More

    ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗ ಕಾಮಗಾರಿ ಟೆಂಡರ್‌ಗೆ ರಾಘವೇಂದ್ರ ಮನವಿ

    ಶಿವಮೊಗ್ಗ: ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಬುಧವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭೇಟಿಯಾಗಿ ಕ್ಷೇತ್ರದ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಗಮನಸೆಳೆದರು. ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗ ಸೇರಿ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.
    ಕೋಟೆ ಗಂಗೂರಿನಲ್ಲಿ 76 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಿಸಲು ಈಗಾಗಲೇ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ರಾಜ್ಯ ಸರ್ಕಾರ 43.14 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು ಇದಕ್ಕಾಗಿ ರೈತರಿಗೆ 10 ಕೋಟಿ ರೂ. ಪರಿಹಾರ ನೀಡಿದೆ. ಪ್ರಾಥಮಿಕ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಏಜೆನ್ಸಿಯನ್ನು ನಿಗದಿಪಡಿಸಿದೆ. ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯ ಶೀಘ್ರವೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
    ರಾಜ್ಯ ಸರ್ಕಾರ ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗಕ್ಕೆ ಶೇ.50 ಅನುದಾನ ನೀಡುತ್ತಿದ್ದು ಈಗಾಗಲೇ ಅಗತ್ಯವಿರುವ 427 ಎಕರೆ ಭೂಮಿ ಪೈಕಿ ಈಗಾಗಲೇ 378 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 2021-22ರ ಕೇಂದ್ರ ಆಯವ್ಯಯದಲ್ಲಿ ಘೋಷಿಸಿರುವಂತೆ 100 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.
    ಜೋಗ ಜಲಪಾತಕ್ಕೆ ಸಮೀಪದ ರೈಲ್ವೆ ನಿಲ್ದಾಣವಾದ ಸಾಗರ ತಾಲೂಕಿನ ಜಂಬಗಾರು ರೈಲ್ವೆ ನಿಲ್ದಾಣ ಸಮಗ್ರ ಅಭಿವೃದ್ಧಿಯಾಗಬೇಕಿದೆ. ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಹೊಸ ರೈಲ್ವೆ ನಿಲ್ದಾಣ ಕಟ್ಟಡ ಹಾಗೂ 2ನೇ ಪ್ಲಾಟ್‌ಫಾರ್ಮ್ ಸೇರಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕೆಂದು ಸಚಿವರಿಗೆ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts