More

    ಸಣ್ಣಪುಟ್ಟ ಹಿಂಸಾಚಾರದ ನಡುವೆ ರಾಜಸ್ಥಾನ ವಿಧಾನಸಭೆ ಚುನಾವಣೆ ಬಹುತೇಕ ಶಾಂತಿಯುತ; ಶೇ. 68ಕ್ಕೂ ಹೆಚ್ಚು ಮತದಾನ

    ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಶನಿವಾರದಂದು ಮತದಾನವು ಕೆಲವು ಹಿಂಸಾಚಾರದ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಸಾಗಿತು. ಸಂಜೆ 5 ಗಂಟೆಯ ವೇಳೆಗೆ ಶೇಕಡಾ 68 ಕ್ಕಿಂತ ಹೆಚ್ಚು ಮತದಾನ ದಾಖಲಾಗಿದೆ. ಅಂತಿಮವಾಗಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

    ಸಂಪೂರ್ಣ ಮಾಹಿತಿ ಸಂಗ್ರಹಿಸಿದ ನಂತರ ಅಂತಿಮ ಮತದಾನದ ಅಂಕಿಅಂಶಗಳನ್ನು ನೀಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.
    ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.74.06ರಷ್ಟು ಮತದಾನವಾಗಿತ್ತು. ಈ ಬಾರಿ ಪ್ರತಿ ಕ್ಷೇತ್ರದಲ್ಲಿ ಕನಿಷ್ಠ ಶೇ.75ರಷ್ಟು ಮತದಾನವಾಗುವಂತೆ ಚುನಾವಣಾ ಆಯೋಗ ಗುರಿ ಹಾಕಿಕೊಂಡಿತ್ತು.

    199 ವಿಧಾನಸಭಾ ಕ್ಷೇತ್ರಗಳ 51 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಸಂಜೆ 6ರ ಒಳಗಾಗಿ ಮತಗಟ್ಟೆಗಳಲ್ಲಿ ಸರದಿಯಲ್ಲಿದ್ದವರಿಗೆ ಮತದಾನ ಮಾಡಲು ತದನಂತವೂ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    “ಸಂಜೆ 5 ರವರೆಗಿನ ಮತದಾನದ ಶೇಕಡಾವಾರು ಶೇಕಡಾ 68.2 ರಷ್ಟಿದೆ. ಜೈಸಲ್ಮೇರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ, ನಂತರದ ಸ್ಥಾನದಲ್ಲಿ ಹನುಮಾನ್‌ಗಢ ಮತ್ತು ಧೋಲ್‌ಪುರ ಜಿಲ್ಲೆಗಳು ಇವೆ” ಎಂದು ಮತದಾನ ಮುಗಿದ ನಂತರ ಗುಪ್ತಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

    ಮರುಭೂಮಿ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತಾರೂಢ ಪಕ್ಷದ ವಿರುದ್ಧ ಮತ ಹಾಕುವ ಪ್ರವೃತ್ತಿಯನ್ನು ಬದಲಾಯಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ, ಆದರೆ ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ರಾಜ್ಯದಲ್ಲಿ ಅಧಿಕಾರದತ್ತ ಮರಳಲು ಹವಣಿಸುತ್ತಿದೆ.

    ಮತದಾನದ ಮೊದಲ ಎರಡು ಗಂಟೆಗಳಲ್ಲಿ ಸರಿಸುಮಾರು 10 ಪ್ರತಿಶತ ಮತದಾರರು ಮತ ಚಲಾಯಿಸಿದರು. ಈ ಸಂಖ್ಯೆಯು 11 ಗಂಟೆಗೆ 25 ಪ್ರತಿಶತಕ್ಕೆ ಏರಿತು. ಮಧ್ಯಾಹ್ನ 1 ರ ಹೊತ್ತಿಗೆ ಶೇಕಡಾ 40 ಕ್ಕಿಂತ ಹೆಚ್ಚಾಯಿತು. ಶ್ರೀಗಂಗಾನಗರದ ಕರಣಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಧನದಿಂದ ಮತದಾನವನ್ನು ಮುಂದೂಡಲಾಗಿದೆ.
    199 ಸ್ಥಾನಗಳಲ್ಲಿ 5.25 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರಿದ್ದು, 1,862 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 3 ರಂದು ಮತಎಣಿಕೆ ನಡೆಯಲಿದೆ.

    ಹೃದಯಸ್ತಂಭನದಿಂದ ಇಬ್ಬರ ಸಾವು:

    ಸುಮೇರ್‌ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೋರಾರಾಮ್ ಕುಮಾವತ್ ಅವರ ಮತಗಟ್ಟೆ ಏಜೆಂಟ್ ಆಗಿದ್ದ ಶಾಂತಿ ಲಾಲ್ ಮತ್ತು 62 ವರ್ಷದ ಮತದಾರ ಸತ್ಯೇಂದ್ರ ಅರೋರಾ ಅವರು ಕ್ರಮವಾಗಿ ಪಾಲಿ ಮತ್ತು ಉದಯಪುರ ಜಿಲ್ಲೆಗಳ ಮತಗಟ್ಟೆಗಳಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.

    ಕಲ್ಲು ತೂರಾಟ:

    ದೀಗ್ ಜಿಲ್ಲೆಯ ಕಮಾನ್‌ನ ಸಾನ್ವ್ಲೇರ್ ಗ್ರಾಮದಲ್ಲಿ ಕಲ್ಲು ತೂರಾಟದಲ್ಲಿ ಪೊಲೀಸ್ ಸೇರಿ ಇಬ್ಬರು ಗಾಯಗೊಂಡಿದ್ದಾರೆ. “ಜನಸಮೂಹ ಚದುರಿಸಲು ಪೊಲೀಸರು ಗಾಳಿಯಲ್ಲಿ 12 ಸುತ್ತು ಗುಂಡು ಹಾರಿಸಿದರು. ಘಟನೆಯಿಂದಾಗಿ ಕೆಲವು ನಿಮಿಷಗಳ ಕಾಲ ಮತದಾನಕ್ಕೆ ಅಡ್ಡಿಯುಂಟಾಯಿತು” ಎಂದು ಡೀಗ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಬ್ರಿಜೇಶ್ ಉಪಾಧ್ಯಾಯ ತಿಳಿಸಿದ್ದಾರೆ.

    ಗುಂಪು ಘರ್ಷಣೆ:

    ಸಿಕಾರ್‌ನ ಫತೇಪುರ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಹಿಂಸಾಚಾರದಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. “ಮತಗಟ್ಟೆಯ ಹೊರಭಾಗದಲ್ಲಿ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. ಯಾವುದೇ ನಾಗರಿಕರು ಗಾಯಗೊಂಡಿಲ್ಲ. 5-7 ಜನರನ್ನು ಬಂಧಿಸಲಾಗಿದೆ” ಎಂದು ಫತೇಪುರ್ ಡಿಎಸ್ಪಿ ರಾಮ್ ಪ್ರತಾಪ್ ತಿಳಿಸಿದ್ದಾರೆ.

    ಧೋಲ್‌ಪುರ್‌ನ ಬ್ಯಾರಿ ಕ್ಷೇತ್ರದಲ್ಲಿ ಮತಗಟ್ಟೆಯ ಹೊರಗೆ ಒಬ್ಬ ಮತಗಟ್ಟೆ ಏಜೆಂಟ್ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ವಾಗ್ವಾದ ನಡೆಯಿತು, “ನಂತರದ ಹಿಂಸಾಚಾರದಲ್ಲಿ ಎರಡು ವಾಹನಗಳು ಹಾನಿಗೊಳಗಾದವು. ಮತದಾನವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ನಂತರ ಪುನರಾರಂಭವಾಯಿತು” ಎಂದು ಧೋಲ್‌ಪುರ ಕಲೆಕ್ಟರ್ ಅನಿಲ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.

    ಟೋಂಕ್ ಜಿಲ್ಲೆಯ ಉನಿಯಾರಾದಲ್ಲಿ 40-50 ಜನರು ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಎಸ್ಪಿ ರಾಜರ್ಷಿ ರಾಜ್ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕೈಲಾಶ್ ಚೌಧರಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮೊದಲು ಮತ ಚಲಾಯಿಸಿದವರಲ್ಲಿ ಸೇರಿದ್ದಾರೆ. ಗೆಹ್ಲೋಟ್ ಮತ್ತು ಶೇಖಾವತ್ ಜೋಧ್‌ಪುರದಲ್ಲಿ, ಚೌಧರಿ ಬಲೋತ್ರಾದಲ್ಲಿ, ರಾಜೇ ಝಲಾವರ್‌ನಲ್ಲಿ ಮತ್ತು ಪೈಲಟ್ ಜೈಪುರದಲ್ಲಿ ಮತ ಚಲಾಯಿಸಿದ್ದಾರೆ.

    ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸಿ ಪಿ ಜೋಶಿ ಚಿತ್ತೋರ್‌ಗಢದಲ್ಲಿ ತಮ್ಮ ಹಕ್ಕು ಚಲಾಯಿಸಿದರು ಮತ್ತು ಪಕ್ಷದ ಸಂಸದರಾದ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಜೈಪುರದಲ್ಲಿ ಮತ ಚಲಾಯಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಏಳು ಬಿಜೆಪಿ ಸಂಸದರಲ್ಲಿ ಕುಮಾರಿ ಮತ್ತು ರಾಥೋಡ್ ಸೇರಿದ್ದಾರೆ.

    ಕಾಂಗ್ರೆಸ್ ವಿರುದ್ಧ ಯಾವುದೇ ಆಡಳಿತ ವಿರೋಧಿ ಇಲ್ಲ ಮತ್ತು ಪಕ್ಷವು ಮತ್ತೆ ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್ ಜೋಧ್‌ಪುರದಲ್ಲಿ ಹೇಳಿದ್ದಾರೆ.

    ಪಶುಪತಿನಾಥ ದೇವಾಲಯದ ಪ್ರತಿಕೃತಿ ಭಾರತದಲ್ಲಿ ನಿರ್ಮಿಸಲು ಅನುಮತಿ; ಸುದ್ದಿ ನಿರಾಕರಿಸಿದ ನೇಪಾಳ

    ಹುಲ್ಲು, ಎಲೆ ತಿಂದಿದ್ದಕ್ಕಾಗಿ ಒಂದು ವರ್ಷ ಜೈಲು; ಕೊನೆಗೂ ಬಿಡುಗಡೆ ಭಾಗ್ಯ

    ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರೊಂದಿಗೆ ಈಗ ಲ್ಯಾಂಡ್​ಲೈನ್​ ಫೋನ್​ ಸಂಪರ್ಕ; ರಕ್ಷಣಾ ಕಾರ್ಯದಲ್ಲಿ ಮಹತ್ವದ ಬೆಳವಣಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts