

ಗಾಜಿಯಾಬಾದ್: ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸಲಾಗುತ್ತಿರುವ ಹೋರಾಟದಲ್ಲಿ ರೈತ ಸಂಘಟನೆಯ ನಾಯಕರೊಬ್ಬರು ಇತರ ಹೋರಾಟಗಾರನ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ಆತ ಬೇರೆಡೆಯಿಂದ ಬಂದಿದ್ದು, ಅಹಿತಕರ ಘಟನೆ ನಡೆಸುವ ಉದ್ದೇಶ ಹೊಂದಿದ್ದ ಎಂದು ಅವರು ಹೇಳಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ನ ವಕ್ತಾರ ರಾಕೇಶ್ ಟಿಕೈಟ್ ಇನ್ನೊಬ್ಬ ಹೋರಾಟಗಾರನ ಕೆನ್ನೆಗೆ ಹೊಡೆದಿದ್ದಾರೆ. ಮಾಧ್ಯಮದ ಎದುರಲ್ಲೇ ಈ ರೀತಿ ಹಲ್ಲೆ ಮಾಡಲಾಗಿದೆ. "ಅವರು ನಮ್ಮ ಸಂಘಟನೆಯ ಸದಸ್ಯರಲ್ಲ. ಕೋಲು ಹಿಡಿದುಕೊಂಡು ಸುಮ್ಮನೆ ಓಡಾಡುತ್ತಿದ್ದರು. ಮಾಧ್ಯಮಗಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರು. ಕೆಟ್ಟ ಉದ್ದೇಶದಿಂದ ಇಲ್ಲಿಗೆ ಬಂದವರೆಲ್ಲರೂ ಹೊರಹೋಗಬೇಕು. ಅದೇ ಕಾರಣಕ್ಕೆ ಅವರಿಗೆ ಹೊಡೆದೆ" ಎಂದು ಟಿಕೈಟ್ ಹೇಳಿದರು.
ಗಾಜಿಪುರ ಗಡಿಯಲ್ಲಿರುವ ರೈತರು ಶೀಘ್ರವೇ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡುವಂತೆ ಘಾಜಿಬಾದ್ ಆಡಳಿತ ನೋಟಿಸ್ ನೀಡಿದೆ. ಹಿಂಸಾತ್ಮಕವಾಗಿ ನಡೆದುಕೊಂಡವರ ಹೆಸರಿನ ಪಟ್ಟಿ ಕೊಡುವಂತೆ ಕೋರಿ ಸಂಘಟನೆಗಳಿಗೂ ನೋಟಿಸ್ ನೀಡಲಾಗಿದೆ. ಮೂರು ದಿನಗಳೊಳಗೆ ಪ್ರತಿಕ್ರಿಯಿಸಲು ತಿಳಿಸಲಾಗಿದೆ. ಇನ್ನೊಂದತ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರವು ರಾಪಿಡ್ ಆಕ್ಷನ್ ಫೋರ್ಸ್‌ನ (ಆರ್‌ಎಎಫ್) ನಾಲ್ಕು ಕಂಪನಿಗಳ ನಿಯೋಜನಾ ಅವಧಿಯನ್ನು ಫೆಬ್ರವರಿ 4 ರವರೆಗೆ ವಿಸ್ತರಿಸಿದೆ. (ಏಜೆನ್ಸೀಸ್)