More

    ಸಹಕಾರನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸದೆ ಆಪತ್ತು

    ಬೆಂಗಳೂರು: ಮಹಾನಗರದಲ್ಲಿ ಸೋಮವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗುಪ್ರದೇಶಗಳ ಜನರು ಆತಂಕಕ್ಕೆ ಒಳಗಾದರೆ, ಮೇಲ್ಸೇತುವೆ/ಕೆಳಸೇತುವೆಗಳ ಬಳಿ ಮಳೆನೀರು ಸಂಗ್ರಹಗೊಂಡು ಸಮಸ್ಯೆಯಾಗಿದೆ. ಅದರಲ್ಲೂ ಏರ್‌ಪೋರ್ಟ್ ರಸ್ತೆಯ ಸಹಕಾರನಗರದ ಪ್ರವೇಶ ಸ್ಥಳದಲ್ಲೇ ರಾಜಕಾಲುವೆಯ ನೀರು ಮನೆ ಹಾಗೂ ಮಳಿಗೆಗಳಿಗೆ ನುಗ್ಗಿ ಸಮಸ್ಯೆ ಉಂಟಾಗಿದೆ.

    ಸಹಕಾರನಗರದ ಜಿ ಬ್ಲಾಕ್‌ನ ಮೊದಲ ಮೂರು ಅಡ್ಡರಸ್ತೆಗಳು ರಾಜಕಾಲುವೆ ಬಳಿಯೇ ಇವೆ. ಇಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗದೆ ಸುತ್ತಲಿನ ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದೆ. ರಾತ್ರಿ ಮಳೆ ಬಿದ್ದ ಕಾರಣ ಬೇಗನೆ ಮನೆಗೆ ತೆರಳಿದ್ದ ಮಳಿಗೆದಾರರು ಮರುದಿನ ಬೆಳಗ್ಗೆ ಬಂದಾಗ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದನ್ನು ಕಂಡು ಹೌಹಾರಿದರು. ಬಟ್ಟೆ ಅಂಗಡಿಗಳು, ಪೇಂಟ್ ಅಂಗಡಿ, ಕೇಕ್ ಮಳಿಗೆ, ವರ್ಕ್‌ಶಾಪ್, ಬಾರ್, ರೆಸ್ಟೋರೆಂಟ್ ಸಹಿತ 10ಕ್ಕೂ ಹೆಚ್ಚು ಮಳಿಗೆಗಳಲ್ಲಿದ್ದ ವಸ್ತುಗಳು ನೀರು ಪಾಲಾಗಿವೆ. ಜತೆಗೆ ಇಷ್ಟೇ ಸಂಖ್ಯೆಯ ವಾಸದ ಮನೆಗಳಿಗೂ ನೀರು ನುಗ್ಗಿ ಅವರೆಲ್ಲ ರಾತ್ರಿಯಿಡಿ ನೀರನ್ನು ಹೊರಹಾಕಲು ಹರಸಾಹಸಪಟ್ಟರು.

    ಈ ವರ್ಷದ ಮಳೆಗಾಲದಲ್ಲಿ ಈ ರೀತಿ ಮೂರು ಬಾರಿ ಸಮಸ್ಯೆಯಾಗಿದೆ. ಪ್ರತಿ ಬಾರಿಯೂ ಪಾಲಿಕೆ ಅಧಿಕಾರಿಗಳು ಅನಾಹತದ ಬಳಿಕ ಸ್ಥಳಪರಿಶೀಲನೆ ನಡೆಸಿ ವಾಪಸಾಗುತ್ತಾರೆಯೆ ಹೊರತು ಈವರೆಗೂ ಪರಿಹಾರ ಸೂಚಿಸಿಲ್ಲ. ರಾಜಕಾಲುವೆ ಒತ್ತುವರಿಯಾಗಿದ್ದು ಅದನ್ನು ತೆರವು ಮಾಡದ ಕಾರಣ ಜೋರು ಮಳೆಯಾದಾಗಲೆಲ್ಲ ಕಾಲುವೆ ತುಂಬಿ ನೀರು ನೇರವಾಗಿ ಮನೆ, ಮಳಿಗೆಯತ್ತ ಹರಿದುಬರುತ್ತಿದೆ. ಈ ಬಗ್ಗೆ ಸ್ಥಳೀಯರು ಪಾಲಿಕೆಯ ವಲಯ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಈತನಕ ಪರಿಹಾರ ಸೂಚಿಸದ ಕಾರಣ ನಮಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಇಲ್ಲಿನ ನಿವಾಸಿಗಳು ಹಾಗೂ ವ್ಯಾಪಾರಿಗಳು ‘ವಿಜಯವಾಣಿ’ ಬಳಿ ಅಳಲು ತೋಡಿಕೊಂಡರು.

    ತೆರವು ಕಾರ್ಯಕ್ಕೆ ಹಿಂದೇಟು:

    ಏರ್‌ಪೋರ್ಟ್ ರಸ್ತೆಯ ಸರ್ವಿಸ್ ರಸ್ತೆಯಿಂದ ಸಹಕಾರನಗರಕ್ಕೆ ಪ್ರವೇಶಿಸುವ ಜಾಗದಲ್ಲಿ ಬೃಹತ್ ರಾಜಕಾಲುವೆ ಹಾದುಹೋಗಿದೆ. ಹೆದ್ದಾರಿಯ ಕೆಳಭಾಗದಲ್ಲಿ 30 ಅಡಿ ಅಗಲ ಇದ್ದರೂ, ಜಿ ಬ್ಲಾಕ್ ಸ್ಥಳದಲ್ಲಿ 10 ಅಡಿಯಷ್ಟು ಮಾತ್ರ ಕಾಲುವೆ ಕುಗ್ಗಿದೆ. ಈ ರಾಜಕಾಲುವೆ ಅಮೃತಹಳ್ಳಿ ಕೆರೆಗೆ ಸಂಪರ್ಕಿಸುವುದಿದ್ದರೂ, ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವು ಮಾಡಿಲ್ಲ. ದಶಕದಿಂದ ಒತ್ತಾಯಿಸುತ್ತಿದ್ದರೂ, ಯಲಹಂಕ ವಲಯ ಅಧಿಕಾರಿಗಳು ಒತ್ತುವರಿದಾರರ ಒತ್ತಡಕ್ಕೆ ಮಣಿದು ತೆರವುಗೊಳಿಸಿಲ್ಲ. ಇದರಿಂದ ಪದೇ ಪದೆ ಅನಾಹುತ ಸಂಭವಿಸುತ್ತಿದೆ. ಪಾಲಿಕೆಯ ಕೇಂದ್ರ ಕಚೇರಿಗೂ ದೂರು ನೀಡಿದ್ದರೂ, ಅಧಿಕಾರಿ ವರ್ಗ ಮೌನಕ್ಕೆ ಶರಣರಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಅನಾಹುತ ಸಂಭವಿಸದಂತೆ ಪಾಲಿಕೆ ಮುನ್ನೆಚ್ಚರಿಕೆ ವಹಿಸಿದೆ. ಸಮಸ್ಯೆಯಾದಲ್ಲಿ ಕ್ಷಿಪ್ರವಾಗಿ ಪರಿಹಾರ ಕೈಗೊಳ್ಳಲು ಕೂಡ ಅಧಿಕಾರಿ, ಸಿಬ್ಬಂದಿಗಳು 24/7 ಮಾದರಿಯಲ್ಲಿ ಸಜ್ಜಾಗಿದ್ದಾರೆ. ಮಳೆಹಾನಿ ಸಂಬಂಧಿತ ಪರಿಹಾರ ಕಾರ್ಯಕ್ಕೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ.
    – ಡಿ.ಕೆ.ಶಿವಕುಮಾರ್, ಡಿಸಿಎಂ

    ದಕ್ಷಿಣ ವಲಯಕ್ಕೆ ನೋಡಲ್ ಅಧಿಕಾರಿ ನಿಯೋಜನೆ
    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನಾಹುತ ತಡೆ ಹಾಗೂ ಜನರಿಗೆ ನೆರವು ನೀಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
    ಮಳೆಯಿಂದ ರಸ್ತೆ ಬದಿಯಲ್ಲಿ ನೀರು ನಿಲ್ಲದಂತೆ, ಮರ ಬಿದ್ದ ಸಮಯದಲ್ಲಿ ಮರದ ರಂಬೆ-ಕೊಂಬೆಗಳು ಕೂಡಲೇ ತೆರವುಗೊಳಿಸಲು, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು, ಶೋಲ್ಡರ್ ಡ್ರೈನ್‌ನಲ್ಲಿರುವ ಹೂಳನ್ನು ತೆಗೆಯುವುದು ಹಾಗೂ ಇನ್ನಿತರ ತುರ್ತು ಮಳೆ ನಿರ್ವಹಣೆ ಮಾಡಲು ಈ ನೋಡಲ್ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಲಿದ್ದಾರೆ.
    ಬೆಸ್ಕಾಂ, ಜಲಮಂಡಳಿ, ಆಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಲು ಆಯಾ ವಿಭಾಗ ವ್ಯಾಪ್ತಿಯಲ್ಲಿನ ಕಾರ್ಯಪಾಲಕ ಅಭಿಯಂತರರು ಹಾಗೂ ಉಪ ವಿಭಾಗ ವ್ಯಾಪ್ತಿಯಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ದಕ್ಷಿಣ ವಲಯ ಜಂಟಿ ಆಯುಕ್ತ ಡಾ. ಕೆ.ಜಗದೀಶ್ ನಾಯ್ಕ ತಿಳಿಸಿದ್ದಾರೆ.

    ಸೋಮವಾರ ಬಿದ್ದ ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ):
    ಯಲಹಂಕ – 147
    ನಾಗಪುರ – 89
    ಜಕ್ಕೂರು – 86
    ನಂದಿನಿ ಲೇಔಟ್ – 85
    ವಿಶ್ವನಾಥ ನಾಗೇನಹಳ್ಳಿ – 79
    ರಾಜಮಹಲ್ ಗುಟ್ಟಹಳ್ಳಿ – 76
    ಗಾಲಿ ಆಂಜನೇಯ ದೇಗುಲ – 75
    ಕೊಟ್ಟಿಗೆಪಾಳ್ಯ – 70
    ಪೀಣ್ಯ ಕೈಗಾರಿಕೆ ಪ್ರದೇಶ – 67
    ಹೊರಮಾವು – 66
    ಹೇರೋಹಳ್ಳಿ – 63
    ಶೆಟ್ಟಿಹಳ್ಳಿ – 60
    ಅಟ್ಟೂರು – 59
    ದಯಾನಂದನಗರ -58
    ಸಂಪಂಗಿರಾಮನಗರ – 53
    ನಾಯಂಡಹಳ್ಳಿ – 51

    2ನೇ ದಿನವೂ ಭಾರಿ ಮಳೆ:
    ನಗರದಲ್ಲಿ ಸತತ ಎರಡನೇ ದಿನವೂ ಭಾರಿ ಮಳೆಯಾಗಿದೆ. ಸೋಮವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದರೂ, ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ 71 ಮಿ.ಮೀ. ಮಳೆಯಾಗಿದ್ದರೆ, ಜಕ್ಕೂರಿನಲ್ಲಿ ಅತ್ಯಧಿಕ 147 ಮಿ.ಮೀ. ಪ್ರಮಾಣದ ವರ್ಷಧಾರೆಯಾಗಿದೆ. ಮಂಗಳವಾರ ರಾತ್ರಿಯೂ ಸರಾಸರಿ 30 ಮಿ.ಮೀ. ಮಳೆಯಾಗಿದೆ. ಪಾಲಿಕೆಯ ಎಂಟೂ ವಲಯ ಹಾಗೂ ಉಪವಿಭಾಗಗಳಲ್ಲಿ 24/7 ಮಾದರಿಯಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts