More

    ಹಿಂಗಾರಿ ಬೆಳೆಗೆ ಮಳೆ ಆತಂಕ

    ರಾಣೆಬೆನ್ನೂರ: ನಾಲ್ಕು ದಿನದಿಂದ ರಾತ್ರಿ ಹಾಗೂ ಬೆಳಗಿನ ಜಾವ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಹಿಂಗಾರಿ ಬೆಳೆದಿರುವ ತಾಲೂಕಿನ ರೈತರು ಆತಂಕಕ್ಕೆ ಒಳಗಾಗುವಂತಾಗಿದೆ.

    ಜೋಳ, ಕಡಲೆ, ಅಲಸಂದಿ, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆಗೆ ಈಗ ಬಿಸಿಲಿನ ಅವಶ್ಯಕತೆಯಿದೆ. ಆದರೆ, ಹಗಲಿನಲ್ಲಿ ಮೋಡಕವಿದ ವಾತಾವರಣವಿದ್ದರೆ, ರಾತ್ರಿ ಮತ್ತು ನಸುಕಿನಲ್ಲಿ ಮಳೆಯಾಗುತ್ತಿದೆ. ಹೀಗಾಗಿ ತೇವಾಂಶ ಹೆಚ್ಚಳವಾಗಿ ಜೋಳ ಸೇರಿ ಇತರ ಬೆಳೆಗಳನ್ನು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ.

    ಎಷ್ಟು ಬಿತ್ತನೆ…?: ತಾಲೂಕಿನಲ್ಲಿ 2020-21ನೇ ಸಾಲಿನಲ್ಲಿ 4318 ಹೆಕ್ಟೇರ್ ಜೋಳ, 1111 ಹೆಕ್ಟೇರ್ ಕಡಲೆ, 210 ಹೆಕ್ಟೇರ್ ಅಲಸಂದಿ, 630 ಹೆಕ್ಟೇರ್ ಸೂರ್ಯಕಾಂತಿ ಹಾಗೂ 230 ಹೆಕ್ಟೇರ್ ಹತ್ತಿ ಬೆಳೆಯಲಾಗಿದೆ. ಮುಂಗಾರು ಮಳೆ ವಿಪರೀತವಾಗಿ ಸುರಿದ ಪರಿಣಾಮ ಮೆಕ್ಕೆಜೋಳ, ಹತ್ತಿ ಬೆಳೆದು ಕೈ ಸುಟ್ಟುಕೊಂಡಿದ್ದ ರೈತರು ಹಿಂಗಾರಿನಲ್ಲಾದರೂ ಉತ್ತಮ ಬೆಳೆ ಬರಬಹುದು ಎಂದು ಬಿತ್ತನೆ ಮಾಡಿದ್ದಾರೆ.

    ಅದರಂತೆ ಬೀಜ, ಗೊಬ್ಬರ, ಔಷಧಕ್ಕಾಗಿ ಸಾವಿರಾರು ರೂ. ಖರ್ಚು ಮಾಡಿ ಹಿಂಗಾರಿ ಬಿತ್ತನೆ ಮಾಡಿ ಬೆಳೆ ಬೆಳೆದಿದ್ದಾರೆ. ಜೋಳ, ಸೂರ್ಯಕಾಂತಿ ತೆನೆ ಕಟ್ಟಿವೆ. ಕಡಲೆ ಹಾಗೂ ಅಲಸಂದಿ ಕಾಯಿ ಕಟ್ಟಿವೆ. ಜನವರಿ ಕೊನೆಯ ವಾರದಲ್ಲಿ ಎಲ್ಲ ಬೆಳೆಗಳು ಕಟಾವಿಗೆ ಬರಲಿವೆ.

    ಜತೆಗೆ ಈಗಾಗಲೇ ಹತ್ತಿ ಬೆಳೆ ಸಂಪೂರ್ಣ ಬಂದಿದೆ. ರೈತರು ಹತ್ತಿ ಬಿಡಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಹತ್ತಿ ಬಿಡಿಸುವ ಕಾರ್ಯ ಕೂಡ ಕೊನೆಯ ಹಂತದಲ್ಲಿದೆ. ಮೆಕ್ಕೆಜೋಳವನ್ನು ರೈತರು ರಸ್ತೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಒಣ ಹಾಕಿದ್ದಾರೆ. ಉತ್ತಮವಾಗಿ ಮೆಕ್ಕೆಜೋಳ ಒಣಗಿದರೆ, ಉತ್ತಮ ಬೆಲೆ ದೊರೆಯಲಿದೆ ಎಂಬುದು ರೈತರ ಅಭಿಪ್ರಾಯ. ಆದರೆ, ಅಕಾಲಿಕ ಮಳೆಯಿಂದಾಗಿ ರೈತರು ಆತಂಕಕ್ಕೀಡಾಗಿದ್ದಾರೆ. ಬೆಳೆ ಉಳಿಸಿಕೊಳ್ಳಲು ಮತ್ತೆ ಔಷಧ ಸಿಂಪಡಣೆಗೆ ಮುಂದಾಗಿದ್ದಾರೆ.

    ಹಿಂಗಾರಿನಲ್ಲಿ ಬಿತ್ತನೆ ಮಾಡಿದ ಜೋಳ ಉತ್ತಮವಾಗಿ ತೆನೆ ಕಟ್ಟಿದೆ. ನಾಲ್ಕೈದು ವರ್ಷಗಳಲ್ಲಿ ಈ ರೀತಿ ಉತ್ತಮ ತೆನೆ ಕಟ್ಟಿದ ಉದಾಹರಣೆಗಳಿರಲಿಲ್ಲ. ಆದರೆ, ಅಚಾನಕ್ಕಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೀತಿ ಶುರುವಾಗಿದೆ. ಇದೇ ರೀತಿ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ವಣವಾಗಲಿದೆ.
    | ರಮೇಶಪ್ಪ ಬಣಕಾರ, ಜೋಳ ಬೆಳೆದ ರೈತ

    ವಾಯುಭಾರ ಕುಸಿತದಿಂದ ಮಳೆ ಆಗುತ್ತಿದೆ. ರೈತರು ಜೋಳ, ಸೂರ್ಯಕಾಂತಿ ಸೇರಿ ಇತರ ಬೆಳೆಗಳನ್ನು ತೇವಾಂಶದಿಂದ ರಕ್ಷಿಸಿಕೊಳ್ಳಲು ಆಯಾ ಗ್ರಾಮಗಳ ವ್ಯಾಪ್ತಿಯ ಕೃಷಿ ಕೇಂದ್ರದ ಅಧಿಕಾರಿಗಳ ಸಲಹೆ ಪಡೆದುಕೊಳ್ಳಬೇಕು.
    | ಎಚ್.ಬಿ. ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts