More

    ಕಥೆ ಹೇಳುವ ಹುಚ್ಚು! ; ವೈವಿಧ್ಯಮಯ ಸಿನಿಮಾಗಳತ್ತ ರಾಜ್ ಬಿ. ಶೆಟ್ಟಿ

    | ಪ್ರಮೋದ ಮೋಹನ ಹೆಗಡೆ

    ‘ಒಂದು ಮೊಟ್ಟೆಯ ಕಥೆ’ ಎಂಬ ರೊಮ್ಯಾಂಟಿಕ್ ಕಾಮಿಡಿಯಿಂದ ಶುರು ಮಾಡಿ, ‘ಗರುಡ ಗಮನ ವೃಷಭ ವಾಹನ’ದಂತಹ ಕಲ್ಟ್ ಸಿನಿಮಾ ನಿರ್ದೇಶಿಸಿ ಈಗ ವಿಭಿನ್ನ ಕಥಾಹಂದರವಿರುವ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ. ‘ಸಾವು’ ಎನ್ನುವ ವಿಷಯದ ಸುತ್ತ ಸಾಗುವ ಕಥೆಯನ್ನು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಮೂಲಕ ತೆರೆ ಮೇಲೆ ತೋರಿಸಲಿರುವ ರಾಜ್ ಇತ್ತೀಚೆಗೆ ವಿಜಯವಾಣಿ ಜತೆಗೆ ಮಾತಿಗೆ ಸಿಕ್ಕಿದ್ದರು.

    ವೈವಿಧ್ಯಮಯ ಕಥಾವಸ್ತುಗಳ ಆಯ್ಕೆ ಯಾಕೆ?

    • ಆ ಹೊತ್ತಿಗೆ ಯಾವ ವಿಷಯ ನನಗೆ ಬಹಳ ಕಾಡುತ್ತದೆಯೋ ಅದನ್ನು ಬರೆಯೋಕೆ ಸಾಧ್ಯ. ಸಿನಿಮಾ ಮಾಡೋಕೆ ಸಾಧ್ಯ. ‘ಗರುಡ ಗಮನ..’ ಮಾಡಬೇಕಿದ್ದರೆ ಅಹಂಕಾರ ಮತ್ತು ಕ್ರೌರ್ಯ ಬಹಳ ಕಾಡಿತ್ತು, ‘ಒಂದು ಮೊಟ್ಟೆಯ..’ ಮಾಡುವಾಗ ಸೌಂದರ್ಯ ಎಂಬ ವಿಷಯ ಮನಸ್ಸಿನಲ್ಲಿತ್ತು. ಈಗ, ಸಂಬಂಧ, ಒಂಟಿತನ, ಬಿಡುಗಡೆ ಎನ್ನುವ ವಿಷಯಗಳು ಕಾಡುತ್ತಿವೆ. ಅದೇ ‘ಸ್ವಾತಿ ಮುತ್ತಿನ ಮಳೆ ಹನಿಯೇ.’

    ಈ ವಿಷಯದ ಆಯ್ಕೆಗೆ ಕಾರಣ?

    • ಜೀವನದಲ್ಲಿ ಒಮ್ಮೆ ಏನೂ ಇಲ್ಲ ಅಂತನಿಸೋಕೆ ಶುರು ಆಗುತ್ತದೆ. ಯಾಕೆ ಹೀಗನಿಸುತ್ತದೆ? ಏನಿದು ಖಾಲಿತನ? ಎಂಬ ಹುಡುಕಾಟದಲ್ಲಿ ತೊಡಗಿದಾಗ ‘ಸಾವು’ ಒಂದೇ ಪರಮ ಸತ್ಯ ಎನ್ನುವುದು ಗೊತ್ತಾಗುತ್ತದೆ. ಹಾಗಾದರೆ ‘ಸಾವು’ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳುವ ಪ್ರಯತ್ನವಿದು. ಸತ್ತವರು ಹೋಗುತ್ತಾರೆ. ಆದರೆ, ಇದ್ದವರಿಗೆ ಸಾವು ಕುತೂಹಲಕಾರಿ.

    ಇದಕ್ಕೆ ತಕ್ಕಂತೆ ಸಿದ್ಧತೆ ಏನಿತ್ತು?

    ಜೀವನದಲ್ಲಿ ಮಾಡುವ ಎಲ್ಲ ಕೆಲಸವೂ ಸಾವಿನ ತಯಾರಿ ಅನ್ನುವುದು ನನ್ನ ನಂಬಿಕೆ. ನಮ್ಮ ಬಗ್ಗೆ ನಾಲ್ಕು ಜನ ಯಾವಾಗಲೂ ಮಾತನಾಡಬೇಕು ಎನ್ನುವ ಆಸೆಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ. ಸಿನಿಮಾ ಮತ್ತು ಕಥೆಗಳಲ್ಲಿ ಮಾತ್ರ ಇಂತಹ ಹುಡುಕಾಟಗಳು ಸಾಧ್ಯ. ಸಿನಿಮಾಗೆ ಸಿದ್ಧತೆ ಮಾಡಿಕೊಂಡೆ ಎನ್ನುವುದಕ್ಕಿಂತ ಸಿನಿಮಾ ಮಾಡುವಾಗ ಸಾಕಷ್ಟು ಹುಡುಕಾಟ ಹಾಗೂ ಉತ್ತರ ಪಡೆಯಲು ಪ್ರಯತ್ನಿಸಿದೆ.

    ವೆರೈಟಿ ಸಿನಿಮಾಗಳಿಂದ ಉಪಯೋಗ ಆಗಬಹುದಾ?

    ಆ ತರಹದ ಲೆಕ್ಕಾಚಾರ ಮಾಡಲ್ಲ. ಪ್ರೇಕ್ಷಕರಿಗೆ ಹೊಸತನ್ನು ನೀಡಬೇಕು ಅನ್ನೋದು ಉದ್ದೇಶ. ಬದುಕಲು ಸಾಧ್ಯವಾಗದ ಪಾತ್ರಗಳನ್ನು ಸಿನಿಮಾದಲ್ಲಿ ಜೀವಿಸಬಹುದು. ಕೆಲವು ನನಗೆ ಹೊಂದದೇ ಇರಬಹುದು ಅಥವಾ ಜನರಿಗೆ ಇಷ್ಟವಾಗದಿರಬಹುದು. ಈ ಸಿನಿಮಾದಲ್ಲಿ ನನ್ನ ಪಾತ್ರ ಕಾಡದೇ ಇದ್ದರೂ ‘ಪ್ರೇರಣಾ’ ಪಾತ್ರ ಕಾಡಿದರೆ ಕಥೆ ಗೆದ್ದಂತೆ.

    ‘ಟೋಬಿ’ಗೆ ಅಂದುಕೊಂಡ ಪ್ರತಿಕ್ರಿಯೆ ಸಿಕ್ಕಿತಾ?

    ಮಲಯಾಳಂನಲ್ಲಿ ನಿರೀಕ್ಷಿಸಿದ್ದಕ್ಕಿಂತ ಅದ್ಭುತ ಪ್ರತಿಕ್ರೆಯಿ ಸಿಕ್ಕಿತು. ಕನ್ನಡದಲ್ಲಿ ಕಷ್ಟವಾಯಿತು. ಅದಕ್ಕೆ ಮೈಸೂರಿನಲ್ಲಿ ನಡೆದ ಗಲಾಟೆ ಕೂಡ ಕಾರಣ. ಜತೆಗೆ ಜನರ ನಿರೀಕ್ಷೆಯನ್ನು ನಾನು ಮುಟ್ಟಿಲ್ಲ ಅನಿಸುತ್ತದೆ. ಅವುಗಳ ಬಗ್ಗೆ ಹೆಚ್ಚು ಯೋಚಿಸಲ್ಲ. ಹೊಸ ಬಗೆಯ ಕಥೆಯನ್ನು ಹೇಳಬೇಕು ಅನ್ನೋ ಹುಚ್ಚು ಇರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಯೋಚಿಸುತ್ತಾರೆ. ಎಲ್ಲವನ್ನೂ ಲೆಕ್ಕ ಹಾಕಲು ಆಗುವುದಿಲ್ಲ. ಕೆಲವು ಸಿನಿಮಾ ಕಾಡುತ್ತವೆ, ಕೆಲವು ಕಾಸು ಮಾಡುತ್ತವೆ.

    ಈ ಸಿನಿಮಾ ‘ಟೋಬಿ’ ರಿಲೀಸ್‌ಗೂ ಮುನ್ನವೇ ರೆಡಿಯಿತ್ತಲ್ವಾ?

    ಹೌದು, ಆಗ ಇದನ್ನು ಒಟಿಟಿಯಲ್ಲಿ ರಿಲೀಸ್ ಮಾಡುವುದು ಅಂದುಕೊಂಡಿದ್ದೆವು. ಆದರೆ, ಅಲ್ಲಿ ಕನ್ನಡಕ್ಕೆ ಸೀಮಿತ ಮಾರುಕಟ್ಟೆಯಿದೆ. ಜತೆಗೆ ಅದಕ್ಕೂ ಮುನ್ನ ಥಿಯೇಟರ್‌ನಲ್ಲಿ ರಿಲೀಸ್ ಆಗಿರಬೇಕು. ಹೀಗಾಗಿ ಈಗ ರಿಲೀಸ್ ಮಾಡುತ್ತಿದ್ದೇವೆ.

    ಮುಂದೆ ಒಂದೇ ಜಾನರ್‌ಗೆ ಫಿಕ್ಸ್ ಆಗ್ತೀರಾ?

    ಇಲ್ಲಿ ತನಕ ಮಾಡದೇ ಇರುವಂಥ ಸಿನಿಮಾ ಮಾಡುತ್ತೇನೆ. ನಾನು ಸಿನಿಮಾ ಮತ್ತು ಬದುಕಿನ ವಿದ್ಯಾರ್ಥಿ. ಈ ಸಿನಿಮಾದಿಂದಲೂ ಯಾವುದಕ್ಕೂ ಅಂಟಿಕೊಳ್ಳದಿದ್ದಾಗ ಬದುಕು ನಿರಾಳ ಎಂಬುದನ್ನು ಕಲಿತಿದ್ದೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts