More

    ರಾಜಸ್ತಾನದ ಹುಡುಗನಿಗೆ ಕನ್ನಡದಲ್ಲಿ 112 ಅಂಕ

    ಸುಭಾಸ ಧೂಪದಹೊಂಡ ಕಾರವಾರ

    ಸಂಜೆಯಾದರೆ ಸಾಕು ಪಾನಿ ಪುರಿ ಮಾರಾಟ ಆತನ ಕಾಯಕ ಆದರೆ, ಬೆಳಗಿನ ಜಾವ, ತಡರಾತ್ರಿ ಓದಿ ಎಸ್​ಎಸ್​ಎಲ್​ಸಿಯಲ್ಲಿ ಶೇ. 75 ರಷ್ಟು ಅಂಕ ಪಡೆಯುವ ಮೂಲಕ ಬಾಲಕ ಸಾಧನೆ ಮಾಡಿದ್ದಾನೆ. ವಿಶೇಷ ಎಂದರೆ ರಾಜಸ್ತಾನ ಮೂಲದ ರಾಜಸ್ತಾನಿ ಮಾತೃಭಾಷೆಯ ಈ ಬಾಲಕನಿಗೆ ಪ್ರಥಮ ಭಾಷೆ ಕನ್ನಡಕ್ಕೆ 125 ಕ್ಕೆ 112 ಅಂಕ ಬಂದಿದೆ.

    ರಾಜಸ್ತಾನ ಸರೋಯಿ ಮೂಲದ ಲಲಿತಕುಮಾರ ಎಚ್. ಗಾಂಚಿ ತಂದೆ ಹಾಕ್ಮಾರಾಮ್ ಕಾರವಾರ ಹಬ್ಬುವಾಡದಲ್ಲಿ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದಾರೆ. ಹಿರಿಯ ಮಗನಾದ ಲಲಿತ್ ಕಾರವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುವ ಜತೆಗೆ ಅವರ ಅಂಗಡಿಯ ಸಂಪೂರ್ಣ ವ್ಯವಹಾರ ನೋಡಿಕೊಳ್ಳುತ್ತಿದ್ದಾನೆ. ತರಗತಿ ಮುಗಿದ ನಂತರ ನೇರವಾಗಿ ಅಂಗಡಿಗೆ ಬರುತ್ತಾನೆ ರಾತ್ರಿ 10ರವರೆಗೂ ಸ್ವತಃ ಪಾನಿಪುರಿ, ಸಮೋಸಾ, ವಡಾ ಮುಂತಾದ ತಿನಿಸುಗಳನ್ನು ಮಾಡಿ ಮಾರಾಟ ಮಾಡುತ್ತಾನೆ. ಲಾಕ್​ಡೌನ್ ಸಮಯದಲ್ಲಿ ಮನೆ, ಮನೆ ತರಕಾರಿ ವ್ಯಾಪಾರ ಪ್ರಾರಂಭಿಸಿದ್ದಾನೆ. ‘ರಾತ್ರಿ 10 ರಿಂದ 12 ಅಥವಾ 1 ಗಂಟೆಯವರೆಗೂ ಓದುತ್ತಿದ್ದೆ. ಬೆಳಗ್ಗೆ ಮತ್ತೆ 4.30ಕ್ಕೆ ಎದ್ದು ಓದುತ್ತಿದ್ದೆ. ಇನ್ನಷ್ಟು ಅಂಕ ಬರುವ ನಿರೀಕ್ಷೆ ಇತ್ತು’ಎನ್ನುತ್ತಾನೆ ಲಲಿತ ಕುಮಾರ.

    ಸವಾಲಿನ ಹಾದಿ: ಲಲಿತಕುಮಾರ 1ನೇ ತರಗತಿ ಸ್ವಂತ ಊರಲ್ಲಿ ಮಾತೃಭಾಷೆಯಲ್ಲಿ ಓದಿದ್ದ. ನಂತರ ತಂದೆ ಉದ್ಯೋಗ ಅರಸಿ ಆಂದ್ರ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿನ ಶಾಲೆಯಲ್ಲಿ ತೆಲಗಿನಲ್ಲಿ 3 ನೇ ತರಗತಿಯವರೆಗೂ ಓದಿದ್ದ. ಆದರೆ, ತಂದೆ ಹಾಕ್ಮಾರಾಮ್ ಕುಟುಂಬ ಸಮೇತ ಆಂಧ್ರ ಬಿಟ್ಟು ಕರ್ನಾಟಕಕ್ಕೆ ಬಂದರು. ಆಗ ಲಲಿತ್ ನಗರದ ಶಾಸಕರ ಮಾದರಿ ಶಾಲೆಯಲ್ಲಿ ಮತ್ತೆ 1 ನೇ ತರಗತಿಯಿಂದ ಓದಿದ್ದ. ಕನ್ನಡಿಗರೂ ನಾಚುವಂತೆ ಆತ ಕನ್ನಡ ಮಾತನಾಡುತ್ತಾನೆ. ‘ನಮಗೆ ಉದ್ಯೋಗ ಕೊಟ್ಟ ನಾಡಿನ ಭಾಷೆಯನ್ನು ನಾವು ಗೌರವಿಸದೇ ಇದ್ದರೆ ಹೇಗೆ’ಎಂಬುದು ಲಲಿತ್​ಕುಮಾರ ಅಭಿಪ್ರಾಯ.

    ಸಹೋದರಿಯೂ ಉತ್ತಮ ಫಲಿತಾಂಶ: ಲಲಿತಕುಮಾರ ಅವರ ಇಬ್ಬರು ಸಹೋದರಿಯರೂ ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಪೂಜಾ ಶೇ. 71.48 ರಷ್ಟು ಅಂಕ ಪಡೆದಿದ್ದು, ಹಿಂದಿಗೆ 100 ಕ್ಕೆ 100, ಕನ್ನಡಕ್ಕೆ 125 ಕ್ಕೆ 107 ಅಂಕ ಪಡೆದಿದ್ದಾಳೆ. ಇನ್ನೊಬ್ಬ ಸಹೋದರಿ ಜಸ್ನಾ ಶೇ. 63 ರಷ್ಟು ಅಂಕ ಪಡೆದಿದ್ದು, ಕನ್ನಡಕ್ಕೆ 85 ಅಂಕ ಪಡೆದಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts