಕ್ಷಿಯೊಂದಿಗೆ ಈ ಗ್ರಾಮದ ಮರದ ಬುಡವೊಂದರಲ್ಲಿ ಆಶ್ರಯ ಪಡೆದಿದ್ದರಂತೆ. ಲೋಕಸಂಚಾರಿಗೆ ಬಾಯಾರಿಕೆಯಾದರೂ ಸುತ್ತಮುತ್ತ ಯಾವುದೇ ನೀರಿನ ಮೂಲ ಕಾಣಿಸಲಿಲ್ಲವಂತೆ. ಈ ವೇಳೆ ತನ್ನ ಜತೆಗಿದ್ದ ಪ ಸಮೀಪದಲ್ಲಿ ಗೆದ್ದಲು ತಿನ್ನಲು ತನ್ನ ಕಾಲಿನಿಂದ ನೆಲ ಕೆರೆಯುತ್ತಂತೆ.

    ಈ ವೇಳೆ ಸ್ಥಳದಲ್ಲಿದ್ದವರನ್ನು ಕರೆದ ಲೋಕಸಂಚಾರಿ, ಈ ಜಾಗದಲ್ಲಿ ಸ್ವಲ್ಪ ಮಣ್ಣು ತೆಗೆಯುವಂತೆ ತಿಳಿಸಿದಾಗ ಆಶ್ಚರ್ಯವೆಂಬಂತೆ, ಆ ಸ್ಥಳದಲ್ಲಿ ನೀರು ಒಸರತೊಡಗಿತಂತೆ. ತದನಂತರ, ಆ ಮೌಲ್ವಿ ಮತ್ತು ಪಕ್ಷಿ ನೀರು ಕುಡಿದು ದಣಿವಾರಿಸಿಕೊಂಡು ಅಲ್ಲಿಂದ ಮುಂದೆ ಸಾಗಿದ್ದಾರೆ. ಅಂದಿನಿಂದ ಈ ಊರಿಗೆ ಅಲ್ಲಾಸಮುದ್ರ ಎಂಬ ಹೆಸರು ಬಂತು. ಇದು ಮುಂದೆ ಗ್ರಾಮ್ಯ ಭಾಷೆಯಲ್ಲಿ ಅರಳಾಳುಸಂದ್ರ ಆಗಿರಬಹುದು ಎಂಬ ಕಥೆ ಇದೆ ಎನ್ನುತ್ತಾರೆ ಇತಿಹಾಸತಜ್ಷ ವಿಜಯ್​ ರಾಂಪುರ.

    ಇನ್ನು ಅರಳಾಳುಸಂದ್ರ ಗ್ರಾಮಕ್ಕೆ ವಿದ್ಯಾಸಂದ್ರ ಎಂದೂ ಕರೆಯುತ್ತಾರೆ. ಕಾರಣ ಐವತ್ತು ವರ್ಷಗಳ ಹಿಂದೆಯೇ, ಗ್ರಾಮದ ಪಟೇಲರು ನೀಡಿದ ಭೂಮಿಯಲ್ಲಿ ಶಾಲೆ ಆರಂಭವಾಯಿತು. ಅಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್​ ಹನುಮಂತಯ್ಯನವರು ಈ ಶಾಲೆಯನ್ನು ಉದ್ಘಾಟಿಸಿ, ಈ ಗ್ರಾಮಕ್ಕೆ ವಿದ್ಯಾಸಂದ್ರ ಎಂಬ ಹೆಸರಿಟ್ಟಿದ್ದಾರೆ. ಈ ಶಾಲೆ ಈಗ ಕರ್ನಾಟಕ ಪಬ್ಲಿಕ್​ ಶಾಲೆಯಾಗಿದೆ.

    ರೈತ ಚಳವಳಿಯ ಶಕ್ತಿ ಕೇಂದ್ರ!
    80ರ ದಶಕದಲ್ಲಿ ಇಡೀ ರಾಜ್ಯದಲ್ಲಿ ಹೋರಾಟದ ಕಿಚ್ಚು ಹತ್ತಿಸಿದ ಪೊಫೆಸರ್​ ನಂಜುಂಡಸ್ವಾಮಿ ನೇತೃತ್ವದ ರೈತ ಸಂದ ಉದಯಕ್ಕೆ ಪ್ರೇರಣೆ ಈ ಗ್ರಾಮ ಎಂದರೆ ತಪ್ಪಾಗಲಾರದು. ರೈತಸಂ ಹುಟ್ಟುವ ಮೊದಲೇ ಗ್ರಾಮದಲ್ಲಿ ರೈತಪರ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿತ್ತು. ಅಂದಿಗೆ ಗ್ರಾಮದ ಚೇರ್​ಮನ್​ ಹಾಗೂ ಪ್ರಗತಿಗಾಮಿ ಚಿಂತನೆ ಹೊಂದಿದ್ದ ರೈತನಾಯಕ ದಿವಗಂತ ಸೋಮಲಿಂಗಯ್ಯ ಎಂಬುವವರು ಗೇಣಿದಾರರು ಹಾಗೂ ಬಡರೈತರ ಪರವಾಗಿ ಹೋರಾಟ ನಡೆಸಲು ಗ್ರಾಮದಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಯುವ ರೈತಸಂ ಹುಟ್ಟುಹಾಕಿದ್ದರು.

    ಇದೇವೇಳೆ 1976ರಲ್ಲಿ ಗೇಣಿದಾರ ರೈತನೊಬ್ಬನ ಕೊಲೆಯಾಯಿತು. ಇದು ಇವರ ಚಳವಳಿಯ ದಿಕ್ಕನ್ನೇ ಬದಲಾಯಿಸಿತು. ಇಡೀ ರಾಜ್ಯದಲ್ಲಿ ಭೂ ಮಾಲೀಕರು ಮತ್ತು ಗೇಣಿದಾರ ನಡುವೆ ಕದನ ನಡೆಯುತ್ತಿದ್ದ ಸಮಯದಲ್ಲಿ, ಗ್ರಾಮದಲ್ಲಿ ನಡೆದ ಗೇಣಿದಾರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಲಿಂಗಯ್ಯ ಸೇರಿ ಗ್ರಾಮದ ಇತರ ರೈತ ನಾಯಕರು ಪ್ರೊ. ನಂಜುಡಸ್ವಾಮಿ ಸಂಪರ್ಕಕ್ಕೆ ಹೋದರು. ತದನಂತರ ನಡೆದಿದ್ದೆ ರೋಚಕ ಚಳವಳಿಗಳು. ರಾಜ್ಯದ ಎಷ್ಟೋ ಹೋರಾಟಗಳಿಗೆ ಭೂಮಿಕೆ ಸಿದ್ಧವಾಗುತ್ತಿದ್ದುದೇ ಈ ಗ್ರಾಮದಲ್ಲಿ ಎಂಬುದು ವಿಶೇಷ.

    ಹೋರಾಟಗಳು ಹಾಗೂ ರೈತರ ಹಕ್ಕುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನ ಶಿಬಿರಗಳು ಈ ಗ್ರಾಮದಲ್ಲಿ ನಡೆದಿವೆ. ಪ್ರೊೆಸರ್​ ಸಹ ಭಾಗವಹಿಸಿದ್ದಾರೆ. ಗ್ರಾನೈಟ್​ ಚಳವಳಿ, ನೀರಾ ಚಳವಳಿ ಸೇರಿ ಹಲವಾರು ಚಳುವಳಿಗಳಿಗೆ ಈ ಗ್ರಾಮದ ನಂಟಿದೆ. ಅಂದಿನ ದಿನದಲ್ಲಿ ರೈತಸಂಕ್ಕೆ ಸರ್ಕಾರವೊಂದನ್ನು ಬೀಳಿಸುವ ಮಟ್ಟಿಗೆ ಶಕ್ತಿ ಇತ್ತೆಂದರೆ ಅದರ ಹಿಂದಿನ ಶಕ್ತಿಗಳಲ್ಲಿ ನಮ್ಮ ಗ್ರಾಮವೂ ಒಂದು ಎನ್ನುತ್ತಾರೆ ಹಿರಿಯ ರೈತಪರ ಹೋರಾಟಗಾರ ಸಿ.ಪುಟ್ಟಸ್ವಾಮಿ.

    ಭಾವೈಕ್ಯತೆಯ ನೆಲೆವೀಡು
    ಹೋರಾಟದ ಜತೆಗೆ ಈ ಗ್ರಾಮ ಭಾವೈಕ್ಯತೆಯ ನೆಲೆವೀಡು ಎಂಬುದು ವಿಶೇಷ. ಹಿಂದು-ಮುಸ್ಲಿಂ ಭಾವೈಕ್ಯತೆಯ ಗುಡಿ ಎಂದೇ ಪ್ರಸಿದ್ದವಾದ ಒಂದು ಮಸೀದಿ ಗ್ರಾಮದಲ್ಲಿದೆ. ಮುಸ್ಲಿಂ ಸಂತನೊಬ್ಬ ವಿಶ್ರಮಿಸಿದ್ದ ಕುರುಹಾಗಿ ಇದು ಸ್ಥಾಪನೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ಹಿಂದುಗಳೇ ವಾಸವಾಗಿರುವ ಈ ಗ್ರಾಮದಲ್ಲಿರುವ ಈ ಮಸೀದಿ ಅಥವಾ ದರ್ಗಾ, ಬಾಬಯ್ಯನ ಗುಡಿ, ಬಾಬಯ್ಯನ ಮಠ ಎಂದೇ ಪ್ರಸಿದ್ಧವಾಗಿದೆ. ಉರುಸ್​, ಗಂಧೋತ್ಸವ ಹಾಗೂ ಇನ್ನಿತರ ಹಬ್ಬಗಳನ್ನು ಹಿಂದುಗಳೇ ಮುಂದೆ ನಿಂತು ಆಚರಿಸುವ ಪರಿಪಾಠ ಇಂದಿಗೂ ಕಾಣಬಹುದು.

    ಈ ಬಾಬಯ್ಯನ ಗುಡಿ ಅರಳಾಳುಸಂದ್ರ ಹಾಗೂ ಅಕ್ಕಪಕ್ಕ ಗ್ರಾಮಸ್ಥರ ನಂಬಿಕೆ ಹಾಗೂ ಭಾವನಾತ್ಮಕ ಕೇಂದ್ರವಾಗಿದೆ. ಈ ಬಾಬಯ್ಯನ ಮಠ ನ್ಯಾಯ ಪಂಚಾಯಿತಿಯ ಸ್ಥಳವಾಗಿದ್ದು, ಇದು ಯಾವತ್ತು ಒಂದು ಕೋಮಿಗೆ ಮೀಸಲಾಗಲು ಗ್ರಾಮಸ್ಥರು ಬಿಟ್ಟಿಲ್ಲ. ಪ್ರತಿವರ್ಷ ಹಲವು ಹಬ್ಬಗಳು ಈ ದರ್ಗಾದಲ್ಲಿ ನಡೆಯುತ್ತವೆ. ಅದರಲ್ಲಿ ಬಾಬಯ್ಯನ ಕೊಂಡೋತ್ಸವವೂ ಒಂದು. ಗ್ರಾಮ ಸೇರಿ ಅಕ್ಕಪಕ್ಕದ ಗ್ರಾಮಸ್ಥರು ಕೊಂಡಕ್ಕೆ ಸೌದೆ ತಂದು ಹಾಕುತ್ತಾರೆ. ಈ ಗ್ರಾಮದ ದಲಿತ ಸಮುದಾಯದವರು ತಮ್ಮ ಮನೆಯಿಂದ ವಿಶೇಷವಾಗಿ ಕಳಸ (ಕರಗ) ಹೊತ್ತು ಮೆರವಣಿಗೆ ನಂತರ ಕೊಂಡ ಹಾಯುವುದು ವಿಶೇಷ. ತದನಂತರ ಗ್ರಾಮದ ಮಡಿವಾಳ ಸಮುದಾಯದವರು ಹರಕೆ ಹೊತ್ತವರ ತಲೆ ಮೇಲೆ ಬಟ್ಟೆ ಇಟ್ಟು ಅದರ ಮೇಲೆ ಕೆಂಡ ಇಡುತ್ತಾರೆ. ಬಾಬಯ್ಯನ ಕೊಂಡ ಮಹೋತ್ಸವವನ್ನು ಧರ್ಮಾತೀತ ಹಾಗೂ ಜಾತ್ಯತಿತವಾಗಿ ಆಚರಿಸುವುದು ಈ ಗ್ರಾಮದ ಪ್ರಮುಖ ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts