More

    ರಾಜ್ಯ ಕಾಂಗ್ರೆಸ್​ನಲ್ಲಿ ಶುರುವಾಗಿದೆ ಪಾದಯಾತ್ರೆ ಮೇನಿಯಾ: ಮತ್ತೆ ಹಲವು ಕಡೆಯಿಂದ ಯಾತ್ರೆಗೆ ಬೇಡಿಕೆ..

    ಕಾರ್ಯಾಧ್ಯಕ್ಷರ ವಿಶೇಷ ಆಸಕ್ತಿ | ಹೊಸ ಚೈತನ್ಯ ಮೂಡಿಸಿದ ಮೇಕೆದಾಟು

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಮುಖಂಡರಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯ ವಿಷಯ ಇಟ್ಟುಕೊಂಡು ಪಾದಯಾತ್ರೆ ಮಾಡಬಹುದೆಂಬ ಆಸೆ ಅನೇಕ ಮುಖಂಡರಲ್ಲಿ ಹುಟ್ಟಿಕೊಂಡಿದೆ.

    ಪಾದಯಾತ್ರೆ ಆಯೋಜನೆ ಅಷ್ಟು ಸಲೀಸಲ್ಲ ಮತ್ತು ಪ್ರಮುಖ ನಾಯಕರು ಬಾರದೇ ಆ ಪ್ರಯತ್ನಕ್ಕೆ ಅಷ್ಟು ಫಲ ಸಿಗುವುದಿಲ್ಲ ಎಂಬ ಅರಿವಿದ್ದರೂ ಪಾದಯಾತ್ರೆ ಕುರಿತು ಚರ್ಚೆ ನಡೆಸಿರುವ ಕುತೂಹಲದ ಬೆಳವಣಿಗೆ ನಡೆದಿದೆ.

    ಕಾಂಗ್ರೆಸ್ ಪಾದಯಾತ್ರೆಗೆ ಇತಿಹಾಸ ಸಾಕಷ್ಟಿವೆ. ಇತ್ತೀಚಿನ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ್ದು ಬಳ್ಳಾರಿ ಕಡೆಗಿನ 300 ಕಿಲೋಮೀಟರ್ ಪಾದಯಾತ್ರೆ. ಬಳಿಕ ನಡೆದ ಹೊಸಪೇಟೆಯಿಂದ ಕೂಡಲ ಸಂಗಮದ ವರೆಗೆ 126 ಕಿಮೀ ಪಾದಯಾತ್ರೆ, ಇತ್ತೀಚೆಗೆ ಅರ್ಧಕ್ಕೆ ಮೊಟಕಾದ ಮೇಕೆದಾಟು ಪಾದಯಾತ್ರೆ. ಬಳ್ಳಾರಿ ಪಾದಯಾತ್ರೆ ಅಧಿಕಾರದ ಫಸಲು ತಂದುಕೊಟ್ಟಿತ್ತು. ಕೃಷ್ಣೆಯ ಕಡೆಗಿನ ನಡೆಗೆ ನಿರೀಕ್ಷಿತ ಲಾಭ ತಂದುಕೊಡಲಿಲ್ಲ. ಆದರೆ ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ಮೊಟಕಾದರೂ ದೊಡ್ಡ ಸದ್ದು ಮಾಡಿದೆ. ಪಕ್ಷದ ನಾಯಕರು ಒಟ್ಟಾಗಿ ಸೇರಿದರು, ಸಣ್ಣಪುಟ್ಟ ಮುಖಂಡರನ್ನು ಒಟ್ಟು ಮಾಡಿತು, ರಾಜ್ಯದ ಜನರ ಗಮನ ಸೆಳೆಯಿತು, ಹೈಕಮಾಂಡ್ ಕೂಡ ಆಸಕ್ತಿ ವಹಿಸಿತ್ತು. ಇದೇ ಕಾರಣಕ್ಕೆ ತಮ್ಮ ಭಾಗದಲ್ಲಿ ರಾಜಕೀಯವಾಗಿ ಶಕ್ತಿವಂತರಾಗಲು ಪಾದಯಾತ್ರೆ ಮಾಡಬೇಕೆಂದು ಪ್ರಾದೇಶಿಕವಾಗಿ ಗುರುತಿಸಿಕೊಂಡಿರುವ ಕೆಲವು ನಾಯಕರು ಚರ್ಚೆ ನಡೆಸಿದ್ದಾರೆ.

    ಮೇಕೆದಾಟು ಪಾದಯಾತ್ರೆಯನ್ನು ಮುಂದುವರಿಸಬೇಕಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಉತ್ಸುಕರಾಗಿದ್ದಾರೆ. ರಾಮನಗರದಿಂದ ಬೆಂಗಳೂರಿನ 18-20 ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುವಂತೆ ಪಾದಯಾತ್ರೆ ರೂಪುರೇಷೆ ಬದಲಿಸುವ ಬಗ್ಗೆಯೂ ಚರ್ಚೆ ನಡೆದಿದೆ.

    ಅದೇ ರೀತಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೆಲವು ತೀರ್ಮಾನ ಕೈಗೊಂಡು ಆಡಳಿತ ಪಕ್ಷ ಚುನಾವಣೆ ವೇಳೆ ರಾಜಕೀಯ ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನಾವು ಪಾದಯಾತ್ರೆ ಮಾಡಿದರೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ಅದರ ಕ್ರೆಡಿಟ್ ನಮ್ಮ ಪಕ್ಷ ಪಡೆಯಬಹುದು. ಹೀಗಾಗಿ ಪಾದಯಾತ್ರೆಯೋ ಅಥವಾ ದೊಡ್ಡ ಮಟ್ಟದ ಹೋರಾಟವೋ ಯಾವುದಾದರೊಂದು ತುರ್ತು ಅಗತ್ಯ ಇದೆ ಎಂದು ಕೃಷ್ಣ ನದಿ ತೀರದ ಶಾಸಕರು ತಮ್ಮ ಪಕ್ಷದ ನಾಯಕರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.

    ಮಹದಾಯಿ ವಿಷಯದಲ್ಲೂ ಪಾದಯಾತ್ರೆ ನಡೆಸುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರೇ ಆಸಕ್ತಿ ತೋರಿಸಿದ್ದಾರೆ. ಮಹದಾಯಿ ಯೋಜನೆಗೆ ಒತ್ತಾಯಿಸಿ ನರಗುಂದದಿಂದ ಮಹದಾಯಿ ಉಗಮ ಸ್ಥಾನವಾದ ಕಣಕುಂಬಿವರೆಗೆ ಪಾದಯಾತ್ರೆ ನಡೆಸಲು ಯೋಜನೆ ರೂಪಿಸುತ್ತಿದೆ. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಹೊಸ ವರ್ಚಸ್ಸು ನೀಡುವ ಇರಾದೆ ಸತೀಶ್ ಜಾರಕಿಹೊಳಿ ಅವರಿಗಿದೆ.

    ಕಲ್ಯಾಣ ಕರ್ನಾಟಕ ಭಾಗಕ್ಕೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂಬ ವಿಷಯ ಇಟ್ಟುಕೊಂಡು ಕೆಪಿಸಿಸಿಯ ಮತ್ತೊಬ್ಬ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಪಾದಯಾತ್ರೆಗೆ ಸಜ್ಜಾಗುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ಕಲ್ಯಾಣ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂದು ಆ ಭಾಗದ ಜನರಿಗೆ ತಿಳಿಸುವ ಉದ್ದೇಶವಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಎಲ್ಲರಿಗೂ ಬೇಕು ಸಿದ್ದು-ಡಿಕೆಶಿ

    ಪಾದಯಾತ್ರೆ ನಡೆಸುವ ಬಗ್ಗೆ ನಾಲ್ಕೈದು ಬೇಡಿಕೆ ಪಕ್ಷದ ಮುಂದಿದೆ. ಆದರೆ, ಎಲ್ಲ ಕಡೆಯೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಉಪಸ್ಥಿತಿ ಇರಬೇಕೆಂದು ಬಯಸಲಾಗುತ್ತಿದೆ. ಈಗಾಗಲೆ ಮೇಕೆದಾಟು ಪಾದಯಾತ್ರೆಯಿಂದ ದೈಹಿಕವಾಗಿ ಬಳಲಿರುವ ಈ ಇಬ್ಬರೂ ಉಳಿದ ಕಡೆ ಪಾದಯಾತ್ರೆಗೆ ಬರುತ್ತೇವೆಂದು ಒಪ್ಪಿಕೊಳ್ಳುವುದು ಅನುಮಾನ. ಈ ಇಬ್ಬರು ಬಾರದೇ ಹೋದಲ್ಲಿ ಸ್ಥಳೀಯ ಮಟ್ಟದ ಕಾರ್ಯಕ್ರಮವಾಗಿ ಮುಗಿದುಹೋಗುವ ಅಳುಕು ಪಾದಯಾತ್ರೆಯ ಕನಸು ಹೊತ್ತವರದಾಗಿದೆ.

    ಬಿಜೆಪಿ ಲೇವಡಿ

    ಕಾಂಗ್ರೆಸ್​ನ ಪಾದಯಾತ್ರೆ ಆಕಾಂಕ್ಷೆಗೆ ಬಿಜೆಪಿ ಲೇವಡಿ ಮಾಡಿದೆ. ಖಂಡ್ರೆಯವರೇ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿರೋಧಿ ಪಾದಯಾತ್ರೆಯನ್ನು ನೀವು ಮಲ್ಲಿಕಾರ್ಜುನ ಖರ್ಗೆ ನಿವಾಸದಿಂದ ಆರಂಭಿಸಿ. ವಾಸ್ತವದಲ್ಲಿ ಖರ್ಗೆಯೇ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದಶಕಗಳ ಅಡ್ಡಿ ಎಂದು ಬಿಜೆಪಿ ಹಾಸ್ಯ ಮಾಡಿದೆ.

    ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯ ಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಅವರ ಕುಟುಂಬ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುದೀರ್ಘ ಅವಧಿಗೆ ಅಧಿಕಾರ ಅನುಭವಿಸಿದ್ದಾರೆ. ಇವರಿಬ್ಬರ ವೈಯಕ್ತಿಕ ಸಂಪತ್ತು ವೃದ್ದಿಗೂ ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಗೂ ಸಾಮ್ಯತೆ ಇದೆ ಎಂದು ಕುಟುಕಿದೆ.

    ರವಿ ಚನ್ನಣ್ಣವರ್​ ವಿರುದ್ಧ ಭ್ರಷ್ಟಾಚಾರ ಆರೋಪ; ತಾಯಿ-ತಂದೆ ಹೇಳಿದ್ದೇನು?

    34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts