More

    ದುರುದ್ದೇಶದಿಂದ ಪಟ್ಟಿಯಿಂದ ಮತದಾರರ ಹೆಸರಿಗೆ ಕೊಕ್

    ರಾಯಚೂರು: ರಾಯಚೂರು ನಗರ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯಲ್ಲಿ 40 ಸಾವಿರ ಮತದಾರರ ಹೆಸರುಗಳನ್ನು ರದ್ದುಗೊಳಿಸಲಾಗಿದ್ದು, ಇದರ ಹಿಂದೆ ರಾಜ್ಯ ಸರ್ಕಾರ ಮತ್ತು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಪ್ರಭಾವ ಬೀರಿರುವ ಸಾಧ್ಯತೆಯಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆರೋಪಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬೆಂಗಳೂರಿನಲ್ಲಿ ನಡೆದಿರುವಂತೆ ರಾಯಚೂರು ನಗರ ಕ್ಷೇತ್ರದಲ್ಲಿಯೂ ದುರುದ್ದೇಶದಿಂದ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದರು. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿ ನಡೆಯುತ್ತಿದ್ದು, ಮರಣ ಹೊಂದಿದವರು, ಸ್ಥಳಾಂತರವಾದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಆದರೆ, ರಾಯಚೂರು ನಗರ ಕ್ಷೇತ್ರದಲ್ಲಿ 2022ರ ಮತದಾರರ ಪಟ್ಟಿಯಲ್ಲಿ 2.36 ಲಕ್ಷ ಮತದಾರರಿದ್ದು, 2023ರ ಪಟ್ಟಿಯಲ್ಲಿ 2.13 ಲಕ್ಷ ಮತದಾರರಿದ್ದಾರೆ. ಈ ಪೈಕಿ 16 ಸಾವಿರ ಹೊಸ ಮತದಾರರಿದ್ದು, 40 ಸಾವಿರ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ದೂರಿದರು.

    ಕರಡು ಮತದಾರರ ಪಟ್ಟಿಯಲ್ಲಿ ಲೋಪದೋಷಗಳಿದ್ದು, ಗುರುತಿನ ಚೀಟಿ ಸಂಖ್ಯೆ ನಮೂದಾಗಿದ್ದು, ಹೆಸರು, ತಂದೆ ಹೆಸರು ವಿಳಾಸ ಅಳಿಸಿ ಹಾಕಲಾಗಿದೆ. ಈ ಗೊಂದಲಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದ್ದು, ಪ್ರಮುಖವಾಗಿ ಮುಸ್ಲಿಂ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.

    ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ, ಬಿಜೆಪಿಗೆ ಮತ ಹಾಕದಿರುವಂತಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವ ಕೆಲಸಕ್ಕೆ ಕೈಹಾಕಿದೆ. ಬೆಂಗಳೂರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗಿದೆ.

    ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಜಿಲ್ಲಾಡಳಿತ ಸೂಕ್ತ ಕಾರಣ ನೀಡಬೇಕು. ಪಟ್ಟಿಯಿಂದ ತೆಗೆಯಲಾಗಿರುವ ಮತದಾರರ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಡಾ.ರಜಾಕ್ ಉಸ್ತಾದ್ ಒತ್ತಾಯಿಸಿದರು. ವಕೀಲ ಸೈಯದ್ ಜಾವೀದುಲ್ ಹಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts