More

    ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, ನದಿತೀರದಲ್ಲಿ ನೆರೆಭೀತಿ

    ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಆರ್ಭಟ ಜೋರಾಗಿದ್ದು, ಮೋಡಕವಿದ ವಾತಾವರಣ ಆವರಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತವಾಗಿದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

    ಕುಂದಾನಗರಿ ಬೆಳಗಾವಿಯಲ್ಲಿ ಎಡೆಬಿಡದೆ ಮಳೆ ಸುರಿದಿದೆ. ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತವಾಗಿವೆ. ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ್- ಭೀವಶಿ, ಅಕ್ಕೋಳ- ಸಿದ್ದನಾಳ, ಭೋಜವಾಡಿ ಕುಣ್ಣೂರ, ಭೋಜವಾಡಿ-ಹುಣ್ಣರಗಿ ಸೇತುವೆಗಳು, ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಾರವಾಡ- ಕುಣ್ಣೂರ, ಕಾರದಗಾ-ಭೋಜ ಸೇತುವೆ ಜಲಾವೃತವಾಗಿದ್ದು, ಜನರು ಪರದಾಡುತ್ತಿದ್ದಾರೆ. ನದಿತೀರದ ಗ್ರಾಮಸ್ಥರಲ್ಲಿ ನೆರೆಭೀತಿ ಆವರಿಸಿದೆ.

    ಇದನ್ನೂ ಓದಿರಿ ಸಿಎಂ ಯಡಿಯೂರಪ್ಪಗೆ ವರ್ಕ್​ ಫ್ರಮ್ ಹಾಸ್ಪಿಟಲ್

    ಧಾರವಾಡ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಡೀ ನಗರದಲ್ಲಿ ಮಬ್ಬಗತ್ತಲು ವಾತಾವರಣವಿದ್ದು, ಹಗಲಿನಲ್ಲೂ ಲೈಟ್ ಹಾಕಿಕೊಂಡೇ ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಜನರು ಮನೆಬಿಟ್ಟು ಹೊರಬಾರದ ಸ್ಥಿತಿಯಲ್ಲಿದ್ದರು. ಬುಧವಾರ ಬೆಳಗ್ಗೆ 11 ಗಂಟೆಯಾದರೂ ಮಾರುಕಟ್ಟೆ ಪ್ರದೇಶ ಓಪನ್ ಆಗಿರಲಿಲ್ಲ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವ ಆತಂಕ ಮನೆಮಾಡಿದೆ.

    ಯಲ್ಲಾಪುರದಲ್ಲೂ ಭಾರಿ ಮಳೆಯಾಗಿದ್ದು, ಬೇಡ್ತಿ ನದಿ ತುಂಬಿ ಹರಿಯುತ್ತಿದೆ. ಗುಳ್ಳಾಪುರದಲ್ಲಿ ಸೇತುವೆಗೆ ತಾಗಿ ನದಿ ಹರಿಯುತ್ತಿದೆ. ಹೆಗ್ಗಾರ, ಹಳವಳ್ಳಿ ಭಾಗದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಆವರಿಸಿದೆ.

    ಕೇರಳದ ವೈನಾಡು ಭಾಗದಲ್ಲಿ ಮಳೆ ಬಿರುಸುಗೊಂಡಿದ್ದು, ಕಬಿನಿ ಜಲಾಶಯದ ಒಳ ಮತ್ತು ಹೊರ ಹರಿವು ಹೆಚ್ಚಳವಾಗಿದೆ. ಕಬಿನಿ ಜಲಾಶಯದಲ್ಲಿ ಇಂದಿನ ನೀರಿನಮಟ್ಟ 2279.87 ಅಡಿ ಇದೆ(ಗರಿಷ್ಠ ಮಟ್ಟ 2284). ಪ್ರವಾಹ ಭೀತಿ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ನೀಡಿದೆ. ಚಿಕ್ಕಮಗಳೂರಿನ ಕಳಸ, ಕುದುರೆಮುಖ, ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭದ್ರ, ತುಂಗಾ, ಹೇಮಾವತಿ ನದಿಗಳ ಹರಿವು ಹೆಚ್ಚಾಗಿದೆ. ದಾವಣಗೆರೆಯಲ್ಲೂ ಜಿಟಿಜಿಟಿ ಮಳೆಯಾಗುತ್ತಿದ್ದು, ಮೋಡಕವಿದ ವಾತಾವರಣ ಆವರಿಸಿದೆ. ದಾವಣಗೆರೆಯೀಗ ಮಲೆನಾಡಿನಂತೆ ಕಾಣುತ್ತಿದೆ.

    ನೀರಲ್ಲಿ ಕಾಯುತ್ತಿದ್ದ ಜವರಾಯ ಅಪ್ಪ-ಮಗನನ್ನೂ ಬಿಡಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts