More

    ಕರಾವಳಿಯಲ್ಲಿ ಬಿರುಸಿನ ವರ್ಷಧಾರೆ: ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಹೆಚ್ಚು * ಗದ್ದೆ ಜಲಾವೃತವಾಗಿ ರೈತರಿಗೆ ಆತಂಕ

    ಮಂಗಳೂರು/ಉಡುಪಿ: ಹಲವು ದಿನಗಳ ಬಿಸಿಲ ವಾತಾವರಣದ ಬಳಿಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆ ಬಿರುಸು ಪಡೆದಿದೆ. ಮಂಗಳವಾರ ಕೆಲವೆಡೆ ಬೆಳಗ್ಗಿನಿಂದಲೇ ಇನ್ನುಳಿದಂತೆ ಮಧ್ಯಾಹ್ನ ಬಳಿಕ ಮಳೆ ಸುರಿಯಲು ಆರಂಭವಾಗಿದ್ದು, ಬಳಿಕ ನಿರಂತರ ವರ್ಷಧಾರೆಯಾಗಿದೆ.

    ಮುಂಗಾರಿನ ಆರಂಭದ ದಿನಗಳ ರೀತಿಯಲ್ಲಿ ಕಂಡು ಬರುವಂತೆ ಮಳೆಯಾಗಿದ್ದು, ಅನಿರೀಕ್ಷಿತ ಮಳೆಯಿಂದ ಬಹುತೇಕ ಜನಜೀವನ ಅಸ್ತವ್ಯಸ್ತವಾಗಿದೆ. ಘಟ್ಟದ ತಪ್ಪಲಿನ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲೂ ಭಾರಿ ಮಳೆ ಸುರಿದಿದೆ. ಘಟ್ಟದ ಮೇಲಿನ ಭಾಗಗಳಲ್ಲೂ ಮಳೆಯಾಗುತ್ತಿರುವುದರಿಂದ ನದಿ, ತೊರೆಗಳಲ್ಲಿ ನೀರಿನ ಹರಿವು ಮತ್ತೆ ಹೆಚ್ಚಾಗಿದೆ. ತಗ್ಗು ಪ್ರದೇಶದಲ್ಲಿರುವ ತೋಟ, ಗದ್ದೆಗಳಿಗೆ ನೀರು ನುಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ. ಇನ್ನೊಂದೆಡೆ ಗದ್ದೆಯಲ್ಲಿ ಕಟಾವಿಗೆ ಸಿದ್ಧವಾಗಿರುವ ಭತ್ತ ಪೈರು ಅಡ್ಡ ಬಿದ್ದು, ರೈತರಲ್ಲಿ ಆತಂಕಕ್ಕೂ ಕಾರಣವಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ. ಹೆದ್ದಾರಿ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಮಳೆನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ರಸ್ತೆಗಳಲ್ಲಿ ವಾಹನ ದಟ್ಟಣೆ ಕಂಡು ಬಂತು. ಕೆಲವೆಡೆ ಸಣ್ಣಪುಟ್ಟ ಅಪಘಾತಗಳೂ ಸಂಭವಿಸಿವೆ.

    ಮೇಲ್ಮೈ ಸುಳಿಗಾಳಿ ಹಿನ್ನೆಲೆ: ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಮಳೆ ಬಿರುಸಾಗಿದೆ. ಸುಳಿಗಾಳಿಯಿಂದಾಗಿ ಮೋಡಗಳ ನಿರ್ಮಾಣ ಪ್ರಕ್ರಿಯೆಗೆ ವೇಗ ಸಿಕ್ಕಿದ್ದು, ಗಾಳಿಯೂ ಸೇರಿಕೊಂಡಿದೆ. ದಕ್ಷಿಣ ಭಾರತ ವ್ಯಾಪ್ತಿಯಲ್ಲಿ ಹವಾಮಾನದಲ್ಲಿ ಟ್ರಫ್ ಉಂಟಾಗಿದ್ದು, ಇದೂ ಮಳೆಗೆ ಕಾರಣವಾಗಿದೆ. ಬಂಗಾಳ ಕೊಲ್ಲಿಯ ಉತ್ತರ ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯೂ ಇದ್ದು, ಇವೆಲ್ಲ ಮಳೆಗೆ ಪೂರಕ ವಾತಾರಣವಾಗಿದೆ. ಅ.16ರ ವರೆಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಗೆ ಇನ್ನೂ ನಾಲ್ಕು ದಿನ ಯೆಲ್ಲೋ ಅಲರ್ಟ್ ಮುಂದುವರಿದಿದೆ.

    ಮಡಂತ್ಯಾರಿನಲ್ಲಿ 145 ಮಿ.ಮೀ.: ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿ ಮಂಗಳವಾರ ದ.ಕ.ಜಿಲ್ಲೆಯ ಗರಿಷ್ಠ ಮಳೆ (145 ಮಿ.ಮೀ) ದಾಖಲಾಗಿದೆ. ಉಳಿದಂತೆ ಬೆಳ್ತಂಗಡಿ ತಾಲೂಕಿನ ಹಲವಡೆಗಳಲ್ಲಿ 100 ಮಿ.ಮೀ.ಗಿಂತಲೂ ಅಧಿಕ ಮಳೆಯಾಗಿದ್ದು, ಆಳದಂಗಡಿಯಲ್ಲಿ 126.5, ಪಡಂಗಡಿ 123.5, ಬೆಳ್ತಂಗಡಿಯಲ್ಲಿ 113.5, ಮೂಡುಬಿದಿರೆಯ ಪುತ್ತಿಗೆಯಲ್ಲಿ 123 ಮಿ.ಮೀ. ಮಳೆಯಾಗಿದೆ.

    ಉಡುಪಿಯಲ್ಲಿ ಕೃತಕ ನೆರೆ: ಉಡುಪಿ ನಗರದಲ್ಲಿ ಒಮ್ಮೆಲೆ ಸುರಿದ ಮಳೆಯಿಂದಾಗಿ ಜನರು ಪರದಾಡುವಂತಾಯಿತು. ಕಲ್ಸಂಕ, ಸಿಟಿ ಬಸ್‌ನಿಲ್ದಾಣ, ಕೆಎಂ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ರಸ್ತೆ ಇಕ್ಕೆಲಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಕಲ್ಸಂಕ ಬಡಗುಪೇಟೆ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಜಲಾವೃತಗೊಂಡಿದೆ. ಪರಿಣಾಮ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕೃಷ್ಣಮಠ ರಾಜಾಂಗಣ ಪ್ರದೇಶ, ಮೂಡನಿಡಂಬಳ್ಳಿ, ಗುಂಡಿಬೈಲು ಪ್ರದೇಶದ ಕೆಲ ರಸ್ತೆಗಳು ಜಲಾವೃತಗೊಂಡು ವಾಹನ ಓಡಾಟಕ್ಕೆ ಪರದಾಡುವಂತಾಗಿತ್ತು. ಕಾಪು, ಕುಂದಾಪುರ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆ ಕಾಲ ಸರಾಸರಿ 23 ಮಿ.ಮೀ. ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts