More

    ಮಳೆಗಾಲದಲ್ಲೂ ತಪ್ಪದ ನೀರಿನ ಸಮಸ್ಯೆ

    ಹನುಮಸಾಗರ: ಸಮೀಪದ ಅಡವಿಬಾವಿ ಗ್ರಾಪಂ ವ್ಯಾಪ್ತಿಯ ಮಿಯ್ಯಪುರ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಮಳೆಗಾಲದಲ್ಲೂ ಗ್ರಾಮಸ್ಥರು ನಿತ್ಯ ಕೆಲಸ ಬಿಟ್ಟು ಜೀವಜಲಕ್ಕಾಗಿ ಕಾದು ಕುಳಿತುಕೊಳ್ಳಬೇಕಾಗಿದೆ.

    ಗ್ರಾಮದಲ್ಲಿ 1500ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಎರಡು ವರ್ಷದಲ್ಲಿ ಆರೇಳು ಕೊಳವೆಬಾವಿ ಕೊರೆಸಿದರೂ ನೀರಿನ ಸೆಲೆ ಸಿಕ್ಕಿಲ್ಲ. ಇದರಿಂದ ಅನಿವಾರ್ಯವಾಗಿ ಗ್ರಾಮದ ರೈತರೊಬ್ಬರ ಖಾಸಗಿ ಕೊಳವೆಬಾವಿಯೊಂದನ್ನು ಬಾಡಿಗೆ ಪಡೆದು ಗ್ರಾಪಂ ನೀರು ಒದಗಿಸುತ್ತಿದೆ. ಇವು ಕೂಡ ಸಾಕಾಗುವುದಿಲ್ಲ. ಇದರಿಂದ ಗ್ರಾಮಸ್ಥರು ಪರದಾಡುವಂತಾಗಿದ್ದು, ನಿತ್ಯದ ಕೆಲಸ ಬಿಟ್ಟು, ಕೊಡಗಳನ್ನು ಪಾಳೆ ಹಚ್ಚಿ ಬೆಳಗ್ಗೆಯಿಂದ ಕಾಯ್ದು ಕುಳಿತುಕೊಳ್ಳಬೇಕಾಗಿದೆ.

    ಕೆಲವರು ಅಕ್ಕಪಕ್ಕದ ತೋಟಗಳಿಗೆ ತೆರಳಿ ನೀರು ತುಂಬಿಕೊಳ್ಳುತ್ತಿದ್ದಾರೆ. ತೋಟದವರು ದಿನನಿತ್ಯ ಬಂದರೆ ನಮ್ಮ ಬೆಳೆಗಳಿಗೆ ನೀರು ಸಾಕಾಗುವುದಿಲ್ಲ ಎಂದು ಗದರಿಸುತ್ತಿದ್ದಾರೆ. ಇದರಿಂದ ಬೇಗನೆ ನೀರು ತರಬೇಕೆಂಬ ಆಸೆಯಿಂದ ತೋಟಕ್ಕೆ ಹೋದವರು ನಿರಾಶೆಯಿಂದ ಮರಳಿ ಪಾಳೆ ಹಚ್ಚಿ ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗದಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ದೊಡ್ಡಬಸವರಾಜ ಎಂ. ತಲಮಟ್ಟಿ, ಚಂದನಗೌಡ, ಪ್ರಕಾಶ, ಬಸವರಾಜ ರಾಮವಾಡಗಿ ಇತರರು ಒತ್ತಾಯಿಸಿದ್ದಾರೆ.

    ಗ್ರಾಮದಲ್ಲಿರುವ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಸದ್ಯ ತಿಂಗಳಿಗೆ 15 ಸಾವಿರ ನೀಡಿ ರೈತರೊಬ್ಬರ ಕೊಳವೆಬಾವಿಯನ್ನು ಬಾಡಿಗೆ ಪಡೆದುಕೊಳ್ಳಲಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ನೀರಿನ ಪಾಯಿಂಟ್ ಮಾಡಲು ತಿಳಿಸಿಲಾಗಿದ್ದು, ಸದ್ಯದಲ್ಲೇ ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಲಾಗುವುದು.
    | ಮಲಕಣ್ಣ ಅಂಕಲಗಿ, ಪಿಡಿಒ ಅಡವಿಬಾವಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts