More

    ಕರಾವಳಿಯಲ್ಲಿ ಗಾಳಿ ಮಳೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮೋಡದ ವಾತಾವರಣ ಕಂಡು ಬಂದು ಸಾಯಂಕಾಲ ವೇಳೆಗೆ ಸಿಡಿಲು, ಗಾಳಿ ಸಹಿತ ಉತ್ತಮ ಮಳೆ ಸುರಿದಿದೆ.

    ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ತಾಲೂಕುಗಳಲ್ಲಿ ಸಿಡಿಲು, ಗಾಳಿ ಸಹಿತ ಮಳೆ ಸುರಿದಿದೆ. ಗುತ್ತಿಗಾರು ಯುವಕ ಮಂಡಲ ಕಟ್ಟಡದ ಹೆಂಚು ಹಾರಿದೆ. ಸುಳ್ಯ, ಉಪ್ಪಿನಂಗಡಿ, ಪುತ್ತೂರು ಮೊದಲಾದ ಕಡೆಗಳಲ್ಲಿ ಗಾಳಿಯ ತೀವ್ರತೆಗೆ ಮರಗಳು ಉರುಳಿ ಬಿದ್ದಿವೆ. ತಂತಿಗಳ ಮೇಲೆ ಮರ ಬಿದ್ದ ಕಾರಣ ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿತ್ತು. ನೇತ್ರಾವತಿ, ಕುಮಾರಧಾರಾ, ಪಯಸ್ವಿನಿ ಮೊದಲಾದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಏ.22ರ ತನಕ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಚಾರ್ಮಾಡಿ, ಉಜಿರೆ, ಕಲ್ಮಂಜ, ಕಡಿರುದ್ಯಾವರ, ದಿಡುಪೆ, ಕುಕ್ಕಾವು, ಗುರಿಪಳ್ಳ, ನಿಡಿಗಲ್, ಅಳದಂಗಡಿ, ವೇಣೂರು ಸೇರಿದಂತೆ ತಾಲೂಕಿನ ಅನೇಕ ಭಾಗಗಳಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.

    ಕಳೆದ ಕೆಲವು ದಿನಗಳಿಂದ ಈ ಭಾಗಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಭಾನುವಾರ ಮೋಡ ಕವಿದ ವಾತಾವರಣ, ವಿಪರೀತ ಸೆಕೆ ಇತ್ತು. ಸಂಜೆಯಾಗುತ್ತಿದ್ದಂತೆ ಗುಡುಗಿನೊಂದಿಗೆ ಮಳೆ ಸುರಿದು ಇಳೆ ತಂಪಾಯಿತು. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್, ಅಂತರ್ಜಾಲ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತು. ಹೆದ್ದಾರಿ ಸಹಿತ ಗ್ರಾಮೀಣ ರಸ್ತೆಗಳಲ್ಲಿ ಚರಂಡಿ ತುಂಬಿ ಮಳೆ ನೀರು ರಸ್ತೆಗಳಿಗೆ ನುಗ್ಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಡಬ ತಾಲೂಕಿನಾದ್ಯಂತ ಗುಡುಗು ಸಹಿತ ಧಾರಕಾರ ಮಳೆ ಸುರಿದಿದೆ. ತಾಲೂಕಿನ ಹಳೆನೇರೆಂಕಿ ಗ್ರಾಮ ವ್ಯಾಪ್ತಿಯಲ್ಲಿ ಅಲಿಕಲ್ಲು ಮಳೆಯಾಗಿದೆ. ಮಂಗಳೂರಿನಲ್ಲಿ ಭಾನುವಾರ ಇಡೀ ದಿನ ಬಿಸಿಲಿನ ವಾತಾವರಣವಿದ್ದು ರಾತ್ರಿ ಸಾಧಾರಣ ಮಳೆಯಾಯಿತು, ರಾತ್ರಿ ಸುರಿದ ಮಳೆ ವಾತಾವರಣವನ್ನು ಒಂದಷ್ಟು ತಂಪುಗೊಳಿಸಿದೆ

    ಸಾಧಾರಣ ಮಳೆ, ಗುಡುಗು: ಉಡುಪಿ ಜಿಲ್ಲಾದ್ಯಂತ ಭಾನುವಾರ ರಾತ್ರಿ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಮಧ್ಯಾಹ್ನ ಬಳಿಕ ಮೋಡ ಕವಿದಿತ್ತು. ಮುಸ್ಸಂಜೆ ವೇಳೆ ಗೋಳಿಯಂಗಡಿ, ಕೋಟ, ಕರ್ಜೆ ಕೆಂಜೂರು, ಮುದ್ದೂರು, ಕೊಕ್ಕರ್ಣೆ, ಮಂದಾರ್ತಿ, ಪಡುಬಿದ್ರಿ, ಕಾರ್ಕಳ, ಬೆಳ್ಮಣ್, ಮಣಿಪಾಲ, ಹಿರಿಯಡ್ಕ, ಉಡುಪಿ, ಕುಂದಾಪುರ, ಬೈಂದೂರು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts