More

    ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿ: ನಗರದ ಐಜೂರು ವೃತ್ತದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಾರ್ಯಕರ್ತರಿಂದ ಪ್ರತಿಭಟನೆ

    ರಾಮನಗರ:  ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಶುಕ್ರವಾರ ಜಿಲ್ಲಾಧ್ಯಕ್ಷ ಎಚ್.ಬಿ. ಚಂದ್ರಶೇಖರ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
    ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ರೈತರಿಗೆ ಮಾರಣಾಂತಿಕವಾಗಿರುವ ಮೂರು ಕೃಷಿ ಕಾಯ್ದೆಯನ್ನು ರದ್ದುಪಡಿಸಿ ಅಂಗೀಕರಿಸಬೇಕು. ಹೋರಾಟದಲ್ಲಿ ಮಡಿದ ರೈತರಿಗೆ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿದರು.

    ರೈತ ಮುಖಂಡರಾದ ಅನಸೂಯಮ್ಮ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಕಾರ್ಪೋರೇಟ್ ಸಂಸ್ಕೃತಿ ಅನುಸರಿಕೊಂಡು ರೈತರ ಶೋಷಣೆ ನಡೆಸುತ್ತಿವೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಪ್ರತಿಭಟನಾ ನಿರತ ರೈತರ ಮೇಲೆ ದೌರ್ಜನ್ಯ ನಡೆಸಿ ರೈತ ಹೋರಾಟ ಹತ್ತಿಕ್ಕಲು ಹೊರಟಿವೆ ಎಂದು ದೂರಿದರು.

    ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ರೈತರ ಹೋರಾಟಕ್ಕೆ ಬೆಚ್ಚಿ ಕೇಂದ್ರ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಹೇಳಿದೆ. ಆದರೆ ಕೃಷಿ ಕಾಯ್ದೆ ಹಿಂಪಡೆಯಲು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಅಂಗೀಕಾರವಾಗ ಬೇಕು. ಆದರೆ ಈ ಕಾರ್ಯವನ್ನು ಕೇಂದ್ರ ಸರ್ಕಾರ ಇನ್ನೂ ಆರಂಭಿಸಿಲ್ಲ ಎಂದರು.
    ರಾಮನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕೃಷಿ ಉತ್ಪನ್ನಗಳಿಗೆ
    ಬೆಂಬಲ ಬೆಲೆ ನಿಗದಿಯಾಗಬೇಕು. ಕಾರ್ಪೊರೇಟ್ ಕಂಪನಿಗಳು ಚಾಲ್ತಿಯಾದರೆ ಮುಂದಿನ ದಿನಗಳಲ್ಲಿ ಆಹಾರ ಆಭಾವ ಉಂಟಾಗಬಹುದು. ಇದರಿಂದ ರೈತರು ಮತ್ತು ಜನ ಸಾಮಾನ್ಯರು ಬದುಕು ನಡೆಸುವುದು ದುಸ್ತರವಾಗುತ್ತದೆ ಎಂದು ದೂರಿದರು.
    ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿಲ್ಲ. ರೈತರ ಹಿತರಕ್ಷಣೆಗೆ ಬದ್ಧವಾಗಿದೆ ಎಂಬುದನ್ನು ಸಾಬೀತು ಪಡಿಸಲು ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿ ಮಾಡಿ ಇದನ್ನು ಕಾಯ್ದೆ
    ರೂಪದಲ್ಲಿ ಜಾರಿಗೆ ತರಬೇಕು. ಕೇವಲ ಬಾಯಿ ಮಾತಿನಲ್ಲಿ ರೈತರನ್ನು ಸಮಾಧಾನಪಡಿಸುವ ಪ್ರವೃತ್ತಿ ಕೈಬಿಡಬೇಕು ಎಂದು ಒತ್ತಾಯಿಸಿದರು.
    ಜನಶಕ್ತಿ ವೇದಿಕೆ ಅಧ್ಯಕ್ಷ ನೂರ್ ಶ್ರೀಧರ್, ರೈತ ಮುಖಂಡರಾದ ಪಾದ್ರಳ್ಳಿ ಕೃಷ್ಣಪ್ಪ, ರಾಮಣ್ಣ, ಅನಂತರಾಮು, ಗೋವಿಂದರಾಜು, ಶಿವಲಿಂಗಯ್ಯ, ಎಸ್‌ಡಿಪಿಐನ ಜಿಲ್ಲಾ ಪದಾಧಿಕಾರಿಗಳು ಸೇರಿ ಗ್ರಾಮೀಣ ಪ್ರದೇಶದ ರೈತ ಮುಖಂಡರು ಪಾಲ್ಗೊಂಡಿದ್ದರು.
    ಬಸ್ ಇಲ್ಲದೆ ಪರದಾಟ :  ಬೆಳಗ್ಗೆ 11 ಗಂಟೆ ಸುಮಾರಿಗೆ ರಸ್ತೆಗಿಳಿದ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಿದ್ದರಿಂದ ಬೆಂಗಳೂರು ಮತ್ತು ಚನ್ನಪಟ್ಟಣಕ್ಕೆ ಪ್ರತಿ ದಿನ ಸಂಚರಿಸುತ್ತಿದ್ದ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು. ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿ ನಲ್ಲಿ ಮಧ್ಯಾಹ್ನ ಒಂದು ಗಂಟೆಗೆ ನಡೆಯಲಿದ್ದ ಪರೀಕ್ಷೆಗೆ ಹೋಗಬೇಕಾಗಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಇಲ್ಲದೆ ಆತಂಕಕ್ಕೆ ಒಳಗಾಗಿ ಡಿವೈಎಸ್‌ಪಿ ಬಳಿ ಬಂದು ಬಸ್ ವ್ಯವಸ್ಥೆ ಮಾಡುವಂತೆ ತಮ್ಮ ಸಂಕಷ್ಟ ತೆರೆದಿಟ್ಟರು.

    ಶಾಸಕಿ ವಿರುದ್ಧವೂ ಆಕ್ರೋಶ :
    ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅನ್ಯ ಕಾರ್ಯಕ್ರಮದ ನಿಮಿತ್ತ ಐಜೂರು ವೃತ್ತಕ್ಕೆ ಬಂದಾಗ ಪ್ರತಿಭಟನಾಕಾರರು ಅವರ ಕಾರನ್ನು ಸಹ ತಡೆಯಲು ಮುಂದಾದರು. ಕೆಲವರು ರೈತರ ಪರವಾಗಿರುವ ನೀವೇ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು, ಇನ್ನಿತರ ಕೆಲವು ರೈತ ಮುಖಂಡರು ವಾಹನದಲ್ಲಿದ್ದ ಶಾಸಕರನ್ನು ನೋಡಿ ಕಾರು ಹೋಗಲು ದಾರಿ ಮಾಡಿಕೊಟ್ಟರು.

    ರಾಮನಗರ: ರೈತ ವಿರೋಧಿ ಕೃಷಿ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ ಸಮಿತಿ ಕಾರ್ಯಕರ್ತರು, ರೈತರು ರಾಮನಗರದ ಎಪಿಎಂಸಿ ಮಾರುಕಟ್ಟೆ ಮುಂಭಾಗ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2-30 ಗಂಟೆವರೆಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

    ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸುಮಾರು 700ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದು, ಇದರ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ಹೊರಬೇಕು. ಈ ಮೃತ ಪಟ್ಟ ರೈತ ಕುಟುಂಬಗಳಿಗೆ 25 ಲಕ್ಷ ಪರಿಹಾರ ಧನ ನೀಡಬೇಕು. ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

    ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನಾಗಬೇಕು. ರಾಜ್ಯ ಸರ್ಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ದರಖಾಸ್ತು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಸತತ ಮೂರು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು, ಕೇವಲ ಆಂಬುಲೆನ್ಸ್ ವಾಹನಗಳಿಗಷ್ಟೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದರು. ಪ್ರತಿಭಟನಾ ನಿರತ ರೈತರು ಹೆದ್ದಾರಿಯಲ್ಲಿಯೆ ಒಲೆ ಇಟ್ಟು ಅಡುಗೆ ತಯಾರಿಸಿ ಊಟ ಮಾಡಿದರು. ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು, ಕಾರ್ಯದರ್ಶಿ ಪುಟ್ಟಸ್ವಾಮಿ, ಕೃಷ್ಣಪ್ಪ, ತಾಲೂಕು ಅಧ್ಯಕ್ಷರಾದ ಲೋಕೇಶ್, ಶಶಿಕುಮಾರ್, ಚಂದ್ರಶೇಖರ್, ನಾಗರಾಜು, ಪುಟ್ಟಲಿಂಗೇ ಗೌಡ ಇತರರು ಇದ್ದರು.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts