More

    ಅಯೋಧ್ಯೆ ರಾಮಮಂದಿರದ ಹೈಟೆಕ್​ ಸೆಕ್ಯುರಿಟಿಗೆ ಖರ್ಚಾಗಿರುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದುಗಳು ದಿನಗಣನೆ ಮಾಡುತ್ತಿದ್ದಾರೆ. ಭಾರತದ ಹಿರಿಮೆ ಮತ್ತು ಭವ್ಯ ಸಂಕೇತವಾಗಿರುವ ರಾಮಮಂದಿರ ರಕ್ಷಣೆಗಾಗಿ ಭಾರಿ ಭದ್ರತಾ ವ್ಯವಸ್ಥೆಯನ್ನೇ ಮಾಡಲಾಗುತ್ತಿದೆ.

    24×7 ಹೈಟೆಕ್​ ಭದ್ರತಾ ವ್ಯವಸ್ಥೆ ಅಳವಡಿಸುತ್ತಿರುವುದಾಗಿ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್​ ಮಹಾನಿರ್ದೇಶಕರಾದ ಪ್ರಶಾಂತ್​ ಕುಮಾರ್​ ಮಾಧ್ಯಮಗಳಿಗೆ ನಿನ್ನೆ (ಜ.04) ಮಾಹಿತಿ ನೀಡಿದ್ದಾರೆ.

    ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಫೂಲ್‌ಪ್ರೂಫ್ ಭದ್ರತಾ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದು ದಿನದ 24 ಗಂಟೆಯು ಕೆಲಸ ನಿರ್ವಹಿಸಲಿದೆ. ಈ ಫೂಲ್‌ಪ್ರೂಫ್ ಸೆಕ್ಯುರಿಟಿ ಸಿಸ್ಟಮ್​ ಎಂದಿಗೂ ಫೇಲ್​ ಆಗುವುದಿಲ್ಲ. ದೇವಾಲಯದ ಮೇಲಿನ ದಾಳಿ ಮತ್ತು ಒಳನುಗ್ಗುವಿಕೆಯನ್ನು ತಡೆಯಲು ಈ ಸಿಸ್ಟಮ್​ ಅಳವಡಿಸಲಾಗುತ್ತಿದೆ. ಭದ್ರತಾ ಸಾಧನಗಳನ್ನು ಅಳವಡಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಡಿಜಿ ತಿಳಿಸಿದರು.

    ಉತ್ತರ ಪ್ರದೇಶ ರಾಜ್ಯ ನಿರ್ಮಾಣ ನಿಗಮವು ಭದ್ರತಾ ಸಾಧನಗಳನ್ನು ಅಳವಡಿಸುತ್ತಿದೆ ಎಂದು ಡಿಜಿ ಹೇಳಿದರು. ಈ ಗ್ಯಾಜೆಟ್‌ಗಳು ಕ್ರ್ಯಾಶ್-ರೇಟೆಡ್ ಬೋಲಾರ್ಡ್‌ಗಳನ್ನು ಒಳಗೊಂಡಿದ್ದು, ಸಂಘಟಿತ ವಾಹನ ದಾಳಿಯಿಂದ ಉದ್ದೇಶಿತ ಕಟ್ಟಡಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ರಾಮ ಮಂದಿರದ ಪಥದ ಮೂಲಕ ಹಾದು ಹೋಗುವ ವಾಹನಗಳನ್ನು ಸ್ಕ್ಯಾನ್​ ಮಾಡುತ್ತದೆ.

    ಇನ್ನು ಅಯೋಧ್ಯೆಯ ರಾಮ ಮಂದಿರದ ರಕ್ಷಣೆಗಾಗಿ ಕೃತಕ ಕಣ್ಗಾವಲು ವ್ಯವಸ್ಥೆ ಸಹ ಮಾಡಲಾಗುತ್ತಿದೆ. ರಾಮಮಂದಿರದ ಭದ್ರತೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ ಮತ್ತು ಈ ಪರಿಶೀಲನಾ ಪ್ರಕ್ರಿಯೆಯು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ ಎಂದು ಡಿಜಿ ಹೇಳಿದರು.

    ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಸೇರಿದಂತೆ ಕೆಲವು ಭದ್ರತಾ ಉಪಕರಣಗಳು 11 ಕೋಟಿ ರೂ. ಮೌಲ್ಯದ್ದಾಗಿದೆ. ಅಲ್ಲದೆ, ಪ್ರವೇಶ ನಿಯಂತ್ರಣ ವ್ಯವಸ್ಥೆಗೆ ಸುಮಾರು 8.56 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಇನ್ನೊಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕ್ರ್ಯಾಶ್-ರೇಟೆಡ್ ಬೋಲಾರ್ಡ್‌ಗಳು, ಬುಲೆಟ್ ಪ್ರೂಫ್ ವೆಹಿಕಲ್‌ಗಳು, ಭದ್ರತಾ ಸಿಬ್ಬಂದಿಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳು, ಆ್ಯಂಟಿ ಡ್ರೋನ್ ಸಿಸ್ಟಮ್, ನೈಟ್ ವಿಷನ್ ಸಾಧನಗಳು, ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ ಡಿವೈಸ್‌ಗಳು ಮತ್ತು ಇತರ ಹಲವು ಉಪಕರಣಗಳನ್ನು ರಾಮಮಂದಿರ ಸುತ್ತ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

    ಹೇಗಿರಲಿದೆ ಭದ್ರತೆ?: ಎಐ ಕಣ್ಗಾವಲು ಜೊತೆಗೆ 11,000 ರಾಜ್ಯ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ. 26 ಕಂಪನಿಗಳ ಅರೆಸೇನಾಪಡೆ, 8,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ನಿರ್ಧಾರ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್), ವಿಶೇಷ ಕಾರ್ಯಪಡೆ ತಂಡಗಳು ಮತ್ತು ರಾಷ್ಟ್ರೀಯ ಭದ್ರತಾ ಗಾರ್ಡ್ ಇನ್ನಿತರ ಕೇಂದ್ರೀಯ ಏಜೆನ್ಸಿಗಳನ್ನು ಸಹ ಭದ್ರತಾ ಯೋಜನೆಯ ಭಾಗವಾಗಿರಲಿವೆ. ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇಡಲು ಸ್ಥಳೀಯ ಗುಪ್ತಚರ ಘಟಕದ ಸುಮಾರು 38 ಅಧಿಕಾರಿ ಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ. ಟ್ಯಾಕ್ಸಿ ಚಾಲಕರು, ಇ-ರಿಕ್ಷಾ ಚಾಲಕರು, ಹೋಟೆಲ್ ಸಿಬ್ಬಂದಿ, ಭಿಕ್ಷುಕರು, ಅರ್ಚಕರು, ರಾಮ ಮಂದಿರದ ಸುತ್ತಮುತ್ತಲಿನ ನಿವಾಸಿಗಳಿಂದ ಹಿಡಿದು ಪ್ರತಿಯೊಬ್ಬ ವ್ಯಕ್ತಿಯ ಪರಿಶೀಲನೆ ಮಾಡಲಾಗುತ್ತಿದೆ. ಕಾರ್ಯಕ್ರಮದ ಅತಿಥಿಗಳು, ಸಿಬ್ಬಂದಿಯನ್ನು ಪರಿಶೀಲಿಸಲಾಗುತ್ತಿದೆ.

    ಎಐ ಭದ್ರತಾ ವ್ಯವಸ್ಥೆಯ ಕೆಲಸವೇನು?: ಹೆಚ್ಚಿನ ಜನಸಂದಣಿಯನ್ನು ಸ್ಕಾ್ಯನ್ ಮಾಡುವ, ಅಸಾಮಾನ್ಯ ನಡವಳಿಕೆ ಗಳನ್ನು ಪತ್ತೆಹಚ್ಚುವ, ವಿಶಾಲವಾದ ಡೇಟಾಗಳನ್ನು ವಿಶ್ಲೇಷಿಸುವ, ಸಂಭಾವ್ಯ ಬೆದರಿಕೆ ಗಳನ್ನು ತಕ್ಷಣವೇ ಗುರುತಿಸುವ, ವೈಪರೀತ್ಯಗಳನ್ನು ಪತ್ತೆಹಚ್ಚುವ ಮತ್ತು ಸುಧಾರಿತ ಕಣ್ಗಾವಲು ಎಚ್ಚರಿಕೆಗಳನ್ನು ರವಾನಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಿದೆ.

    ಮಂದಿರದ ವೈಶಿಷ್ಟ್ಯಗಳು: ರಾಮ ಮಂದಿರ ಉದ್ಘಾಟನೆ ದಿನಾಂಕ ಹತ್ತಿರ ವಾಗುತ್ತಿದ್ದಂತೆ, ದೇವಾಲಯದ ಕುರಿತ ಹಲವು ಮಾಹಿತಿಗಳನ್ನು ಟ್ರಸ್ಟ್ ಹಂಚಿಕೊಂಡಿದೆ. ಗುರುವಾರ ಟ್ವೀಟ್ ಮೂಲಕ ಹಲವು ಮಾಹಿತಿಗಳನ್ನು ನೀಡಿದೆ.

    * ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ
    * 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.
    * ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.
    * ಮುಖ್ಯ ಗರ್ಭಗುಡಿಯಲ್ಲಿ ಭಗವಾನ್ ಶ್ರೀರಾಮನ ಬಾಲ್ಯದ ರೂಪ (ಬಾಲರಾಮ) ವಿಗ್ರಹ, ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.
    * ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪ ಎಂಬ ಐದು ಮಂಟಪಗಳು (ಹಾಲ್) ಇವೆ.
    * ದೇವತೆಗಳು, ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಕಂಬ ಮತ್ತು ಗೋಡೆಗಳ ಮೇಲೆ ಕೆತ್ತಲಾಗಿದೆ.
    * ಪೂರ್ವದಿಂದ ಸಿಂಹದ್ವಾರದ ಮೂಲಕ ಮಂದಿರಕ್ಕೆ ಪ್ರವೇಶ. 32 ಮೆಟ್ಟಿಲುಗಳು ಇರಲಿವೆ.
    * ಅಂಗವಿಕಲರು ಮತ್ತು ವೃದ್ಧರ ಅನುಕೂಲಕ್ಕಾಗಿ ಇಳಿಜಾರು ಮತ್ತು ಲಿಫ್ಟ್ ಇವೆ.
    * ಆವರಣದ ನಾಲ್ಕು ಮೂಲೆಗಳಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ ಮತ್ತು ಶಿವನ ಮಂದಿರ ಇದೆ.
    * ಉತ್ತರದಲ್ಲಿ ಅನ್ನಪೂರ್ಣ ಮಂದಿರ, ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ.
    * ಮಂದಿರ ನಿರ್ಮಾಣ ವೇಳೆ ಎಲ್ಲಿಯೂ ಕಬ್ಬಿಣ ಬಳಸುವುದಿಲ್ಲ
    * ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ಮತ್ತು ಸ್ವತಂತ್ರ ವಿದ್ಯುತ್ ಕೇಂದ್ರವನ್ನು ಹೊಂದಿದೆ.
    * ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯಗಳು, ಲಾಕರ್ ಸೌಲಭ್ಯ ಇದೆ
    * ಸ್ನಾನದ ಪ್ರದೇಶ, ವಾಶ್​ರೂಮ್ಳು, ವಾಶ್​ಬಾಸಿನ್, ತೆರೆದ ಟ್ಯಾಪ್​ಗಳು ಇತ್ಯಾದಿಗಳೊಂದಿಗೆ ಪ್ರತ್ಯೇಕ ಬ್ಲಾಕ್ ನಿರ್ಮಾಣ

    ರಾಮ ಮಂದಿರ ಉದ್ಘಾಟನೆಗೆ ಕೆಲವೇ ವಾರಗಳು ಬಾಕಿ ಇರುವಾಗಲೇ QR​ ಕೋಡ್​ ವಂಚಕರ ಜಾಲ ಬಯಲು!

    ರಾಮ ಮಂದಿರಕ್ಕೆ ಕೃತಕ ಬುದ್ಧಿಮತ್ತೆ ಭದ್ರತೆ; ಅನುಮಾನಾಸ್ಪದ ಚಟುವಟಿಕೆ ಮೇಲೆ ಹದ್ದಿನ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts