More

    ಹಾವೇರಿ ಜಿಲ್ಲೆಯ ಗುತ್ತಿಗೆದಾರರ 280 ಕೋಟಿ ರೂ. ಬಿಲ್ ಬಾಕಿ!

    ಕೇಶವಮೂರ್ತಿ ವಿ.ಬಿ. ಹಾವೇರಿ

    ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿರುವ ರಾಜ್ಯ ಸರ್ಕಾರ ಗುತ್ತಿಗೆದಾರರ ಸಾವಿರಾರು ಕೋಟಿ ರೂ. ಬಿಲ್ ಪಾವತಿಸಲು ಹರಸಾಹಸ ಪಡುತ್ತಿದೆ. ಜಿಲ್ಲೆಯಲ್ಲೂ ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರರಿಗೆ ಬರೋಬ್ಬರಿ 280 ಕೋಟಿ ರೂ. ಬಾಕಿ ಬರಬೇಕಿದೆ.

    ಅತಿವೃಷ್ಟಿ, ಜಿಲ್ಲಾ ಮತ್ತು ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು, ಮೇಲ್ಸೇತುವೆ ಸೇರಿದಂತೆ ಜಿಲ್ಲೆಯಾದ್ಯಂತ ಲೊಕೋಪಯೋಗಿ ಇಲಾಖೆಯಿಂದ ಮಂಜೂರಾದ ವಿವಿಧ ಕಾಮಗಾರಿಗಳ ಬಿಲ್​ಗಳು ಬಾಕಿ ಉಳಿದುಕೊಂಡಿವೆ. 2022ರ ಜೂನ್​ನಿಂದ ಈವರೆಗೆ ಪಾವತಿ ಆಗಿಲ್ಲ. ಕಾಮಗಾರಿ ಕೆಲಸಗಳಿಗೆ ಬಡ್ಡಿ ಆಧಾರದಲ್ಲಿ ಸಾಲ ಪಡೆದಿದ್ದ ಗುತ್ತಿಗೆದಾರರು ಬಿಲ್ ಪಾವತಿ ವಿಳಂಬದಿಂದಾಗಿ ಹೊಲ, ಮನೆ, ಸೈಟ್ ಅಡವಿಟ್ಟು ಸಾಲ ಪಾವತಿಸುವಂತಹ ದುಸ್ಥಿತಿ ಎದುರಾಗಿದೆ.

    ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚುವುದು, ನಿರ್ವಹಣಾ ಕಾಮಗಾರಿ, ಕಟ್ಟಡ, ಸೇತುವೆ, ಮತ್ತಿತರ ಕಾಮಗಾರಿಗಳ ಕೋಟ್ಯಂತರ ರೂ. ಬಾಕಿ ಉಳಿದಿದೆ. ಬ್ಯಾಂಕ್​ಗಳಲ್ಲಿ ಸಾಲ ತೆಗೆದುಕೊಂಡು ಕಾಮಗಾರಿ ನಡೆಸಿದ್ದ ಗುತ್ತಿಗೆದಾರರು ಬಡ್ಡಿ, ಕಂತು ಕಟ್ಟುವಲ್ಲಿ ಸುಸ್ತು ಹೊಡೆದಿದ್ದಾರೆ. ಇನ್ನಾದರೂ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಬೇಕು ಎಂಬುದು ಗುತ್ತಿಗೆದಾರರ ಆಗ್ರಹವಾಗಿದೆ.

    ಪ್ರತಿ ತಿಂಗಳು ಬಾಕಿ ಬಿಲ್ ಕುರಿತು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆ ಆದರೂ ರಾಜ್ಯ ಸರ್ಕಾರದಿಂದ ಆಗಾಗ ಸರಾಸರಿ ಶೇ. 10ರಷ್ಟು ಅನುದಾನ ಮಾತ್ರ ಬಿಡುಗಡೆ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಟ್ರಾಫಿಕ್ ಮತ್ತು ಇತರೆ ಕಾರಣಗಳಿಂದ ಬಿದ್ದಿರುವ ತಗ್ಗು ಗುಂಡಿ ಮುಚ್ಚಲು ಅನುದಾನದ ಕೊರತೆ ಉಂಟಾಗಿದೆ.

    ರಾಜ್ಯ ಹೆದ್ದಾರಿ ಉನ್ನತೀಕರಿಸಿದ 40 ಕಾಮಗಾರಿಗಳ ಬಿಲ್ 40 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಶಿರಸಿ- ಹಾವೇರಿ- ಗುತ್ತಲ ಸಂರ್ಪಸುವ ಶಿರಸಿ-ಮೊಳಕಾಲ್ಮೂರ ಹೆದ್ದಾರಿ, ಹಾವೇರಿ- ಹಾನಗಲ್ಲ, ಹಾವೇರಿ- ಕಾಗಿನೆಲೆ- ಸಾಗರ ರಾಜ್ಯ ಹೆದ್ದಾರಿ ಸೇರಿದಂತೆ ಇತರ ಪ್ರಮುಖ ರಸ್ತೆಗಳ ನಿರ್ವಣದ ಬಿಲ್​ಗಳು ಬಾಕಿ ಇವೆ.

    ಜಿಲ್ಲಾ ರಸ್ತೆ, 145 ಕೋಟಿ ಬಾಕಿ

    ಜಿಲ್ಲೆಯ ಪ್ರಮುಖ ರಸ್ತೆಗಳ 147 ಕಾಮಗಾರಿಗಳಿಗೆ ಒಟ್ಟು 145 ಕೋಟಿ ರೂ. ಬಿಲ್ ಪಾವತಿ ಬಾಕಿ ಇದೆ. ದೇವಿಹೊಸೂರು- ಸಂಗೂರು, ದೇವಗಿರಿ ಕ್ರಾಸ್​ನಿಂದ ಹೊಸಳ್ಳಿ, ದೇವಗಿರಿ- ಕರ್ಜಗಿ, ಕರ್ಜಗಿ- ಸವಣೂರ, ಸವಣೂರ ರೈಲ್ವೆ ನಿಲ್ದಾಣ- ಕಡಕೋಳ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಬಿಲ್ ಹಣ ಬಿಡುಗಡೆಯಾಗಬೇಕಿದೆ.

    ಅತಿವೃಷ್ಟಿ ಹಾನಿ ಕಾಮಗಾರಿ

    2021-22ರ ಅವಧಿಯಲ್ಲಿ ಅತಿವೃಷ್ಟಿಯಿಂದ ಹಾಳಾದ ರಸ್ತೆ, ಮೇಲ್ಸೇತುವೆ ಸೇರಿದಂತೆ ಇತರ ಕಾಮಗಾರಿಗಳನ್ನು ನಡೆಸಿದ ಕೋಟ್ಯಂತರ ರೂ. ಬಿಲ್ ಬಾಕಿ ಇದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದಿದ್ದರೂ ಬಾಕಿ ಹಣ ಬಾರದ ಕಾರಣ ಉಳಿದ ಕಾಮಗಾರಿ ಅರ್ಧಕ್ಕೆ ನಿಂತ ಅನೇಕ ಉದಾಹರಣೆಗಳಿವೆ. ಅನೇಕ ಕಾಮಗಾರಿ ಪೂರ್ಣಗೊಂಡಿದ್ದರೂ ಬಿಲ್ ಮಾತ್ರ ಬಾಕಿ ಉಳಿದುಕೊಂಡಿದೆ.

    ಹಣ ಬಿಡುಗಡೆ ತಡೆಗೆ ಆದೇಶ

    ಬಿಲ್​ಗಳ ಅಸಲಿತನವನ್ನು ಪರಿಶೀಲಿಸಿದ ನಂತರ ಮತ್ತು ಸಚಿವರೊಂದಿಗೆ ಸಮಾಲೋಚಿಸಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಾದ್ಯಂತ ಚಾಲ್ತಿಯಲ್ಲಿರುವ ಯೋಜನೆಗಳ ಬಾಕಿಯನ್ನು ಪಾವತಿಸಲು ರಾಜ್ಯ ಸರ್ಕಾರ ಜೂನ್​ನಲ್ಲಿ ಅಧಿಕಾರಿಗಳಿಗೆ ಸೂಚಿಸಿತ್ತು. ಹಿಂದಿನ ಬಿಜೆಪಿ ಸರ್ಕಾರ ಪ್ರಾರಂಭಿಸಿದ್ದ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮತ್ತು ಬಿಡುಗಡೆಯನ್ನು ತಡೆಹಿಡಿಯುವಂತೆ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ರಾಜ್ಯದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿತ್ತು.

    280 ಕೋಟಿ ರೂ. ಬಾಕಿ ಇರುವುದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಬ್ಯಾಂಕ್​ಗಳಲ್ಲಿದ್ದ ಗೌರವ ಕಡಿಮೆಯಾಗಿದೆ. ಕೆಲವರು ಹೊಲ ಮಾರಿ ಗುತ್ತಿಗೆ ಕಾಮಗಾರಿಯ ಬ್ಯಾಂಕ್ ಸಾಲ ಬಾಕಿ ಪಾವತಿಸಿದ ಉದಾಹರಣೆಗಳಿವೆ. ಸರ್ಕಾರ ಆದಷ್ಟು ಬೇಗ ಬಾಕಿ ಹಣ ಬಿಡುಗಡೆ ಮಾಡಬೇಕು.

    | ಮಹೇಶ ಹಾವೇರಿ, ಉಪಾಧ್ಯಕ್ಷ, ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ

    2023ರ ಏಪ್ರಿಲ್​ನಿಂದ ಈವರೆಗೆ ಸರ್ಕಾರದಿಂದ ಗುತ್ತಿಗೆದಾರರ ಬಾಕಿ ಬಿಲ್ 48.3 ಕೋಟಿ ರೂ. ಬಿಡುಗಡೆಯಾಗಿದೆ. ಉಳಿದ ಬಿಲ್ ಪಾವತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    | ಮಹಾಬಲೇಶಪ್ಪ ಕೆ., ಕಾರ್ಯನಿರ್ವಾಹಕ ಇಂಜಿನಿಯರ್, ಪಿಡಬ್ಲ್ಯುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts