More

    ಸುಳ್ಯ, ಕಡಬದಲ್ಲಿ ಗುಡುಗು ಸಹಿತ ಮಳೆ

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ಬುಧವಾರ ಕೆಲವೆಡೆ ಗುಡುಗು ಸಹಿತ ಗಾಳಿ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧೆಡೆ ಸಾಯಂಕಾಲ ಗುಡುಗು ಸಹಿತ ಗಾಳಿ ಮಳೆ ಸುರಿದಿದೆ.

    ಮಧ್ಯಾಹ್ನವರೆಗೆ ಉತ್ತಮ ಬಿಸಿಲ ವಾತಾವರಣವಿತ್ತು. ಬಳಿಕ ಮೋಡ ಕವಿಯಲು ಆರಂಭಿಸಿ ಅಬ್ಬರದ ಮಳೆ ಸುರಿದಿದೆ. ಸುಬ್ರಹ್ಮಣ್ಯ ಎಡಮಂಗಲ, ಬಿಳಿನೆಲೆ, ಪಾಣಾಜೆ, ಗುತ್ತಿಗಾರು, ಎಣ್ಮೂರು ಮೊದಲಾದೆಡೆ ಮಳೆಯಾಗಿದೆ. ಸುಳ್ಯ ತಾಲೂಕಿನ ಕೆಲವೆಡೆ ಉತ್ತಮ ಮಳೆಯಾದರೂ ಉಳಿದೆಡೆ ಗುಡುಗು, ಮಿಂಚು, ಗಾಳಿಯ ಅಬ್ಬರವೇ ಹೆಚ್ಚಾಗಿತ್ತು. ಗುಡುಗು, ಮಿಂಚು ಹೆಚ್ಚಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಬಹುತೇಕ ರೈತರು ಕೊನೆಯ ಕೊಯ್ಲಿನ ಅಡಕೆ ಅಂಗಳದಲ್ಲೇ ಒಣಗಲು ಹಾಕಿದ್ದರು. ಪೂರ್ವ ಸೂಚನೆ ನೀಡದೆ ಮಳೆ ಸುರಿದ ಪರಿಣಾಮ ಹೆಚ್ಚಿನೆಡೆ ಅಡಕೆ ಒದ್ದೆಯಾಗಿದೆ. ಉಳಿದಂತೆ ಜಿಲ್ಲೆಯ ಇತರ ಭಾಗಗಳಲ್ಲಿ ಉರಿಬಿಸಿಲ ವಾತಾವರಣ ಮುಂದುವರಿದಿದೆ.

    ಉಡುಪಿ ಜಿಲ್ಲೆಯಲ್ಲಿ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ಬುಧವಾರ ಸಾಯಂಕಾಲ 6 ಗಂಟೆ ಬಳಿಕ ಮೋಡ ಕವಿದ ವಾತಾವರಣದೊಂದಿಗೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದೆ. ಹೆಬ್ರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಕೆಲ ಗಂಟೆ ಧಾರಾಕಾರ ಮಳೆ ಸುರಿದಿದೆ. ಶಿರ್ತಾಡಿ, ಮುದ್ದೂರು, ಕೆಂಜೂರು, ಕೊಕ್ಕರ್ಣೆ, ಸಂತೆಕಟ್ಟೆ, ಕಲ್ತುರು, ಆರ್ಡಿ ಪರಿಸರದಲ್ಲಿ ಮಳೆಯಾಗಿದೆ.

    ಪುತ್ತೂರಿನಲ್ಲಿ ಭಾರಿ ಮಳೆ: ತಾಲೂಕಿನ ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಹಲವು ಕಡೆಗಳಲ್ಲಿ ಬುಧವಾರ ರಾತ್ರಿ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದೆ. ರಾತ್ರಿ 7 ಗಂಟೆಯ ವೇಳೆಗೆ ಆರಂಭಗೊಂಡ ಮಳೆ ಸುಮಾರು ಒಂದು ಗಂಟೆಗಳ ಕಾಲ ಸುರಿದಿದೆ. ಪುತ್ತೂರು ಗ್ರಾಮಾಂತರ ವ್ಯಾಪ್ತಿಯ, ಕುಂಬ್ರ, ಕೌಡಿಚ್ಚಾರು, ತಿಂಗಳಾಡಿ, ಕಾವು, ಈಶ್ವರಮಂಗಲ, ಸುಳ್ಯಪದವು ಮೊದಲಾದೆಡೆ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಮಳೆ ಸುರಿದಿದೆ ಎಂದು ವರದಿಯಾಗಿದೆ.

    ಗರಿಷ್ಠ ತಾಪಮಾನ: ಸತತ ಎರಡನೇ ದಿನವೂ ದ.ಕ.ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ದಿನದ ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ಈ ಬಾರಿಯ ಮಾರ್ಚ್ ತಿಂಗಳ ಗರಿಷ್ಠ ಉಷ್ಣಾಂಶ. ಕನಿಷ್ಠ ತಾಪಮಾನದಲ್ಲೂ ಏರಿಕೆ ಕಂಡು ಬಂದಿದ್ದು, ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts