More

    ಸತ್ಯವನ್ನು ಅರಿತುಕೊಂಡು ನಡೆದಲ್ಲಿ ಸಮಾಜದಲ್ಲಿ ಸುಭಿಕ್ಷ ನೆಲೆಸಲು ಸಾಧ್ಯ ಎಂದ ಗೌರಿಗದ್ದೆ ಆಶ್ರಮದ ವಿನಯ ಗುರೂಜಿ

    ರಾಯಚೂರು: ಎಲ್ಲ ಧರ್ಮಗಳು ಹಾಗೂ ಧರ್ಮ ಗ್ರಂಥಗಳ ಸಾರ ಒಂದೇ ಆಗಿದ್ದು, ಹೇಳುವ ಮಾರ್ಗ ಮಾತ್ರ ಬೇರೆ ಬೇರೆಯಾಗಿದೆ. ಎಲ್ಲ ಧರ್ಮ ಗ್ರಂಥಗಳು ಭಗವಂತನನ್ನು ಸೇರುವ ಬಗ್ಗೆ ಹೇಳುತ್ತಿವೆ ಎಂದು ಗೌರಿಗದ್ದೆ ಆಶ್ರಮದ ವಿನಯ ಗುರೂಜಿ ಹೇಳಿದರು.

    ಸ್ಥಳೀಯ ಸಂತೋಷಿ ರಾಯಚೂರು ಹಬ್ ಸಭಾಂಗಣದಲ್ಲಿ ಅವಧೂತ ಸೇವಾ ಸಮಿತಿ ಶನಿವಾರ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಯಚೂರು ಭಾವೈಕ್ಯತೆಯ ಕೇಂದ್ರವಾಗಿದ್ದು, ಸುತ್ತಲಿನ ಶಕ್ತಿ ಕೇಂದ್ರಗಳಿರುವ ಪವಿತ್ರ ನೆಲವಾಗಿದೆ.

    ನಾವು ಬಾವುಟ ಹಾಕುವ ಸ್ವಾತಂತ್ರೃವನ್ನು ಪಡೆದಿದ್ದೇವೆ. ನಾವು ಹಾಕುವ ಬಟ್ಟೆ, ಬಳಸುವ ವಸ್ತುಗಳು ವಿದೇಶದ್ದಾಗಿದೆ. ಹೀಗಾಗಿ ನಾವು ಇನ್ನೂ ಸ್ವದೇಶಿಗಳಾಗಿಲ್ಲ. ಮನೆಗಳನ್ನು ಕಟ್ಟುತ್ತಿದ್ದೇವೆ, ಕನಸು ಕಟ್ಟಿಕೊಳ್ಳುತ್ತಿಲ್ಲ. ರಸ್ತೆ ಅಗಲ ಮಾಡುತ್ತಿದ್ದೇವೆ. ಮನಸು ಅಗಲ ಮಾಡಿಕೊಳ್ಳುತ್ತಿಲ್ಲ. ನಾವು ಆಧುನಿಕರಾಗುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಹೋಗಿ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುವಂತೆ ಮಾಡುತ್ತಿದ್ದೇವೆ. ನಾವು ದೈಹಿಕವಾಗಿ ಬೆಳೆದಿದ್ದೇವೆ ಹೊರತು ಮಾನಸಿಕವಾಗಿ ಬೆಳವಣಿಗೆಯಾಗಬೇಕಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಶುದ್ಧ ಪ್ರೀತಿಯ ಅಗತ್ಯವಿದ್ದು, ಪ್ರತಿಯೊಬ್ಬರೂ ಎಲ್ಲರೊಂದಿಗೆ ಪ್ರೀತಿ ತೋರಿಸಿದರೆ ಸಮಾಜ ತಾನಾಗಿಯೇ ಬದಲಾಗುತ್ತದೆ ಎಂದರು.

    ಆಧುನಿಕ ವೇಗದಲ್ಲಿ ಪ್ರೀತಿ ಮಾಯವಾಗುತ್ತಿರುವುದರಿಂದ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಧಾನ, ಧರ್ಮದಿಂದ ದೇವರಿಗೆ ಸಂತೃಪ್ತಿಯಾಗುವುದಿಲ್ಲ. ತಂದೆ, ತಾಯಿ ಮತ್ತು ಕುಟುಂಬದವರಿಗೆ ಪ್ರೀತಿ, ಇಲ್ಲದವರಿಗೆ ಹಣ ನೀಡಿದರೆ ದೇವರು ಸಂತೃಪ್ತನಾಗುತ್ತಾನೆ.

    ಶಸ್ತ್ರದಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ ಎನ್ನುವುದನ್ನು ಬಸವಣ್ಣ, ಗಾಂಧೀಜಿ ನಿರೂಪಿಸಿ ತೋರಿಸಿದ್ದಾರೆ. ಜಾತಿ, ಧರ್ಮವನ್ನು ಬಿಟ್ಟು ಎಲ್ಲರನ್ನೂ ಪ್ರೀತಿಸುವುದನ್ನು ಕಲಿಯಬೇಕಾಗಿದೆ. ಸತ್ಯವನ್ನು ಅರಿತುಕೊಂಡು ನಡೆದಲ್ಲಿ ಸಮಾಜ ಸುಭಿಕ್ಷವಾಗಿರಲಿದೆ ಎಂದು ವಿನಯ ಗುರೂಜಿ ಹೇಳಿದರು.

    ಶಾಸಕರಾದ ಡಾ.ಶಿವರಾಜ ಪಾಟೀಲ್, ರಾಜಾ ವೆಂಕಟಪ್ಪ ನಾಯಕ, ಹರ್ಷವರ್ಧನರೆಡ್ಡಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ಪಾಟೀಲ್, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ನಗರಸಭೆ ಸದಸ್ಯ ಇ.ಶಶಿರಾಜ, ಮುಖಂಡರಾದ ಯು.ದೊಡ್ಡಮಲ್ಲೇಶ, ಬಿ.ಗೋವಿಂದ, ಎನ್.ಶಿವಶಂಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts