More

    ಮಂಗನ ಕಾಯಿಲೆ ಅರಿವು ಮೂಡಿಸಿ, ರೋಗ ಲಕ್ಷಣ ಕಂಡುಬಂದರೆ ಚಿಕಿತ್ಸೆ ಪಡೆದುಕೊಳ್ಳಿ

    ಸಿದ್ದಾಪುರ: ಮಂಗನ ಕಾಯಿಲೆ ಉಲ್ಬಣವಾಗುವ ಪೂರ್ವದಲ್ಲಿಯೇ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತ ಸಭೆ ನಡೆಸಿ ಜನರಲ್ಲಿ ಕಾಯಿಲೆ ಕುರಿತು ಅರಿವು ಮೂಡಿಸಬೇಕು. ರೋಗದ ಲಕ್ಷಣ ಕಂಡುಬಂದವರು ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಮಂಗನ ಕಾಯಿಲೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಾಯಿಲೆ ಕಾಣಿಸಕೊಂಡಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ರೋಗದ ಲಕ್ಷಣ ಇರುವವರಿಗೆ ಸೂಕ್ತ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಇಲ್ಲಿ ಆಗದಿದ್ದರೆ ಮಣಿಪಾಲದಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ರೋಗದ ತೀವ್ರತೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಲಸಿಕೆ ಪೂರೈಕೆ ಕುರಿತು ಸೂಚನೆ ನೀಡಲಾಗವುದು. ಅದರಂತೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಮಂಗನ ಕಾಯಿಲೆ ಕುರಿತು ಮಾಹಿತಿ ನೀಡಿ ತಾಲೂಕಿಗೆ ಹೆಚ್ಚಿನ ಲಸಿಕೆ ಹಾಗೂ ಔಷಧ ಪೂರೈಸುವಂತೆ ವಿನಂತಿಸುತ್ತೇನೆ ಎಂದರು.

    ಮುಖ್ಯವಾಗಿ ಸ್ಥಳೀಯ ಗ್ರಾಪಂ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಶಾಲಾ ಶಿಕ್ಷಕರು, ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚು ಎಚ್ಚರವಹಿಸಬೇಕು. ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಪಂನಲ್ಲಿ ಜಾಗೃತ ಸಭೆ ನಡೆಸುವುದಲ್ಲದೇ ಪ್ರತಿ ಮನೆಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ಗ್ರಾಮೀಣ ಭಾಗದಲ್ಲಿ ಶಿಬಿರ ನಡೆಸಬೇಕು. ಪ್ರತಿ ಹದಿನೈದು ದಿನಕ್ಕೊಮ್ಮೆ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿದರು.

    ಈಗಾಗಲೇ ಮಂಗನ ಕಾಯಿಲೆ ಕಾಣಿಕೊಂಡ ಗ್ರಾಮೀಣ ಭಾಗದ ಎಲ್ಲರ ರಕ್ತ ಸಂಗ್ರಹಿಸಿ ತಪಾಸಣೆಗೆ ಕಳುಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಅವರಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಬಿ.ವಿ., ರೋಗದ ಲಕ್ಷಣ, ಔಷಧ ಪೂರೈಕೆ ಕುರಿತು ಮಾಹಿತಿ ನೀಡಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ, ಡಾ. ವಿವೇಕ ಹೆಗಡೆ ಇದ್ದರು.

    ತಾಲೂಕಿನ ಯಾವುದೇ ಭಾಗದಲ್ಲಿ ಮಂಗಗಳು ಮೃತಪಟ್ಟಲ್ಲಿ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ನೋಡೆಲ್ ಅಧಿಕಾರಿಗಳು ಮಳೆಗಾಲದ ಆರಂಭದವರೆಗೂ ರಜೆ ಹಾಕುವಂತಿಲ್ಲ. ಶಿಕ್ಷಕರು ನಿತ್ಯ ಮಕ್ಕಳ ಆರೋಗ್ಯದ ಕುರಿತು ಹೆಚ್ಚು ಗಮನ ನೀಡಬೇಕು. | ಭೀಮಣ್ಣ ನಾಯ್ಕ. ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts