More

    ಎರಡನೇ ಹಂತದ ಮನೆಮನೆ ಸಮೀಕ್ಷೆ ಇಂದಿನಿಂದ, ಸೋಂಕು ಲಕ್ಷಣಗಳಿದ್ದವರು ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರ

    ಕರೊನಾ ಹರಡುವಿಕೆ ತಡೆಗೆ ಜಿಲ್ಲಾಡಳಿತ ಕ್ರಮ

    ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರ ಪತ್ತೆಗಾಗಿ ಮೇ 31 ರಿಂದ ಜೂ.4ರ ವರೆಗೆ ಮೊದಲ ಹಂತದ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಸೋಮವಾರದಿಂದ ಜೂ.10ರ ವರೆಗೆ ಎರಡನೇ ಸುತ್ತಿನ ಹಾಗೂ ಜೂ.14 ರಿಂದ ಜೂ.17ರ ವರೆಗೆ ಮೂರನೇ ಸುತ್ತಿನ ಸಮೀಕ್ಷೆ ಕಾರ್ಯ ನಡೆಯಲಿದೆ.

    ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸೋಂಕಿತರು ಕಂಡು ಬಂದಿದ್ದು, ಬಹುತೇಕರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಇದರಿಂದಾಗಿಯೇ ಸೋಂಕು ವ್ಯಾಪಕ ಹರಡುತ್ತಿರುವುದನ್ನು ಮನಗಂಡ ಜಿಲ್ಲಾಡಳಿತವು ಸೋಂಕಿತರನ್ನು ಆರೈಕೆ ಕೇರ್‌ಗಳಿಗೆ ತೆರಳುವಂತೆ ಮನವೊಲಿಸುವ ಜತೆಗೆ ಸೋಂಕಿನ ಲಕ್ಷಣಗಳು ಇರುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಮನೆಮನೆ ಸಮೀಕ್ಷೆ ಕಾರ್ಯ ನಡೆಸಿದೆ.

    ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಸಮೀಕ್ಷೆ ಕಾರ್ಯ ನಡೆಯುತ್ತಿದ್ದರೂ ಗ್ರಾಪಂವಾರು ಸಮೀಕ್ಷೆ ಕಾರ್ಯದ ಮೇಲುಸ್ತುವಾರಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಕ ಮಾಡಿದ್ದು, ಅವರಿಗೆ ಗ್ರಾಮಗಳಿಗೆ ತೆರಳಿ ಮನೆಮನೆಗೆ ತೆರಳಿ ಪರಿಶೀಲನೆ ನಡೆಸುವ ಜವಾಬ್ದಾರಿ ವಹಿಸಲಾಗಿತ್ತು. ಸಹಾಯಕ ಆಯುಕ್ತರು, ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಪ್ರತಿನಿತ್ಯ ಮೂರ‌್ನಾಲ್ಕು ಗ್ರಾಮಗಳಿಗೆ ತೆರಳಿ ಸಮೀಕ್ಷೆಗೆ ಸಹಕರಿಸದವರಿಗೆ ಎಚ್ಚರಿಕೆ ನೀಡುವ ಜತೆಗೆ ಸೋಂಕಿತರನ್ನು ಸಿಸಿಸಿಗೆ ತೆರಳುವಂತೆ ಮನವೊಲಿಸುವ ಕಾರ್ಯ ನಡೆಸಿದ್ದರು.

    ಸಮೀಕ್ಷೆಯಲ್ಲಿ ಪ್ರಮುಖವಾಗಿ ಸಾರಿ, ಐಎಲ್‌ಐ ಮತ್ತು ಜ್ವರದ ಪ್ರಕರಣಗಳನ್ನು ಗುರುತಿಸಿ, ಅವರಿಗೆ ಔಷಧದ ಕಿಟ್‌ಗಳನ್ನು ನೀಡುವ ಕೆಲಸ ಮಾಡಲಾಗಿದೆ. ಸೋಂಕಿನ ಲಕ್ಷಣಗಳು ಇದ್ದವರನ್ನು ಕೋವಿಡ್ ತಪಾಸಣೆಗೆ ಒಳಪಡಿಸುವ ಕಾರ್ಯ ನಡೆಸಿದ್ದರಿಂದ ಶೀಘ್ರಗತಿಯಲ್ಲಿ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ ನಡೆದಿದ್ದರಿಂದ ಸೋಂಕು ಹರಡುವಿಕೆ ಇಳಿಮುಖವಾಗಿದೆ.

    ಮೊದಲ ಸುತ್ತಿನ ಸಮೀಕ್ಷೆ ಕಾರ್ಯದಲ್ಲಿ 4,37,999 ಮನೆಗಳಿಗೆ ಭೇಟಿ ನೀಡಿ 21,16,399 ಜನರ ಪರಿಶೀಲನೆ ನಡೆಸಲಾಗಿದೆ. ಇದರದಲ್ಲಿ 479 ಜ್ವರ, ತಲೆನೋವು ಪ್ರಕರಣಗಳು, 142 ಬೇಧಿ ಪ್ರಕರಣಗಳು, 2,453 ಐಎಲ್‌ಐ ಪ್ರಕರಣಗಳು, 78 ಸಾರಿ ಪ್ರಕರಣಗಳು ಕಂಡು ಬಂದಿವೆ. ಒಟ್ಟು 2,549 ಜನರಿಗೆ ಔಷಧದ ಕಿಟ್‌ಗಳನ್ನು ವಿತರಿಸಲಾಗಿದೆ.

    ಮನೆ ಮನೆ ಸಮೀಕ್ಷೆ ಕಾರ್ಯದಿಂದ ಕರೊನಾ ಸೋಂಕು ವ್ಯಾಪಕ ಹರಡುವುದನ್ನು ತಡೆಯಲು ಸಾಧ್ಯವಾಗಿರುವುದರಿಂದ ಜಿಲ್ಲಾಡಳಿದ ಪುನಃ ಎರಡು ಹಂತಗಳಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸುವ ಮೂಲಕ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts