More

    ಶಿಕ್ಷಕರ ನೇಮಕಕ್ಕೆ ಕೂಡಿ ಬಂತು ಕಾಲ !

    ರಾಯಚೂರು: ನ್ಯಾಯಾಲಯದಲ್ಲಿ ಪ್ರಕರಣವಿದ್ದ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳನ್ನು ಹೊರತುಪಡಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಮುಂದಾಗಿದ್ದ ಸರ್ಕಾರ, ಇದೀಗ ನ್ಯಾಯಾಲಯದಲ್ಲಿರುವ ವ್ಯಾಜ್ಯ ಹೊರತುಪಡಿಸಿ ಬಾಕಿ ಹುದ್ದೆಗಳ ಭರ್ತಿಗೆ ಮುಂದಾಗಿದೆ.

    ಸರ್ಕಾರ ಒಟ್ಟು 13 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂಬ ಕಾರಣಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಬಿಟ್ಟು ಅ.21ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಿತ್ತು. ಸರ್ಕಾರದ ತೀರ್ಮಾನಕ್ಕೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕ ಹುದ್ದೆ ಅಭ್ಯರ್ಥಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು.

    ಇದನ್ನೂ ಓದಿ: ಆಂಗ್ಲ‌ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಅಸಹಕಾರ ಚಳುವಳಿ

    ಕಲ್ಯಾಣ ಕರ್ನಾಟಕದ ಜಿಲ್ಲೆಗಳು, ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ 371 ಜೆ ಹುದ್ದೆಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇದ್ದು, ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಕಾನೂನಾತ್ಮಕ ತೊಡಕು ಎದುರಾಗಿತ್ತು. ನ್ಯಾಯಾಲಯದಲ್ಲಿನ ಕೆಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇನ್ನೂ ಕೆಲವು ಪ್ರಕರಣಗಳ ವಿಚಾರಣೆ ನಡೆಯಬೇಕಾಗಿದೆ.

    ಈ ಭಾಗದ ಜನಪ್ರತಿನಿಧಿಗಳ ಒತ್ತಡದಿಂದಾಗಿ ಸರ್ಕಾರ ನ್ಯಾಯಾಲಯದಲ್ಲಿರುವ 62 ಹುದ್ದೆಗಳನ್ನು ಕಾಯ್ದಿರಿಸಿ ಉಳಿದ ಅಭ್ಯರ್ಥಿಗಳ ಕೌನ್ಸೆಲಿಂಗ್ ನಡೆಸಲು ಬುಧವಾರ ಆದೇಶ ಹೊರಡಿಸಿರುವುದು ಈ ಭಾಗದ ಶಿಕ್ಷಕ ಅಭ್ಯರ್ಥಿಗಳಲ್ಲಿ ಸಂತಸ ತಂದಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ಬೀದರ್, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಹುದ್ದೆಗಳ ಭರ್ತಿಗೆ ನ.4ರಂದು ಕೌನ್ಸೆಲಿಂಗ್ ನಡೆಸುವಂತೆ ಆದೇಶ ಹೊರಡಿಸಲಾಗಿದೆ.

    ಶೇ.80ರ ಸ್ಥಳೀಯ ವೃಂದ, ಶೇ.20ರ ಮಿಕ್ಕುಳಿದ ವೃಂದ ಮತ್ತು ಶೇ.8ರ ರಾಜ್ಯ ಮಟ್ಟದ ಸ್ಥಳೀಯ ವೃಂದದ ಜಿಲ್ಲೆಯಲ್ಲಿನ ಒಟ್ಟು 3,500 ಶಿಕ್ಷಕ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್ ನಡೆಯಲಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಜೀವ ವಿಜ್ಞಾನ ಮತ್ತು ಆಂಗ್ಲ ಭಾಷಾ ಹುದ್ದೆಗಳ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೆ ಆಯಾ ಜಿಲ್ಲೆಗಳ ಡಿಡಿಪಿಐ ನೇತೃತ್ವದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದರಿಂದ ಆತಂಕದಲ್ಲಿದ್ದ ಅಭ್ಯರ್ಥಿಗಳು ನಿಟ್ಟಿಸಿರು ಬಿಡುವಂತಾಗಿದೆ.

    ಅತಿ ಹೆಚ್ಚು ಹುದ್ದೆಗಳು ಖಾಲಿ

    ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪ್ರಾಥಮಿಕ ಶಾಲೆಗಳಲ್ಲಿ ಅತಿ ಹೆಚ್ಚಿನ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಮಂಜೂರಾದ ಹುದ್ದೆಗಳ ಪೈಕಿ 22 ಸಾವಿರ ಹುದ್ದೆಗಳು ಖಾಲಿಯಿದ್ದು, ಇತ್ತೀಚಿಗೆ ನಡೆದ ವರ್ಗಾವಣೆ ಪ್ರಕ್ರಿಯೆಯಿಂದ ಬಹಳಷ್ಟು ಶಿಕ್ಷಕರು ಹೊರ ಜಿಲ್ಲೆಗಳಿಗೆ ವರ್ಗಾವಣೆಗೊಂಡಿರುವುದರಿಂದ ಬೋಧನೆಗೆ ಸಮಸ್ಯೆ ಎದುರಾಗಿದೆ.

    ಸರ್ಕಾರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್ ನಡೆಸುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಮಂತ್ರಾಲಯ ರಸ್ತೆಯಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ನ.4 ಮತ್ತು 5ರಂದು ಕೌನ್ಸೆಲಿಂಗ್ ನಡೆಸಲು ತಯಾರಿ ನಡೆಸಲಾಗುತ್ತಿದೆ. ಒಟ್ಟು 731 ಹುದ್ದೆಗಳಿಗೆ ಎರಡು ದಿನ ಕೌನ್ಸೆಲಿಂಗ್ ನಡೆಸಲಾಗುವುದು.
    | ಸುರೇಶ ಹುಗ್ಗಿ, ಡಿಡಿಪಿಐ, ರಾಯಚೂರು

    ಸರ್ಕಾರ ಕಲ್ಯಾಣ ಕರ್ನಾಟಕ ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್ ನಡೆಸಲು ಮುಂದಾದಾಗ ಸರ್ಕಾರಿ ನೌಕರರ ಸಂಘ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ನಮ್ಮ ಭಾಗದಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಲಾಗಿತ್ತು. ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿಯಿರುವ ಹುದ್ದೆಗಳನ್ನು ಹೊರತುಪಡಿಸಿ ಇತರ ಹುದ್ದೆಗಳ ಭರ್ತಿಗೆ ಮುಂದಾಗಿರುವುದು ಸ್ವಾಗತಾರ್ಹ.
    | ಮಹಾಂತೇಶ ಬಿರಾದರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಯಚೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts