More

    ಮಳೆ ನಿಂತರೂ ನಿಲ್ಲದ ಪ್ರವಾಹ ಆತಂಕ!

    ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಅರ್ಬಟ ತಗ್ಗಿರುವ ಬೆನ್ನಲ್ಲೆ ನದಿಗಳ ಪ್ರವಾಹ ರೌದ್ರತೆ ಹೆಚ್ಚಾಗಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ದಡದಲ್ಲಿರುವ ಗ್ರಾಮಸ್ಥರು ಪ್ರವಾಹದಿಂದ ತತ್ತರಿಸಿದ್ದಾರೆ. ನದಿ ದಡದ ಪ್ರವಾಹ ಪೀಡಿತ ಗ್ರಾಮಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬೆಳಗಾವಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

    ಕಳೆದ ಒಂದು ವಾರದಿಂದ ಭಾರಿ ಮಳೆಯಿಂದ ಜಲಪ್ರಳಯದ ಸ್ಥಿತಿಯನ್ನು ಅನುಭವಿಸಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ, ಚಿಕ್ಕೋಡಿ, ಬೆಳಗಾವಿ, ಅಥಣಿ, ಗೋಕಾಕ, ಮೂಡಲಗಿ ಇನ್ನಿತರ ಕಡೆ ಮಳೆ ಬಿಡುವು ನೀಡಿದೆ. ಮಹಾರಾಷ್ಟ್ರದ ಕೊಯ್ನ ಜಲಾಶಯ, ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಹಾಗೂ ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಗಡೆ ಬಿಡುತ್ತಿರುವುದರಿಂದ ಜನರ ಅತಂಕ ದೂರವಾಗಿಲ್ಲ.

    ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ಒಳಹರಿವು ಹೆಚ್ಚಾಗಿದ್ದರಿಂದ ಜಿಲ್ಲೆಯ 6 ತಾಲೂಕು ವ್ಯಾಪ್ತಿಯ 80ಕ್ಕೂ ಅಧಿಕ ಗ್ರಾಮಗಳಲ್ಲಿ ಆವರಿಸಿರುವ ಪ್ರವಾಹದ ನೀರು ಕಡಿಮೆ ಆಗದ ಕಾರಣ ಗ್ರಾಮಸ್ಥರು ಪರಿಹಾರ ಸಾಮಗ್ರಿ, ಔಷಧ ಪಡೆಯುವುದು ಕಷ್ಟವಾಗಿ ಪರಿಣಮಿಸಿದೆ. ಮಳೆ ಮುಂದುವರಿದರೆ ಹೆಚ್ಚಿನ ಆತಂಕ ಕಾಡಲಿದೆ.

    ಮಂಗಳವಾರ ಬೆಳಗ್ಗೆ ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ 55,958 ಕ್ಯೂಸೆಕ್ ನೀರು ಸೇರಿ ವಿವಿಧ ನದಿಗಳಿಂದ ಕೃಷ್ಣಾ ನದಿಗೆ 1.93 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಲ್ಲದೆ ಹಿಡಕಲ್ ಜಲಾಶಯದಿಂದ 39592 ಕ್ಯೂಸೆಕ್, ಬಳ್ಳಾರಿ ನಾಲಾ 15100 ಕ್ಯೂಸೆಕ್, ಮಾರ್ಕೆಂಡೆಯ 10925 ಕ್ಯೂಸೆಕ್, ಹಿರಣ್ಯಕೇಶಿ 18056 ಕ್ಯೂಸೆಕ್ ಸೇರಿದಂತೆ ಘಟಪ್ರಭಾ ನದಿಗೆ 82295 ಕ್ಯೂಸೆಕ್ ನೀರು ಹಾಗೂ ನವೀಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 21964 ಕ್ಯೂಸೆಕ್ ನೀರು ಹರಿದು ಬರುತ್ತಿರುವುದು ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ.

    ಸಾವಿರಾರು ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮತ್ತು ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕೆಂಡೆಯ ನದಿಗಳು ಹಾಗೂ ಬಳ್ಳಾರಿ ನಾಲಾ ಪ್ರವಾಹದಿಂದಾಗಿ 11 ತಾಲೂಕುಗಳಲ್ಲಿನ ಕಬ್ಬು, ಭತ್ತ, ಶೇಂಗಾ, ಮೆಕ್ಕೆಜೋಳ, ಹೆಸರು ಸೇರಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಜಲಾವೃತಗೊಂಡು ನಾಶವಾಗಿವೆ. ಅಲ್ಲದೆ ರಾಶಿ ಹಂತದಲ್ಲಿದ್ದ ಹೆಸರು, ಮೆಕ್ಕೆಜೋಳ ಬೆಳೆಗಳು ಸಂಪೂರ್ಣ ಹಾಳಾಗಿವೆ. ಪರಿಣಾಮ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    130ಕ್ಕೂ ಅಧಿಕ ಮನೆಗಳ ಕುಸಿತ: ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ 130 ಅಧಿಕ ಮನೆಗಳು ಕುಸಿದು ಸಾಕಷ್ಟು ಹಾನಿ ಸಂಭವಿಸಿದೆ. ರಾಮದುರ್ಗ, ಗೋಕಾಕ, ಚಿಕ್ಕೋಡಿ ಹಾಗೂ ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ 115ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ, ಬೆಳಗಾವಿ ನಗರದಲ್ಲಿ ಮನೆಯ ಗೋಡೆಗಳು ಕುಸಿದು ಹಾನಿ ಸಂಭವಿಸಿದೆ. ಆದರೆ, ಸಾವು-ನೋವು ಸಂಭವಿಸಿಲ್ಲ ಎಂದು ಆಯಾ ತಾಲೂಕು ತಹಸೀಲ್ದಾರ್‌ಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts