More

    ಹಿಂಗಾರಿ ಬೆಳೆ ನುಂಗಿತು ಮಳೆ

    ರಾಣೆಬೆನ್ನೂರ: ತಾಲೂಕಿನಾದ್ಯಂತ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಹಿಂಗಾರಿ ಬೆಳೆಗೆ ತೊಂದರೆಯಾಗಿದೆ. ತೇವಾಂಶ ಹೆಚ್ಚಾಗಿದ್ದು ಬೆಳೆ ಕೊಳೆಯುವ ಭೀತಿ ಎದುರಾಗಿದೆ. ಜೋಳ ಸೇರಿ ಇತರ ಬೆಳೆಗಳು ಸಂಪೂರ್ಣ ತೋಯ್ದು ಹೋಗಿವೆ. ಶುಕ್ರವಾರ ಬೆಳಗ್ಗೆಯೂ ಜಿಟಿಜಿಟಿ ಮಳೆಯಾಗಿದೆ.

    ತಾಲೂಕಿನಲ್ಲಿ ಹಿಂಗಾರಿ ಬೆಳೆಗಳಾದ ಜೋಳ, ಕಡಲೆ, ಅಲಸಂದಿ, ಸೂರ್ಯಕಾಂತಿ ಹಾಗೂ ಹತ್ತಿ ಇದೀಗ ಸಂಪೂರ್ಣ ಕಟಾವಿಗೆ ಬಂದಿದೆ. ರೈತರು ಇನ್ನೇನು ತೆನೆ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವವರಿದ್ದರು. ಅಷ್ಟರಲ್ಲಿಯೇ ಸುರಿದ ಮಳೆ ಹಾಗೂ ಮೋಡಕವಿದ ವಾತಾವರಣದಿಂದ ಬೆಳೆ ಹಾನಿಯಾಗುವ ಭೀತಿ ಆವರಿಸಿದೆ.

    ಹವಾಮಾನ ಇಲಾಖೆ ಇನ್ನೂ 2-3 ದಿನ ಮಳೆ ಬರಲಿದೆ ಎಂಬ ಮನ್ಸೂಚನೆ ನೀಡಿದೆ. ಇದೇ ರೀತಿ ಮಳೆ ಬಂದರೆ ಸಂಪೂರ್ಣ ಬೆಳೆ ಹಾಳಾಗಲಿದ್ದು, ಹಿಂಗಾರಿ ಬೆಳೆಗಾರರಿಗೆ ಕೈ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ವಣವಾಗಲಿದೆ. ತಾಲೂಕಿನಲ್ಲಿ 4318 ಹೆಕ್ಟೇರ್ ಜೋಳ, 1111 ಹೆಕ್ಟೇರ್ ಕಡಲೆ, 210 ಹೆಕ್ಟೇರ್ ಅಲಸಂದಿ, 630 ಹೆಕ್ಟೇರ್ ಸೂರ್ಯಕಾಂತಿ ಹಾಗೂ 230 ಹೆಕ್ಟೇರ್ ಹತ್ತಿ ಬೆಳೆಯಲಾಗಿದೆ. ಜೋಳ, ಸೂರ್ಯಕಾಂತಿ ತೆನೆ ಕಟ್ಟಿವೆ. ಕಡಲೆ ಹಾಗೂ ಅಲಸಂದಿ ಕಾಯಿ ಕಟ್ಟಿದ್ದು ಕಟಾವಿಗೆ ಬಂದಿವೆ. ರೈತರು ಕಟಾವಿಗೆ ಬಂದ ಬೆಳೆಯನ್ನು ಉಳಿಸಿಕೊಳ್ಳಲು ನಾನಾ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ.

    ಹಿಂಗಾರಿನಲ್ಲಿ ಬಿತ್ತನೆ ಮಾಡಿದ ಜೋಳ ಉತ್ತಮವಾಗಿ ತೆನೆ ಕಟ್ಟಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಈ ರೀತಿ ಉತ್ತಮ ತೆನೆ ಕಟ್ಟಿದ ಉದಾಹರಣೆಗಳಿಲ್ಲ. ಇದೀಗ ತೆನೆ ಕಟಾವು ಮಾಡಬೇಕಿದೆ. ಆದರೆ, ಏಕಾಏಕಿ ಮಳೆ ಬರುತ್ತಿರುವುದು ಅಚ್ಚರಿ ಮೂಡಿಸಿದೆ. ಇದರಿಂದ ತೆನೆ ಕಟ್ಟಿದ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿದೆ. ಹೀಗಾದರೆ ಮುಂದಿನ ದಿನದಲ್ಲಿ ತಿನ್ನಲು ಜೋಳ ದೊರೆಯಂತಹ ಸ್ಥಿತಿ ನಿರ್ವಣವಾಗಲಿದೆ.

    | ಹನುಮಂತಪ್ಪ ಹೊಳಲ, ಜೋಳ ಬೆಳೆದ ರೈತ

    ಮಳೆಯಾಗುವ ಕುರಿತು ಹವಾಮಾನ ಮನ್ಸೂಚನೆ ನೀಡಿದೆ. ಆದರೆ, ಈ ಸಮಯದಲ್ಲಿ ಮಳೆ ಆಗಬಾರದು. ರೈತರು ತೆನೆ ಕಟ್ಟಿದ ಜೋಳ, ಸೂರ್ಯಕಾಂತಿ ಸೇರಿ ಇತರ ಬೆಳೆಗಳನ್ನು ಆದಷ್ಟು ಬೇಗ ಕಟಾವು ಮಾಡಿ ರಕ್ಷಿಸಿಕೊಳ್ಳಬೇಕು.

    | ಎಚ್.ಬಿ. ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts