More

    ದ.ಕ. ವಾಡಿಕೆ ತಲುಪದ ಮಳೆ, ಉಡುಪಿಯಲ್ಲಿ ಶೇ.6ರಷ್ಟು ಹೆಚ್ಚಳ

    ಭರತ್ ಶೆಟ್ಟಿಗಾರ್ ಮಂಗಳೂರು

    ಒಂದು ವರ್ಷದಲ್ಲಿ ಸುರಿದ ಮಳೆ ವಿವರದಂತೆ ಕರಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದ್ದರೆ, ಉಡುಪಿ-ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆ ಮೀರಿ ಮಳೆ ಸುರಿದಿದೆ.

    ದ.ಕ. ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ 400 ಸೆಂ.ಮೀ. ಮಳೆ ಸುರಿಯಬೇಕಾದಲ್ಲಿ 396.3 ಸೆಂ.ಮೀ ಮಳೆಯಾಗಿದ್ದು, ಶೇ.1ರಷ್ಟು ಕೊರತೆಯಾಗಿದೆ. ಉಡುಪಿ ಜಿಲ್ಲೆಯ ವಾಡಿಕೆ ಮಳೆ 453 ಸೆಂ.ಮೀ. ಆಗಿದ್ದು, ಶೇ.6ರಷ್ಟು (479.7 ಸೆಂ.ಮೀ.) ಹೆಚ್ಚು ಮಳೆ ಸುರಿದಿದೆ. ಉ.ಕ. ಜಿಲ್ಲೆಯ ವಾಡಿಕೆ ಮಳೆ 293 ಸೆಂ.ಮೀ. ಆಗಿದ್ದು, ಶೇ.14ರಷ್ಟು (334.6 ಸೆಂ.ಮೀ) ಹೆಚ್ಚುವರಿ ಮಳೆಯಾಗಿದೆ.

    ಹಿಂಗಾರಿನಲ್ಲಿ ಅಧಿಕ ಮಳೆ: ಪೂರ್ವ ಮುಂಗಾರು, ಮುಂಗಾರು ಮತ್ತು ಹಿಂಗಾರು ಈ ಮೂರು ಅವಧಿಯ ಮಳೆ ಪ್ರಮಾಣ ಅವಲೋಕಿಸಿದರೆ, ಹಿಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿದಿದೆ ಎನ್ನುತ್ತದೆ ಇಲಾಖೆಯ ಅಂಕಿ ಅಂಶ. ದ.ಕ. ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 81.8(ವಾಡಿಕೆ 37.6) ಸೆಂ.ಮೀ ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.118ರಷ್ಟು ಹೆಚ್ಚು. ಮುಂಗಾರಿನಲ್ಲಿ 247.8(ವಾಡಿಕೆ 338.8) ಸೆಂ.ಮೀ. ಮಳೆಯಾಗಿದ್ದು, ಶೇ.27ರಷ್ಟು ಕಡಿಮೆ ಮಳೆಯಾಗಿದೆ. ಪೂರ್ವ ಮುಂಗಾರು ಅವಧಿಯಲ್ಲಿ 66.6 ಸೆಂ.ಮೀ. ಮಳೆಯಾಗಿದ್ದು, 24.3 ಸೆಂ.ಮೀ. ವಾಡಿಕೆ ಮಳೆ.

    ಉಡುಪಿ ಜಿಲ್ಲೆಯಲ್ಲಿ ಹಿಂಗಾರಿನಲ್ಲಿ 73.7(ವಾಡಿಕೆ 31.2) ಸೆಂ.ಮೀ. ಮಳೆಯಾಗಿದ್ದು, ಶೇ.136ರಷ್ಟು ಹೆಚ್ಚು ಸುರಿದಿದೆ. ಮುಂಗಾರಿನಲ್ಲಿ 344.4(ವಾಡಿಕೆ 402.2) ಸೆಂ.ಮೀ. ಮಳೆಯಾಗಿದ್ದು, ಶೇ.14ರಷ್ಟು ಕೊರತೆಯಾಗಿದೆ. ಪೂರ್ವ ಮುಂಗಾರು ಅವಧಿಯಲ್ಲಿ 20.1 ಸೆಂ.ಮೀ. ವಾಡಿಕೆ ಮಳೆಯಲ್ಲಿ 61.6 ಸೆಂ.ಮೀ. ಮಳೆ ಸುರಿದಿದೆ.

    ಒಣ ಹವೆ ಮುಂದುವರಿಕೆ: ಕರಾವಳಿಯ ಅಲ್ಲಲ್ಲಿ ವರ್ಷದ ಮೊದಲ ದಿನವೇ ಸಾಯಂಕಾಲ-ರಾತ್ರಿ ವೇಳೆ ಮಳೆಯಾಗಿದೆ. ಆದರೆ ಇದು ನಿರೀಕ್ಷಿತ ಮಳೆಯಲ್ಲ. ಸದ್ಯ ಮಳೆಯ ಸಾಧ್ಯತೆಯೂ ಇಲ್ಲ. ಕರಾವಳಿಯಾದ್ಯಂತ ಒಣ ಹವೆ ಮುಂದುವರಿಯಲಿದೆ. ಸೆಕೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಹವಾಮಾನದಲ್ಲಿ ವ್ಯತ್ಯಯವಾದರೆ ಕೆಲವೆಡೆ ಸಾಯಂಕಾಲ ಹೊತ್ತು ಹನಿ, ತುಂತುರು ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಹಿಂದಿನ ವರ್ಷಗಳ ಮಳೆ ವಿವರ:
    ವರ್ಷ ಸುರಿದ ಮಳೆ ವ್ಯತ್ಯಾಸ
    ದಕ್ಷಿಣ ಕನ್ನಡ:
    2020 391.7 ಸೆಂ.ಮೀ. ಶೇ.2 ಕೊರತೆ
    2019 405.2 ಸೆಂ.ಮೀ. 0
    2018 434.2 ಸೆಂ.ಮೀ. ಶೇ.7 ಹೆಚ್ಚು
    ಉಡುಪಿ ಜಿಲ್ಲೆ:
    2020 515.9 ಸೆಂ.ಮೀ. ಶೇ.14 ಹೆಚ್ಚು
    2019 515.4 ಸೆಂ.ಮೀ. ಶೇ.13 ಹೆಚ್ಚು
    2018 445.3 ಸೆಂ.ಮೀ. ಶೇ.3 ಕೊರತೆ

    ಶ್ರೀಲಂಕಾ ಭಾಗದಲ್ಲಿ, ಬಂಗಾಳಕೊಲ್ಲಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ತಮಿಳುನಾಡು ಸಹಿತ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಮಳೆಯ ನಿರೀಕ್ಷೆ ಇರಲಿಲ್ಲ. ಆದರೂ ಅಲ್ಲಲ್ಲಿ ಮಳೆಯಾಗಿದೆ. ಸದ್ಯ ಮಳೆಯ ಯಾವುದೇ ಮುನ್ಸೂಚನೆಗಳಿಲ್ಲ. ಒಣ ಹವೆಯೇ ಮುಂದುವರಿಯಲಿದೆ.

    ಸದಾನಂದ ಅಡಿಗ, ಹವಾಮಾನ ತಜ್ಞ, ಐಎಂಡಿ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts