More

    ಮತ್ತೆ ಸಂಪರ್ಕ ಕಡಿತ ಭೀತಿ

    ಮತ್ತೆ ಸಂಪರ್ಕ ಕಡಿತ ಭೀತಿ

    ಬಣಕಲ್: ಪ್ರವಾಹದಿಂದ ಸೇತುವೆ ಕೊಚ್ಚಿ ಹೋಗಿ ಹಲವು ಗ್ರಾಮಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ. ಕೆಲ ಗ್ರಾಮಸ್ಥರು ತಾತ್ಕಾಲಿಕ ಸೇತುವೆ ನಿರ್ವಿುಸಿಕೊಂಡು ಸಂಚರಿಸುತ್ತಿದ್ದಾರೆ.

    ಮೂಡಿಗೆರೆ ತಾಲೂಕಿನ ಮಾಳಿಂಗನಾಡು, ಬಂಕೇನಹಳ್ಳಿ, ಚೇಗು, ಆಲೇಕಾನು, ಮುಗ್ರಹಳ್ಳಿ ಮುಂತಾದ ಗ್ರಾಮಗಳ ಸೇತುವೆಗಳು ಕಳೆದ ವರ್ಷ ಆಗಸ್ಟ್​ನಲ್ಲಿ ಸುರಿದ ಮಳೆಗೆ ಕೊಚ್ಚಿ ಹೋಗಿದ್ದವು. ನಂತರ ತಾತ್ಕಾಲಿಕ ಸೇತುವೆ ನಿರ್ವಿುಸಲಾಗಿದೆ. ಇದರಲ್ಲೇ ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯಾಸದಿಂದ ಸಂಚರಿಸುತ್ತಿದ್ದಾರೆ.

    ಚೇಗು ಗ್ರಾಮದ ಸೇತುವೆ ಕುಸಿದ ಸ್ಥಳದಲ್ಲಿ ಮೋರಿಗಳನ್ನು ಹಾಕಿ ತಾತ್ಕಾಲಿಕ ಸೇತುವೆ ನಿರ್ವಿುಸಲಾಗಿದೆ. ಈ ರಸ್ತೆಯೂ ಬಣಕಲ್, ಬೆಟ್ಟಗೆರೆ, ಗುತ್ತಿ, ದೇವರಮನೆ, ಕೂಡಹಳ್ಳಿ, ಚೇಗು ಮುಂತಾದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವಾಗಿ ಶಾಲಾ ಕಾಲೇಜುಗಳಿಗೆ ಹತ್ತಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ತಾತ್ಕಾಲಿಕ ಸೇತುವೆಗೆ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಅಪಾಯ ಆಹ್ವಾನಿಸುವಂತಿದೆ. ಮಕ್ಕಳು ನದಿಗೆ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದೆ. ರಾತ್ರಿ ಸಮಯದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸೇತುವೆ ಮೇಲೆ ವಾಹನ ಚಲಾಯಿಸಬೇಕು. ಕೊಂಚ ನಿಯಂತ್ರಣ ತಪ್ಪಿದರೂ ನದಿಗೆ ಬೀಳುವುದು ನಿಶ್ಚಿತ.

    ಬಂಕೇನಹಳ್ಳಿ ಗ್ರಾಮದ ಸೇತುವೆ ಕೊಚ್ಚಿ ಹೋಗಿ ಗ್ರಾಮಸ್ಥರು ತಾತ್ಕಾಲಿಕವಾಗಿ ಅಡಕೆ ಮರಗಳನ್ನು ಜೋಡಿಸಿ ಕಾಲುಸಂಕ ನಿರ್ವಿುಸಿದ್ದರು. ಆದರೆ ನದಿ ನೀರಿನ ಹರಿವಿನ ರಭಸಕ್ಕೆ ಕಾಲುಸೇತುವೆಯೂ ಕೊಚ್ಚಿ ಹೋಗಿತ್ತು. ಆನಂತರದಲ್ಲಿ ತಾತ್ಕಾಲಿಕ ಸೇತುವೆ ನಿರ್ವಿುಸಲಾಗಿತ್ತು. ಸೇತುವೆ ನಿರ್ವಿುಸುವಾಗ ಬಂಕೇನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ನೂತನ ಸೇತುವೆ ನಿರ್ವಿುಸುವಂತೆ ಪಟ್ಟು ಹಿಡಿದಿದ್ದರು. ಈ ಸೇತುವೆ ನಿರ್ಮಾಣ ತಾತ್ಕಾಲಿಕ. ಶೀಘ್ರವೇ ಹೊಸ ಸೇತುವೆ ನಿರ್ವಿುಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು.

    ಆರು ತಿಂಗಳು ಕಳೆದರೂ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ. ಸೇತುವೆ ಪಕ್ಕದಲ್ಲಿ ನದಿಯ ಒಂದು ಬದಿಯ ದಿಬ್ಬದ ಮೇಲೆ ಹತ್ತಾರು ಮನೆಗಳಿವೆ. ದಿಬ್ಬ ಕುಸಿಯುತ್ತಿರುವುದರಿಂದ ಮುಂದಿನ ಮಳೆಗಾಲದಲ್ಲಿ ಮನೆಗಳಿಗೆ ಹಾನಿಯಾಗಬಹುದು ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ತಡೆಗೋಡೆ ನಿರ್ವಿುಸಿ ಅಥವಾ ಮನೆ ಕಟ್ಟಿಕೊಳ್ಳಲು ಪರ್ಯಾಯ ಜಾಗ ನೀಡುವಂತೆ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಕಳೆದ ಮಳೆಗಾಲದ ಸಂದರ್ಭದಲ್ಲೇ ಬಂಕೇನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದರು.

    ಮಾಳಿಂಗನಾಡು ಸೇತುವೆಯೂ ಕಳೆದ ವರ್ಷದ ಮಳೆಗೆ ಕೊಚ್ಚಿಹೋಗಿತ್ತು. ನಂತರ ಇಬ್ಬರು ವಾಹನ ಸವಾರರು ಬಿದ್ದು ಗಾಯಗೊಂಡಿದ್ದರು. ಅಲ್ಲದೆ ಲಾರಿಯೊಂದು ಸೇತುವೆಯ ಮೂಲಕ ಸಾಗುವಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ ಘಟನೆ ನಡೆದಿತ್ತು.

    ಮಳೆಗಾಲದೊಳಗೆ ಸೇತುವೆ ನಿರ್ಮಾಣ ಕಷ್ಟ: ಬಂಕೇನಹಳ್ಳಿ ಸೇತುವೆ 3 ಕೋಟಿ ರೂ., ಮಾಳಿಂಗನಾಡು ಸೇತುವೆ 1.37 ಕೋಟಿ ರೂ., ಮುಗ್ರಹಳ್ಳಿ ಸೇತುವೆ 2 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲು ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಕಳಿಸಿದ್ದಾರೆ. ಆದರೆ ಮಳೆಗಾಲಕ್ಕೆ ಮೂರು ತಿಂಗಳಷ್ಟೆ ಬಾಕಿಯಿದೆ. ಸೇತುವೆ ನಿರ್ವಣದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿ ಕಾಮಗಾರಿ ಮಳೆಗಾಲಕ್ಕೂ ಮುಂಚೆ ಪೂರ್ಣಗೊಳ್ಳುವುದು ಕಷ್ಟ ಸಾಧ್ಯ. ಶಾಸಕರ ವಿಶೇಷ ಅನುದಾನದಲ್ಲಿ ಚೇಗು ಸೇತುವೆಗೆ 30 ಲಕ್ಷ ರೂ., ಆಲೇಕಾನು ಹೊರಟ್ಟಿ ಸೇತುವೆಗೆ 20 ಲಕ್ಷ ರೂ. ಮೀಸಲಿಟ್ಟಿದ್ದು, ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ.

    ಮತ್ತೆ ಕೊಚ್ಚಿ ಹೋಗುವ ಆತಂಕ: ಜಿಲ್ಲಾಡಳಿತ ನೂತನ ಸೇತುವೆ ನಿರ್ಮಾಣ ಕಾಮಗಾರಿಯನ್ನು ಮುಂಚಿತವಾಗಿ ಪ್ರಾರಂಭಿಸಿದರೆ ಮಳೆಗಾಲ ಪ್ರಾರಂಭವಾಗುವಷ್ಟರಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸಬಹುದಿತ್ತು. ತಾತ್ಕಾಲಿಕ ಸೇತುವೆ ಮಳೆಗಾಲದಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದ್ದು ಹತ್ತಾರು ಗ್ರಾಮಗಳು ಪುನಃ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

    ಬಂಕೇನಹಳ್ಳಿ, ಮುಗ್ರಹಳ್ಳಿ, ಚೇಗು ಸೇತುವೆಗಳ ವರದಿಯನ್ನು ಜಿಲ್ಲಾಧಿಕಾರಿ ಸರ್ಕಾರಕ್ಕೆ ಕಳಿಸಿದ್ದಾರೆ. ಅನುಮೋದನೆ ಸಿಕ್ಕು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂಬುದು ಪಿಡಬ್ಲ್ಯುಡಿ ಇಂಜಿನಿಯರ್ ಚನ್ನಯ್ಯ ಅವರ ಅಭಿಪ್ರಾಯ.

    ಸೇತುವೆ ಕುಸಿದು ಹಲವು ತಿಂಗಳಾದರೂ ಜಿಲ್ಲಾಡಳಿತ ಸೇತುವೆ ನಿರ್ವಣಕ್ಕೆ ಮುಂದಾಗಿಲ್ಲ. ಈ ಭಾಗದ ಗ್ರಾಮಸ್ಥರೆಲ್ಲರೂ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಶೀಘ್ರ ಸೇತುವೆ ನಿರ್ವಣಕ್ಕೆ ಒತ್ತಾಯಿಸಲು ನಿರ್ಧರಿಸಿದ್ದೇವೆ. ಸೇತುವೆ ಕಾಮಗಾರಿ ಶೀಘ್ರ ಆರಂಭಿಸದಿದ್ದರೆ ಮಳೆಗಾಲದಲ್ಲಿ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ನವೀನ್ ಹಾವಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts