More

    ರಾಮನಗರ ಜಿಲ್ಲೆಯಲ್ಲಿ 7110 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

    ರಾಮನಗರ: ಕರೊನಾ ಲಾಕ್‌ಡೌನ್ ಸಂಕಷ್ಟದ ನಡುವೆ ಕೃಷಿ ಚಟುವಟಿಕೆಗೆ ಹವಾಮಾನ ಗ್ರೀನ್ ಸಿಗ್ನಲ್ ನೀಡಿದ್ದು, ಜಿಲ್ಲೆಯಲ್ಲಿಯೂ ಪೂರ್ವ ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.

    ಪ್ರಮುಖವಾಗಿ ಜಿಲ್ಲೆಯಲ್ಲಿ ರಾಗಿಯನ್ನು ಬೆಳೆಯಲಾಗುತ್ತದೆ. ಆದರೂ, ಪೂರ್ವ ಮುಂಗಾರಿನಲ್ಲಿ ಅಲಸಂದೆ, ಅವರೆ, ಎಳ್ಳು ಸೇರಿ ಇತರ ಬೆಳೆಗಳನ್ನು ಬೆಳೆದು ಮುಂಗಾರಿಗೆ ಮುನ್ನ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಈ ಬಾರಿ ಪೂರ್ವ ಮುಂಗಾರು ಸಹ ರೈತರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದು, ಏ.10ರ ವೇಳೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

    ಉತ್ತಮ ಮಳೆ: ಜಿಲ್ಲೆಯಲ್ಲಿ ಏ.1ರಿಂದ 10ರ ಅಂತ್ಯಕ್ಕೆ ವಾಡಿಕೆಯಂತೆ 8 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 33 ಮಿ.ಮೀ. ಮಳೆಯಾಗಿದ್ದು, ಹೆಚ್ಚುವರಿಯಾಗಿ ಶೇ.298ರಷ್ಟು ಮಳೆಯಾಗಿದೆ. ರಾಮನಗರದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, ಏ.10ವೇಳೆಗೆ ಒಟ್ಟು 48 ಮಿ.ಮೀ. ಮಳೆಯಾಗಿದೆ. ಚನ್ನಪಟ್ಟಣದಲ್ಲಿ 39 ಮಿ.ಮೀ., ಕನಕಪುರದಲ್ಲಿ 30 ಮಿ.ಮೀ., ಮಾಗಡಿಯಲ್ಲಿ 25 ಮಿ.ಮೀ. ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ.
    ಕೃಷಿ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಒಟ್ಟು 7110 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಜಿಲ್ಲೆಯಲ್ಲಿ ಒಟ್ಟು 3500 ಹೆಕ್ಟೇರ್‌ನಲ್ಲಿ ಎಳ್ಳು ಬೆಳೆಯುವ ಗುರಿ ಹೊಂದಲಾಗಿದ್ದು, ಬಿತ್ತನೆ ಕಾರ್ಯ ಏಪ್ರಿಲ್ 2ನೇ ವಾರದಿಂದ ಮೇ ಮೊದಲ ವಾರದವರೆಗೆ ಬೀಳುವ ಮಳೆ ಮೇಲೆ ಅವಲಂಬಿತವಾಗಿದೆ. ಇನ್ನು ತೊಗರಿ 1610 ಹೆಕ್ಟೇರ್, ಅಲಸಂದೆ 1100 ಹೆಕ್ಟೇರ್ ಮತ್ತು ಅವರೆ 900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಕೃಷಿ ಇಲಾಖೆಯದ್ದು.

    ರೈತರು ಎಚ್ಚರ ವಹಿಸಬೇಕು: ಕರೊನಾ ಭೀತಿ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಅಬಾಧಿತವಾಗಿರಬೇಕು ಎನ್ನುವ ಕಾರಣಕ್ಕೆ ಸರ್ಕಾರ ಕೃಷಿ ಕ್ಷೇತ್ರಕ್ಕೆ ಅನುಮತಿ ನೀಡಿದೆ. ಇದರ ಹೊರತಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ರೈತ ಸಮುದಾಯ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಮರೆಯಬಾರದು. ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪೇಟೆಗಳಿಗೆ ಬರುವ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡೇ ಖರೀದಿಗೆ ಮುಂದಾಗಬೇಕು ಮತ್ತು ಕೃಷಿ ಚಟುವಟಿಕೆ ವೇಳೆಯೂ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಬೇಕಿದೆ.

    ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿಗೂ ಕ್ರಮ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬಿತ್ತನೆ ಕಾರ್ಯಕ್ಕೆ ಪೂರಕವಾಗಿ ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. 7110 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಒಟ್ಟು 926 ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದ್ದು, ಇದರ ದಾಸ್ತಾನು ಸಹ ಮಾಡಿಕೊಂಡಿದೆ. ಅಲ್ಲದೆ, ಒಟ್ಟು 2386 ಕ್ವಿಂಟಾಲ್ ರಸಗೊಬ್ಬರ ದಾಸ್ತಾನನ್ನೂ ಮಾಡಿಕೊಂಡಿದೆ.

    ಕಾರ್ಯನಿರ್ವಹಿಸುತ್ತಿರುವ ಆರ್‌ಎಸ್‌ಕೆ: ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಪೂರಕವಾಗಿ ಜಿಲ್ಲೆಯಲ್ಲಿ ಎಲ್ಲ 18 ರೈತ ಸಂಪರ್ಕ ಕೇಂದ್ರಗಳು ಸಹ ಕಾರ್ಯನಿರ್ವಹಿಸುತ್ತಿವೆ. ಕೃಷಿ ಚಟುವಟಿಕೆಗೆ ಬೇಕಾದ ಸಮಗ್ರ ಮಾಹಿತಿ ಹಾಗೂ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಅಲ್ಲದೆ, ಕೃಷಿ ಪರಿಕರಗಳನ್ನು ವಿತರಿಸುವ ಕೃಷಿ ಯಂತ್ರಾಧಾರಿತ ಮಳಿಗೆಗಳು ಮತ್ತು ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಅಂಗಡಿಗಳು ಸಹ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಒಟ್ಟು 118 ಹಸಿರು ಪಾಸ್‌ಗಳನ್ನು ಜಿಲ್ಲೆಯಾದ್ಯಂತ ವಿತರಿಸಲಾಗಿದೆ.

    ಕೃಷಿಯಲ್ಲಿ ನಿರತರಾಗಿರುವ ರೈತರು: ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಈಗಾಗಲೇ ಕೆಲವು ರೈತರು ರಾಗಿ ಸೇರಿ ಇತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ರೈತರು ಕರೊನಾ ಭೀತಿಯಿಂದ ಹೊರಬಂದು ಕೃಷಿ ಚಟುವಟಿಕೆ ತೊಡಗಿರುವುದು ಕಂಡು ಬಂದಿದೆ.

    ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವಂತೆ ಎಲ್ಲ 18 ಆರ್‌ಎಸ್‌ಕೆಗಳು ಕಾರ್ಯನಿರ್ವಹಿಸುತ್ತಿವೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನಿದ್ದು, ಒಟ್ಟು 7110 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

    ಕೆ.ಎಚ್. ರವಿ ಜಂಟಿ ಕೃಷಿ ನಿರ್ದೇಶಕ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts