More

    ಉಭಯ ಜಿಲ್ಲೆಗಳಲ್ಲಿ ಗಾಳಿ ಸಹಿತ ಭಾರಿ ಮಳೆ, ರೆಡ್ ಅಲರ್ಟ್ ಘೋಷಣೆ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳ

    ಮಂಗಳೂರು/ಉಡುಪಿ/ಬೈಂದೂರು: ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶದ ಪ್ರಭಾವದಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಬುಧವಾರ ಮುಂಜಾನೆವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ಮತ್ತಷ್ಟು ಬಿರುಸು ಪಡೆಯುವ ಸಾಧ್ಯತೆಯಿದೆ.

    ಹವಾಮಾನ ಇಲಾಖೆ ಬುಧವಾರದಿಂದ ನಾಲ್ಕು ದಿನ ಆರೆಂಜ್ ಅಲರ್ಟ್ (115.6 ಮಿ.ಮೀನಿಂದ 204.4 ಮಿ.ಮೀ ಮಳೆ ಸಾಧ್ಯತೆ) ಘೋಷಿಸಿದ್ದರೂ, ಮಳೆಯಬ್ಬರ ಹೆಚ್ಚಾದರೆ ಅಲರ್ಟ್ ಬದಲಾಗುವ ಸಾಧ್ಯತೆಯಿದೆ.

    ಸಮುದ್ರದಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿದ್ದು, 3.2-4.1 ಎತ್ತರದ ಭಾರಿ ಗಾತ್ರದ ತೆರೆಗಳು ದಡಕ್ಕೆ ಅಪ್ಪಳಿಸಲಿವೆ. ಆಗಸ್ಟ್ 5ರ ಮಧ್ಯರಾತ್ರಿ ವರೆಗೆ ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಸಮುದ್ರ ಮತ್ತು ನದಿತೀರದ ಜನರು ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ. ಸಂಭಾವ್ಯ ಅಪಾಯ ಎದುರಿಸಲು ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್ ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ತುರ್ತು ಸಂದರ್ಭ ಸಹಾಯವಾಣಿ ಸಂಖ್ಯೆ 1077ನ್ನು ಸಂಪರ್ಕಿಸುವಂತೆ ದ.ಕ. ಜಿಲ್ಲಾಡಳಿತ ತಿಳಿಸಿದೆ.

    ನಿರಂತರ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಭಾರಿ ಗಾಳಿಗೆ ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಮನೆ-ವಾಹನಗಳಿಗೆ ಹಾನಿಯಾಗಿದೆ. ಗ್ರಾಮಾಂತರ ಭಾಗದಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯವಾಗಿತ್ತು. ಚಾರ್ಮಾಡಿ ಘಾಟಿಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ.

    ಮಹಿಳೆ ನೀರುಪಾಲು: ಬೈಂದೂರಿನ ಕಾಲ್ತೋಡು ಗ್ರಾಮ ಸಸಿಹಿತ್ಲು ಮನೆ ಮೂರೂರು ನಿವಾಸಿ ಸೂರು (66) ಎಂಬವರು ಸೋಮವಾರ ಹೊಳೆ ದಾಟುವಾಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಅಡಕೆ ಹೆಕ್ಕಲೆಂದು ಹೋದವರು ಮಧ್ಯಾಹ್ನವಾದರೂ ಬಾರದ ಹಿನ್ನೆಲೆಯಲ್ಲಿ ಹುಡುಕಿದಾಗ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮಂಗಳವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 64.4, ಬೆಳ್ತಂಗಡಿ 92.8, ಮಂಗಳೂರು 40.8, ಪುತ್ತೂರು 72.9, ಸುಳ್ಯ 94.6 ಮಿ.ಮೀ. ಸಹಿತ ದ.ಕ. ಜಿಲ್ಲೆಯಲ್ಲಿ ಸರಾಸರಿ 73.1 ಮಿ.ಮೀ. ಹಾಗೂ ಉಡುಪಿ 50, ಕುಂದಾಪುರ 73, ಕಾರ್ಕಳ 81 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ 68 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ.

    ಮೂರು ವಾಹನ ಜಖಂ: ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಪೇರಳ್ದಕಟ್ಟೆ ಮಂಜೊಟ್ಟಿ ತಿರುವು ಬಳಿ ವಿದ್ಯುತ್ ತಂತಿ ಸಮೇತ ಮರ ಬಿದ್ದು ಆಪೆ ರಿಕ್ಷಾ ನಜ್ಜುಗುಜ್ಜಾಗಿದೆ, ಚಾಲಕ ಅಬೂಬಕ್ಕರ್ ಪಾರಾಗಿದ್ದಾರೆ. ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಬಳಿ ಪಿಕಪ್ ಮೇಲೆ 33 ಕೆ.ವಿ. ವಿದ್ಯುತ್ ಕಂಬ ಬಿದ್ದಿದೆ. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರಿನಲ್ಲಿ ಆಲದ ಮರ ಬಿದ್ದು ಕಾರು ನಜ್ಜುಗುಜ್ಜಾಗಿದೆ.

    ಮರ ಬಿದ್ದು ಉರುಳಿದ ವಿದ್ಯುತ್ ಕಂಬಗಳು: ಮಂಗಳೂರಿನ ಬೋಳೂರಿನಲ್ಲಿ ಮರ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿವೆ. ಕೂಳೂರು-ಕಾವೂರು ರಸ್ತೆಯಲ್ಲೂ ವಿದ್ಯುತ್ ಕಂಬಗಳು ಬಿದ್ದಿವೆ. ಪದವಿನಂಗಡಿಯಲ್ಲಿ ಎರಡು ಮರ ಬಿದ್ದು ಮನೆಗೆ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದ ಪರಂಬುಡೆ ಅಣ್ಣಿ ಆಚಾರ್ಯ ಎಂಬವರ ಹೆಂಚಿನ ಮನೆಯ ಮೇಲ್ಛಾವಣಿ ಕುಸಿದಿದ್ದು, ಐವರು ಅಪಾಯದಿಂದ ಪಾರಾಗಿದ್ದಾರೆ. ವಿಟ್ಲ ಕೊಳ್ನಾಡು ಗ್ರಾಮದ ಕರೈಯಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ರಾಜ್ಯ ಹೆದ್ದಾರಿಗೆ ಮರಗಳು ಬಿದ್ದಿದ್ದರಿಂದ ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ಹಲವು ಗಂಟೆಗಳ ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಂಟ್ವಾಳದ ಅಮ್ಮುಂಜೆ ಗ್ರಾಪಂ ವ್ಯಾಪ್ತಿಯ ಕಲಾಯಿ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಸ್ವಾಮ್ಯದ ಕಟ್ಟಡದ ಪಿಲ್ಲರ್‌ಗಳು ಗುಡ್ಡ ಜರಿದು ಮಣ್ಣಿನೊಳಗೆ ಸಿಲುಕಿವೆ. ಸಿದ್ದಕಟ್ಟೆ ಬಳಿ ಐದಾರು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮರ ಬಿದ್ದು ಉಪ್ಪಿನಂಗಡಿ ಸಮೀಪದ ಬಜತ್ತೂರು ಸಣ್ಣಂಪಾಡಿ ಎಂಬಲ್ಲಿ 2, ನೀರಕಟ್ಟೆಯಲ್ಲಿ 2, ಹಿರೇಬಂಡಾಡಿ ಗ್ರಾಮದ ಹೆನ್ನಾಳ ಎಂಬಲ್ಲಿ 5, ನೆಕ್ಕಿಲು ಎಂಬಲ್ಲಿ 2 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

    ಕುಮಾರಧಾರ ಸ್ನಾನಘಟ್ಟ ಜಲಾವೃತ
    ಸುಬ್ರಹ್ಮಣ್ಯ: ಕುಮಾರಧಾರ ಸ್ನಾನಘಟ್ಟ ಪ್ರಸಕ್ತ ವರ್ಷ ಪ್ರಥಮ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ. ಸ್ನಾನಘಟ್ಟದರುವ ಶೌಚಗೃಹ ಭಾಗಶಃ ಮುಳುಗಡೆಗೊಂಡಿದ್ದರೆ, ಬಟ್ಟೆ ಬದಲಿಸುವ ಕೊಠಡಿಗಳು, ಶ್ರೀ ದೇವರ ಕಟ್ಟೆಯು ಜಲಾವೃತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts