More

    ಧಾರ್ಮಿಕ ವಲಯದಲ್ಲಿ ಸಂತಸ; ಕಾಶಿ ಪೀಠಕ್ಕೆ ರಾಯಚೂರು ಜಿಲ್ಲೆ ಸ್ವಾಮೀಜಿ ನೇಮಕ

    ದೇವದುರ್ಗ ತಾಲೂಕು ಜಾಲಹಳ್ಳಿಯ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಉತ್ತರಾಧಿಕಾರಿ | ತಿರುಪತಿಯಲ್ಲಿ ಸಂಸ್ಕೃತ ಅಭ್ಯಾಸ, ಡಾಕ್ಟರೇಟ್ ಪದವಿ

    ರಾಯಚೂರು: ವೀರಶೈವ ಸಮಾಜದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜಗದ್ಗುರು ಪೀಠದ ಉತ್ತರಾಧಿಕಾರಿಯಾಗಿ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಮೂಲದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ನೇಮಕ ಮಾಡಿರುವುದರಿಂದ ಜಿಲ್ಲೆಯ ಮಠಾಧೀಶರು ಹಾಗೂ ಧಾರ್ಮಿಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ. ಅವರ ಅವಧಿಯಲ್ಲಿ ಕಾಶಿ ಪೀಠ ಅಭಿವೃದ್ಧಿ ಹೊಂದುವುದರ ಜತೆಗೆ ಜಿಲ್ಲೆಯ ಮಠಮಾನ್ಯಗಳ ಅಭಿವೃದ್ಧಿಗೂ ಪ್ರೇರಣೆ ಸಿಗಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳ ಮೂಲ ಹೆಸರು ಪ್ರಭಯ್ಯಸ್ವಾಮಿ. ಜಾಲಹಳ್ಳಿ ಗ್ರಾಮದ ಕೃಷಿಕ ಕುಟುಂಬದ ಕೊಡಯ್ಯಸ್ವಾಮಿ ಮತ್ತು ಅಕ್ಕನಾಗಮ್ಮ ದಂಪತಿ ಪುತ್ರರಿವರು. ಒಂದರಿಂದ 10ನೇ ತರಗತಿವರೆಗೆ ಜಾಲಹಳ್ಳಿಯ ಶ್ರೀ ಜಯಶಾಂತಲಿಂಗೇಶ್ವರ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ.

    ಬಾಲ್ಯದಿಂದಲೇ ಆಧ್ಯಾತ್ಮದ ಒಲವು ಹೊಂದಿದ್ದ ಪ್ರಭಯ್ಯಸ್ವಾಮಿಯವರು ಕಾಲೇಜು ಶಿಕ್ಷಣವನ್ನು ಸೊಲ್ಲಾಪುರದ ಸಂಗಮೇಶ್ವರ ಕಾಲೇಜಿನಲ್ಲಿ ಪೂರ್ಣಗೊಳಿಸಿ, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಉನ್ನತ ವ್ಯಾಸಂಗ ಪೂರ್ಣಗೊಳಿಸಿ, ಅಲ್ಲಿಯೇ ‘ಸಿದ್ಧಾಂತ ಶಿಖಾಮಣಿ ಅದ್ವೈತ ವೇದಾಂತ ಸಿದ್ಧಾಂತ’ ಕುರಿತ ಪ್ರಬಂಧಕ್ಕೆ 2013ರಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

    ಇವರಲ್ಲಿನ ಪಾಂಡಿತ್ಯ ಗುರುತಿಸಿ ಮಹಾರಾಷ್ಟ್ರದ ಸೊಲ್ಲಾಪುರದ ಹೊಟಗಿ ಬೃಹನ್ಮಠದ ಪೀಠಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ, ತೆಲುಗು ಭಾಷೆಗಳಲ್ಲಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಪಾರಂಗತರಾಗಿದ್ದಾರೆ.

    ಕಾಶಿ ಜಗದ್ಗುರು ಪೀಠದ ಉತ್ತರಾಧಿಕಾರಿಯಾಗಿ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ನೇಮಕ ಮಾಡಿ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದ್ದರು. ಇದಕ್ಕೂ ಮುನ್ನ ಧಾರವಾಡ ಜಿಲ್ಲೆ ಬಿಸನಹಳ್ಳಿಯಲ್ಲಿ ಕಾಶಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಪೀಠದ ಜಗದ್ಗುರುಗಳು ಮತ್ತು 50ಕ್ಕೂ ಹೆಚ್ಚು ಮಠಾಧೀಶರ ಸಭೆಯಲ್ಲಿ ಎಲ್ಲರ ಒಮ್ಮತದಂತೆ ಕಾಶಿ ಜಗದ್ಗುರುಗಳು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಘೋಷಣೆ ಮಾಡಿದ್ದಾರೆ.

    ಉತ್ತರಾಧಿಕಾರಿಯಾಗಲು ಆಸೆ ಪಟ್ಟಿದ್ದಿಲ್ಲ. ಜಗದ್ಗುರುಗಳಾದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ಸನ್ನಿಧಿಗಳ ಸಂಕಲ್ಪ ಮತ್ತು ಅವರ ಕನಸುಗಳನ್ನು ಈಡೇರಿಸಲು ಪ್ರಯತ್ನಿಸುವುದರ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.
    ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕಾಶಿ ಜಗದ್ಗುರು ಪೀಠದ ಉತ್ತರಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts