More

    ಕುಗ್ಗಿದ ಮಳೆ ಪ್ರಭಾವ

    ಮಂಗಳೂರು/ಉಡುಪಿ: ಕಳೆದೊಂದು ವಾರದಿಂದ ದ.ಕ ಜಿಲ್ಲೆಯಲ್ಲಿ ಬಿಡದೆ ಅಬ್ಬರಿಸುತ್ತಿದ್ದ ಮಳೆಯ ತೀವ್ರತೆ ಸೋಮವಾರ ಸ್ವಲ್ಪ ಕಡಿಮೆಯಾಗಿದೆ. ಜಿಲ್ಲಾದ್ಯಂತ ದಿನವಿಡೀ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಘಟ್ಟದಲ್ಲಿ ಮಳೆಯ ಸ್ವಲ್ಪ ಇಳಿಕೆಯಾಗಿರುವುದರಿಂದ ನದಿಗಳಲ್ಲಿ ನೆರೆ, ಪ್ರವಾಹ ಸ್ವಲ್ಪ ತಗ್ಗಿದೆ. ತಗ್ಗು ಪ್ರದೇಶಗಳಲ್ಲಿ ವಾಸವಾಗಿದ್ದವರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
    ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಹಗಲು ವೇಳೆ ಸಾಧಾರಣ ಮಳೆಯಾಗಿದ್ದು, ತಾಲೂಕಿನ ಮುನ್ನೂರು, ಪೆರ್ಮನ್ನೂರು, ಚೇಳಾರು ಮೊದಲಾದೆಡೆ ಮನೆಗಳಿಗೆ ಹಾನಿಯಾಗಿದೆ. ಸಮುದ್ರದಲ್ಲಿ ಇನ್ನೂ ಬಲವಾದ ಗಾಳಿ ಬೀಸುತ್ತಿರುವುದರಿಂದ ಕಡಲು ಕೊರೆತ ಮುಂದುವರಿದಿದೆ. ಉಳ್ಳಾಲ ಸೋಮೇಶ್ವರ, ಉಚ್ಚಿಲ, ತಣ್ಣೀರುಬಾವಿ, ಬೈಕಂಪಾಡಿ ಮೊದಲಾದೆಡೆ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

    ಮಂಗಳವಾರ ಮುಂಜಾನೆವರೆಗೆ ಆರೆಂಜ್ ಅಲರ್ಟ್, ಬಳಿಕ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರಸ್ತುತ ಬುಧವಾರದಿಂದ ಮುನ್ನೆಚ್ಚರಿಕೆ ನೀಡಿಲ್ಲ. ಮಳೆ ಅಬ್ಬರ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.

    ಕೊಲ್ಲೂರಿನಲ್ಲಿ ಅಧಿಕ ಮಳೆ: ಸೋಮವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಕೊಲ್ಲೂರಿನಲ್ಲಿ ರಾಜ್ಯದಲ್ಲೇ ಅತ್ಯಧಿಕ 190 ಮಿ.ಮೀ.ಮಳೆ ಸುರಿದಿದೆ. ಸಿದ್ಧಾಪುರ ಮತ್ತು ಕೋಟದಲ್ಲಿ 150, ಮೂಡುಬಿದಿರೆಯಲ್ಲಿ 130, ಮಂಗಳೂರು ವಿಮಾನ ನಿಲ್ದಾಣದಲ್ಲಿ 120, ಬಂಟ್ವಾಳದಲ್ಲಿ 114.9, ಬೆಳ್ತಂಗಡಿಯಲ್ಲಿ 87.7, ಮಂಗಳೂರಿನಲ್ಲಿ 104.9, ಪುತ್ತೂರಿನಲ್ಲಿ 67.2, ಸುಳ್ಯದಲ್ಲಿ 82 ಮಿ. ಮೀ.ಸೇರಿದಂತೆ ಜಿಲ್ಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಸರಾಸರಿ 91.3 ಮಿ.ಮೀ. ಮಳೆ ಸುರಿದಿದೆ.

    ಉಡುಪಿಯಲ್ಲಿ 11 ಮನೆಗಳಿಗೆ ಹಾನಿ: ಉಡುಪಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದ್ದರೂ, ಬಿಟ್ಟುಬಿಟ್ಟು ನಿರಂತರ ಮಳೆಯಾಗುತ್ತಿದೆ. ಭಾನುವಾರ ತಡರಾತ್ರಿ, ಸೋಮವಾರ ಇಡೀ ದಿನ ಸುರಿದ ಗಾಳಿ ಮಳೆಗೆ ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ. ಜಿಲ್ಲೆಯ 11 ಮನೆಗಳಿಗೆ ಭಾನುವಾರ ರಾತ್ರಿ ಹಾನಿಯಾಗಿದೆ. ಕುಂದಾಪುರ ತಾಲೂಕಿನ ಜಪ್ತಿ, ವಡೇರಹೋಬಳಿ, ಕಾಪು ತಾಲೂಕಿನ ಬೆಳಪು, ಕಳತ್ತೂರು, ಬ್ರಹ್ಮಾವರ ತಾಲೂಕಿನ ಹೇರಾಡಿ, ಐರೋಡಿ, ಗುಂಡ್ಮಿ, ನಡೂರು, ವಾರಂಬಳ್ಳಿ, ಕಾರ್ಕಡ, ಚಾಂತಾರು ಗ್ರಾಮದ ಮನೆಗಳಿಗೆ ಹಾನಿ ಸಂಭವಿಸಿದೆ. ಸೌಪರ್ಣಿಕಾ, ಸೀತಾ, ಸ್ವರ್ಣಾ ನದಿಗಳು ಅಪಾಯಮಟ್ಟದಲ್ಲೇ ಹರಿಯುತ್ತಿದೆ. ಸ್ವರ್ಣಾ ನದಿ ಬಜೆ ಡ್ಯಾಂನಲ್ಲಿ ನೀರಿನ ಮಟ್ಟ 7.10 ಮೀಟರ್ ಇದೆ. ಮರವಂತೆ, ಕಾಪು, ಪಡುಬಿದ್ರಿ, ಮಲ್ಪೆ ಕಡಲ ತೀರದಲ್ಲಿ ಸಮುದ್ರ ಅಲೆಗಳ ಅಬ್ಬರ ಮುಂದುವರಿದಿದ್ದು, ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.

    103 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಏ.1ರಿಂದ ಆ.10ರ ವರೆಗೆ 2065 ಮಿ.ಮೀ.ಮಳೆಯಾಗಿದ್ದು, ಒಟ್ಟು 103.56 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಈ ಪೈಕಿ 91.2 ಹೆಕ್ಟೇರ್ ಕೃಷಿ ಇಲಾಖೆ ಹಾಗೂ 12.36 ಹೆಕ್ಟೇರ್ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದೆ. ಮಳೆಯಿಂದಾಗಿ ಒಟ್ಟು 4 ಮಂದಿ ಮೃತಪಟ್ಟಿದ್ದಾರೆಂದು ಜಿಲ್ಲಾ ವಿಕೋಪ ನಿರ್ವಹಣಾ ಸಮಿತಿ ವರದಿ ತಿಳಿಸಿದೆ.

    ಕಂಪನದೊಂದಿಗೆ ಜಲ್ಲದಗುಡ್ಡ ಕುಸಿತ
    ಪುತ್ತೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅರಣ್ಯ ವ್ಯಾಪ್ತಿಯಲ್ಲಿ ಸೋಮವಾರ ಬೆಳಂಬೆಳಗ್ಗೆ ಅಲ್ಪಮಟ್ಟಿನ ಕಂಪನದೊಂದಿಗೆ ಭೂಕುಸಿತ ಸಂಭವಿಸಿದೆ. ಹಿರಿಮರಿಗುಪ್ಪಿ ಮತ್ತು ಕೃಷ್ಣಗಿರಿ ಬೆಟ್ಟದ ಮಧ್ಯಭಾಗ ಬೊಳ್ಳೆ ಜಲಪಾತ ಹರಿಯುತ್ತಿದ್ದು, ಇದರ 1.5 ಕಿ.ಮೀ.ದೂರದಲ್ಲಿರುವ ಜಲ್ಲದಗುಡ್ಡ ತೀವ್ರ ಮಳೆಗೆ ಸೋಮವಾರ ಬೆಳಗ್ಗೆ ಕುಸಿದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾವನ ಬೆಳ್ತಂಗಡಿ ವಿಭಾಗದ ಅರಣ್ಯ ವ್ಯಾಪ್ತಿಯ ಮಲವಂತಿಗೆ ಗ್ರಾಮದ ನಡ್ತಿಕ್ಲಲು, ಹಳ್ಳದಕಾಡು ಪ್ರದೇಶದಿಂದ 6 ಕಿ.ಮೀ ದೂರದ ಈ ಅರಣ್ಯ ವ್ಯಾಪ್ತಿಯಲ್ಲಿ ಭೂ ಕುಸಿತವಾಗಿದೆ. 6 ಎಕರೆ ಬೆಟ್ಟ ಪ್ರದೇಶದಲ್ಲಿ ಮಣ್ಣು ಸಹಿತ ಬಂಡೆ, ಕಲ್ಲು ಹರಡಿಕೊಂಡಿದೆ. ಕುಸಿತದ ವೇಳೆ ನಡ್ತಿಕ್ಲಲು, ಹಳ್ಳದಕಾಡು ಅಲ್ಪಮಟ್ಟಿನ ಕಂಪನದ ಅನುಭವವಾಗಿದ್ದು, ಪ್ರಾಣ ಹಾನಿಯಾಗಿಲ್ಲ.

    ಕಾಸರಗೋಡಿನಲ್ಲಿ ಆರೆಂಜ್ ಅಲರ್ಟ್
    ಕಾಸರಗೋಡು: ಕೇರಳದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಕಾಸರಗೋಡು ಒಳಗೊಂಡಂತೆ ಎಂಟು ಜಿಲ್ಲೆಗಳಲ್ಲಿ ಆ.11ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಲೆನಾಡು ಪ್ರದೇಶಗಳಲ್ಲಿ ಮತ್ತಷ್ಟು ಭೂಕುಸಿತ ಸಹಿತ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆಯಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

    ತೊಡಂಬಿಲದಲ್ಲಿ ಭೂಕುಸಿತ, ಅಪಾಯದಲ್ಲಿ ಮನೆ
    ಬಂಟ್ವಾಳ: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ತೊಡಂಬಿಲ ಎಂಬಲ್ಲಿ ಭೂಕುಸಿತ ಉಂಟಾಗಿ ಅನಿಲ್ ಮೊಂತೆರೊ ಎಂಬುವರ ಮನೆ ಅಪಾಯಕ್ಕೆ ಸಿಲುಕಿದೆ. ಮನೆಯ ಎಡಭಾಗದಲ್ಲಿದ್ದ ನಾಯಿಗೂಡು ಮನೆಯಿಂದ ಪ್ರತ್ಯೇಕಗೊಂಡು ಧರಾಶಾಹಿಯಾಗಿದೆ. ಮನೆಯ ಹಿಂಭಾಗದಲ್ಲಿ ಮಣ್ಣು ಕುಸಿದು ತೆಂಗಿನಮರ, ಅಡಕೆ ಮರಗಳು ಉರುಳಿವೆ. ಅಂಗಳದಲ್ಲೂ ಬಿರುಕು ಕಾಣಿಸಿಕೊಂಡು ಮನೆ ಕುಸಿಯುವ ಹಂತಕ್ಕೆ ತಲುಪಿದೆ. ಮಧ್ಯರಾತ್ರಿ ವೇಳೆ ಭೂಕುಸಿತ ಉಂಟಾದರೂ ಬೆಳಗ್ಗೆ ಮನೆಮಂದಿ ಎದ್ದ ಬಳಿಕವೇ ಘಟನೆ ಬೆಳಕಿಗೆ ಬಂದಿದ್ದು, ಮನೆಮಂದಿ ಆತಂಕಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts