More

    ರಾಮ ಮಂದಿರ ಉದ್ಘಾಟನೆಗೆ ಕೆಲವೇ ವಾರಗಳು ಬಾಕಿ ಇರುವಾಗಲೇ QR​ ಕೋಡ್​ ವಂಚಕರ ಜಾಲ ಬಯಲು!

    ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ವಾರಗಳು ಬಾಕಿ ಇರುವಾಗಲೇ ಮಂದಿರ ನಿರ್ಮಾಣದ ಹೆಸರಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಜಾಲವೊಂದು ವಂಚನೆಗೆ ಇಳಿದಿರುವ ಪ್ರಕರಣ ಬೆಳಕಿಗೆ ಬಂದಿದೆ.

    ವಂಚಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದು ಪರಿಷತ್ (ವಿಎಚ್​ಪಿ)​ ಆಗ್ರಹಿಸಿದೆ. ಅಲ್ಲದೆ, ವಂಚನೆಯ ಜಾಲಕ್ಕೆ ಸಿಲುಕದಿರಿ ಎಂದು ತನ್ನ ಸಾಮಾಜಿಕ ಜಾಲತಾಣ ವೇದಿಕೆ ಮೂಲಕ ಜನರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

    ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಅಯೋಧ್ಯೆ, ಉತ್ತರ ಪ್ರದೇಶ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯೊಂದನ್ನು ತೆರೆಯಲಾಗಿದೆ. ಈ ಪೇಜ್​ನಲ್ಲಿ ಕ್ಯೂಆರ್​ ಕೋಡ್​ ಸಹ ಇದ್ದು, ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ನೀಡುವಂತೆ ಜನರ ಬಳಿ ಕೋರಲಾಗಿದೆ ಎಂದು ವಿಎಚ್​ಪಿ ವಕ್ತಾರ ವಿನೋದ್​ ಬನ್ಸಾಲ್​ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

    Ram Mandir

    ಈ ವಿಚಾರವನ್ನು ಕೇಂದ್ರ ಮತ್ತು ರಾಜ್ಯ ಗೃಹ ಸಚಿವಾಲಯ ಹಾಗೂ ಪೊಲೀಸ್​ ಇಲಾಖೆಗೆ ತಿಳಿಸಲಾಗಿದೆ ಎಂದು ಬನ್ಸಾಲ್​ ಮಾಹಿತಿ ನೀಡಿದರು. ಅಲ್ಲದೆ, ವಂಚಕರ ಜತೆ ವಿಎಚ್​ಪಿ ಸದಸ್ಯ ದೂರವಾಣಿ ಮೂಲಕ ಮಾತನಾಡಿದ್ದು, ರಾಮ ಮಂದಿರ ಹೆಸರಲ್ಲಿ ದೇಣಿಗೆ ಸ್ವೀಕಾರ ಮಾಡುತ್ತಿರುವುದು ಬಯಲಾಗಿದೆ. ನಿಮ್ಮ ಕೈಲಾದಷ್ಟು ನೆರವು ನೀಡಿ. ನಿಮ್ಮ ಹೆಸರು ಮತ್ತು ನಂಬರ್​ ಡೈರಿಯಲ್ಲಿ ಮುದ್ರಿಸಲಾಗುವುದು. ರಾಮ ಮಂದಿರ ಪೂರ್ಣಗೊಂಡ ಬಳಿಕ ಎಲ್ಲರನ್ನೂ ಅಯೋಧ್ಯೆಗೆ ಆಹ್ವಾನಿಸಲಾಗುವುದು. ನಾನು ಅಯೋಧ್ಯೆಯಿಂದ ಮಾತನಾಡುತ್ತಿದ್ದೇನೆ ಎಂದು ವಂಚಕನೊಬ್ಬ ಹೇಳಿದ್ದಾನೆ.

    ಮುಸ್ಲಿಂ ಸಮುದಾಯ ಮತ್ತು ಹಿಂದು ಸಮುದಾಯದ ನಡುವೆ ಹೋರಾಟ ನಡೆಯುತ್ತಿರುವುದು ನಿಮಗೆ ತಿಳಿದಿದೆ. ಮುಸ್ಲಿಂ ಸಮುದಾಯವು ಅವರ ದೇವಾಲಯವನ್ನು ನಿರ್ಮಿಸಲು ಬಿಡುತ್ತಿಲ್ಲ, ಆದ್ದರಿಂದ ಅವರು ತಮ್ಮ ದೇವಾಲಯ ನಿರ್ಮಾಣಕ್ಕೆ ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ವಂಚಕ ಹೇಳಿದ್ದಾನೆ.

    ರಾಮಮಂದಿರದ ಹೆಸರಿನಲ್ಲಿ ಜನರನ್ನು ವಂಚಿಸುವ ಯತ್ನಗಳ ಬಗ್ಗೆ ಇತ್ತೀಚೆಗೆ ತಮಗೆ ಮಾಹಿತಿ ಬಂದಿದೆ ಎಂದು ವಿಎಚ್‌ಪಿ ವಿಡಿಯೋ ಸಂದೇಶದ ಮೂಲಕ ಎಚ್ಚರಿಸಿದೆ.

    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನ್ಯಾಸ್, ನಿಧಿ ಸಂಗ್ರಹಿಸಲು ಯಾರಿಗೂ ಅಧಿಕಾರ ನೀಡಿಲ್ಲ. ನಾನು ಗೃಹ ಸಚಿವಾಲಯ, ಉತ್ತರ ಪ್ರದೇಶ ಡಿಜಿಪಿ ಮತ್ತು ದೆಹಲಿಯ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಜನರು ಇಂತಹ ವಂಚನೆಗಳಿಗೆ ಬಲಿಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಜನರು ಕೂಡ ಎಚ್ಚರಿಕೆಯಿಂದ ಇರಬೇಕು. ನಾವು ಯಾವುದೇ ದೇಣಿಗೆಯನ್ನು ಸ್ವೀಕರಿಸುತ್ತಿಲ್ಲ ಎಂದು ಬನ್ಸಾಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

    ಅಯೋಧ್ಯೆಗೆ 1,000 ವಿಶೇಷ ರೈಲುಗಳ ಓಡಾಟ
    ಅಯೋಧ್ಯೆಯಲ್ಲಿ ನೂತನವಾಗಿ ನಿರ್ವಿುಸಲಾಗಿರುವ ರಾಮ ಮಂದಿರ ಉದ್ಘಾಟನೆಯ ಮೊದಲ 100 ದಿನ ದೇಶದ ನಾನಾ ಭಾಗಗಳಿಂದ 1,000ಕ್ಕೂ ಅಧಿಕ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಒಂದು ದಿನದ ನಂತರ ಅಂದರೆ 2024ರ ಜನವರಿ 23ರಂದು ಮಂದಿರವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ. ಯಾತ್ರಿಗಳು ನಗರಕ್ಕೆ ಬಂದು ವಾಪಸ್ ಹೋಗಲು ಅನುಕೂಲವಾಗುವಂತೆ ಜನವರಿ 19ರಿಂದಲೇ ಈ ರೈಲುಗಳು ಕಾರ್ಯಾಚರಿಸಲಿವೆ. ದೆಹಲಿ, ಮುಂಬಯಿ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತಾ, ನಾಗ್ಪುರ, ಲಖನೌ ಮತ್ತು ಜಮ್ಮು ಸಹಿತ ಎಲ್ಲ ವಲಯಗಳು ಹಾಗೂ ನಾನಾ ನಗರಗಳೊಂದಿಗೆ ಈ ರೈಲುಗಳು ಅಯೋಧ್ಯೆಯನ್ನು ಸಂಪರ್ಕಿಸಲಿವೆ. (ಏಜೆನ್ಸೀಸ್​)

    ರಾಮಮಂದಿರ ಗರ್ಭಗುಡಿಯ 18 ಬಾಗಿಲುಗಳಿಗೆ ಚಿನ್ನದ ಲೇಪನ! ಅಯೋಧ್ಯೆಗೆ 1,000 ರೈಲುಗಳ ಓಡಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts