More

    ರಾಜ್ಯಸಭಾ ಸದಸ್ಯ ಎಂ.ಪಿ. ವೀರೇಂದ್ರ ಕುಮಾರ್​ ನಿಧನ

    ನವದೆಹಲಿ: ರಾಜ್ಯಸಭೆ ಸದಸ್ಯ ಹಾಗೂ ಲೋಕತಾಂತ್ರಿಕ ಜನತಾದಳದ (ಎಲ್​ಜೆಡಿ) ಮುಖಂಡ ಎಂ.ಪಿ. ವೀರೇಂದ್ರ ಕುಮಾರ್​ (83) ಹೃದಯಾಘಾತಕ್ಕೆ ಒಳಗಾಗಿ ಗುರುವಾರ ತಡರಾತ್ರಿ ನಿಧನರಾಗಿದ್ದಾರೆ. ಕೇಂದ್ರದ ವಿತ್ತ ಖಾತೆಯ ಮಾಜಿ ಸಹಾಯಕ ಸಚಿವರಾಗಿದ್ದ ಅವರು ಮಾತೃಭೂಮಿ ಮುದ್ರಣ ಮಾಧ್ಯಮ ಸಮೂಹದ ಮ್ಯಾನೇಜಿಂಗ್​ ಡೈರೆಕ್ಟರ್​ (ಎಂಡಿ) ಆಗಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಪತ್ನಿ ಉಷಾ, ಪುತ್ರಿಯರಾದ ಆಶಾ, ನಿಶಾ ಮತ್ತು ಜಯಲಕ್ಷ್ಮಿ, ಪುತ್ರ ಮಾಜಿ ಶಾಸಕ ಹಾಗೂ ಎಲ್​ಜೆಡಿಯ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ. ಶ್ರೇಯಾಮ್ಸ್​ ಕುಮಾರ್​ ಇದ್ದಾರೆ.

    ಕೇರಳ ಮೂಲದವರು: ಎಂ.ಪಿ. ವೀರೇಂದ್ರ ಕುಮಾರ್​ ಅವರು ಸಾಮಾಜವಾದಿ ನಾಯಕ ಎಂ.ಕೆ. ಪದ್ಮಪ್ರಭಾ ಗೌಡರ್​ ಮತ್ತು ಮರುದೇವಿ ಅವ್ವ ಅವರ ಪುತ್ರರಾಗಿದ್ದರು. ಕೇರಳದ ವಯನಾಡ್​ ಜಿಲ್ಲೆಯ ಕಾಲ್​ಪೆಟ್ಟಾದಲ್ಲಿ ಜನಿಸಿದ್ದರು. ಚೆನ್ನೈನ ವಿವೇಕಾನಂದ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಅಮೆರಿಕದ ಓಹಿಯೋದ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದರು.

    ಇದನ್ನೂ ಓದಿ: ಹುಟ್ಟುಹಬ್ಬ ದಿನದಂದು ರೆಬೆಲ್ ಸ್ಟಾರ್ ನೆನಪುಗಳು: ಉಳಿದವರು ಕಂಡಂತೆ…

    ಆಗಿನ ಸಮಾಜವಾದಿ ಪಕ್ಷದ ನಾಯಕ ಜಯಪ್ರಕಾಶ್​ ನಾರಾಯಣ್​ ಅವರಿಂದ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದ ಇವರು, 1968ರಿಂದ 1970ರ ನಡುವೆ ಸಂಯುಕ್ತ ಸಮಾಜವಾದಿ ಪಕ್ಷದ ರಾಷ್ಟ್ರೀಯ ಖಚಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಇವರು ಜನತಾಪಾರ್ಟಿ ಸೇರಿದ್ದಲ್ಲದೆ, ನಂತರ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು.

    ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವೀರೇಂದ್ರ ಕುಮಾರ್​ ಜೈಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಇವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. 1987ರಲ್ಲಿ ಶಾಸಕರಾಗಿ ಆಯ್ಕೆಯಾದ ಇವರು ಇ.ಕೆ. ನಯನಾರ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡು ಅರಣ್ಯ ಸಚಿವಾಗಿ ಕೆಲಸ ಮಾಡಿದ್ದರು. ಅರಣ್ಯನಾಶದ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಿ, ಆ ಬಗ್ಗೆ ಆದೇಶ ಹೊರಡಿಸಿದ್ದ ಇವರು 48 ಗಂಟೆಗಳಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.

    1996ರಲ್ಲಿ ಕೋಳಿಕೋಡ್​ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಇವರು ವಿತ್ತ ಖಾತೆಯ ಸಹಾಯಕ ಸಚಿವರಾಗಿದ್ದರು. ಬಳಿಕ ಎಚ್​.ಡಿ. ದೇವೇಗೌಡ ಹಾಗೂ ಐ.ಕೆ. ಗುಜ್ರಾಲ್​ ನೇತೃತ್ವದ ಯುನೈಟೆಡ್​ ಫ್ರಂಟ್​ ಸರ್ಕಾರಗಳಲ್ಲಿ ಕಾರ್ಮಿಕ ಖಾತೆಯ ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಪುನಃ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ, 2016ರ ನಂತರದಿಂದ ಇವರು ರಾಜ್ಯಸಭೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಹುಟ್ಟುಹಬ್ಬದಂದು ರೆಬೆಲ್ ಸ್ಟಾರ್ ನೆನಪುಗಳು: ಕನ್ನಡಿ ಮುಂದೆ ನಿಂತ ಹಾಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts