More

    ಕಲಬುರಗಿಯಲ್ಲಿ ಸಾರಿಗೆ ನೌಕರರ ಸಮಾವೇಶ, ಜಂಟಿ ಕ್ರಿಯಾ ಸಮಿತಿ ಸಂಚಾಲಕ ಶ್ರೀಶೈಲರೆಡ್ಡಿ ಮಾಹಿತಿ

    ರಾಯಚೂರು: ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಅ.20ರಂದು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ನಿಟ್ಟಿನಲ್ಲಿ ಸಾರಿಗೆ ನೌಕರರ ಸಮಾವೇಶ ಆಯೋಜಿಸಲಾಗಿದೆ ಎಂದು ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಶ್ರೀಶೈಲರೆಡ್ಡಿ ತಿಳಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಇಲಾಖೆಯಲ್ಲಿ ಈ ಹಿಂದೆ 1.30 ಲಕ್ಷ ನೌಕರರ ಸಂಖ್ಯೆಯಲ್ಲಿ ಕಡಿತ ಮಾಡಿದ್ದರಿಂದ ನೌಕರರ ಸಂಖ್ಯೆ 1.07 ಲಕ್ಷಕ್ಕೆ ಬಂದು ತಲುಪಿದೆ. ಇದರಿಂದ ಇರುವ ನೌಕರರ ಮೇಲೆ ಹೆಚ್ಚಿನ ಒತ್ತಡವುಂಟಾಗಿದೆ. ಬಸ್ ಮಾರ್ಗಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದ್ದು, ಡೀಸೆಲ್ ಬಂಕ್‌ಗಳಲ್ಲಿ ಹಾಕಿಸುತ್ತಿರುವುದರಿಂದ ನಿಗಮಗಳಿಗೆ ಆರ್ಥಿಕ ನಷ್ಟವುಂಟಾಗುತ್ತಿದೆ. ಸಿಬ್ಬಂದಿಗೆ 8 ಗಂಟೆಗಳ ಕಾರ್ಯಾವಧಿ ಇದ್ದರೂ 12 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುವಂತಾಗಿದೆ.

    ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ಶಿಫಾರಸು ಜಾರಿಗೊಳಿಸುವುದಾಗಿ ಸರ್ಕಾರ ಹೇಳುತ್ತಿದ್ದರೂ ನಾಲ್ಕು ನಿಗಮಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡುತ್ತಿಲ್ಲ. ಗುತ್ತಿಗೆ ಆಧಾರದ ಮೇಲೆ ಚಾಲಕರ ನೇಮಕ ಮಾಡಲಾಗುತ್ತಿದೆ. ಹೊಸ ಬಸ್ ಖರೀದಿಸುತ್ತಿಲ್ಲ. ಆಸ್ತಿ ನಗದೀಕರಣ ಕಾರ್ಯ ನಡೆಸಲಾಗುತ್ತಿದೆ. ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಹೋರಾಟ ನಡೆಸಿದ್ದರಿಂದ ಸಂಘಟನೆಗಳ ಮುಖಂಡರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಆರ್‌ಟಿಸಿ, ಕಾರ್ಮಿಕ ವೇತನ ಒಪ್ಪಂದ ಜಾರಿಗೊಳಿಸದೇ ಸಿಬ್ಬಂದಿಗಳ ಶೋಷಣೆ ನಡೆಸಲಾಗುತ್ತಿದೆ.

    1997ರಲ್ಲಿ ಕೆಎಸ್‌ಆರ್‌ಟಿಸಿಯನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿದಾಗ ಸಂಘಟನೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಸರ್ಕಾರವೇ ನಾಲ್ಕು ನಿಗಮಗಳನ್ನು ಒಂದು ಮಾಡಲು ಮುಂದಾಗಿರುವುದನ್ನು ಸ್ವಾಗತಿಸುತ್ತೇವೆ. ಜತೆಗೆ ಸರ್ಕಾರ ನೌಕರರ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು.

    ಸಂಘದ ಎಲ್ಲ ಆರ್ಥಿಕ ವ್ಯವಹಾರಗಳನ್ನು ಆಡಿಟ್ ಮಾಡಿಸಲಾಗುತ್ತಿದ್ದು, ಸಂಘದಲ್ಲಿನ ಕೆಲವರು ಕಾರ್ಮಿಕ ಆಯುಕ್ತರಿಗೆ ಹಣ ದುರುಪಯೋಗದ ದೂರು ನೀಡಿದ್ದು, ಅವರಿಗೆ ದಾಖಲೆ ನೀಡಲಾಗಿದೆ. ಎಲ್ಲ ವ್ಯವಹಾರಗಳು ಪಾರದರ್ಶಕವಾಗಿವೆ ಎಂದು ಶ್ರೀಶೈಲರೆಡ್ಡಿ ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಎಸ್.ಎಂ.ಪೀರಾ, ಶಾಂತಮೂರ್ತಿ, ಮಧು ಚಕ್ರವರ್ತಿ, ಜಂಬಣ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts