More

    ನಿರಂತರ ಮಳೆಗೆ ತತ್ತರಿಸಿದ ರೈತಾಪಿ ವರ್ಗ


    ರಾಯಚೂರು: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ತತ್ತರಿಸುವಂತಾಗಿದ್ದು, ಬೆಳೆಗಳು ಸಂಪೂರ್ಣ ಹಾನಿಗೊಳಗಾಗುವ ಭೀತಿ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

    ನಿರಂತರ ಸುರಿಯುತ್ತಿದ್ದ ಮಳೆ ದಸರಾ ಹಬ್ಬದ ಸಂದರ್ಭದಲ್ಲಿ ಒಂದೆರಡು ದಿನಗಳ ಕಾಲ ವಿರಾಮ ನೀಡಿದ್ದು, ವಾಯುಭಾರ ಕುಸಿತದಿಂದ ಬುಧವಾರ ತಡರಾತ್ರಿಯಿಂದ ಪುನಃ ಆರಂಭವಾಗಿದೆ. ಗುರುವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆ ಆರಂಭವಾಗಿದೆ.

    ಈಗಾಗಲೇ ಹತ್ತಿ, ತೊಗರಿ ಮುಂತಾದ ಬೆಳೆಗಳು ಹಾನಿಗೊಳಗಾಗಿದ್ದು, ಮಳೆ ಮುಂದುವರಿದಲ್ಲಿ ಬೆಳೆಗಳು ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ. ರೈತರು ಜಮೀನನಲ್ಲಿ ನಿಂತ ನೀರನ್ನು ಹೊರಹಾಕಿದ್ದು, ಮಳೆ ಮುಂದುವರಿದಿದ್ದರಿಂದ ಬೆಳೆಗಳ ಕಾಂಡಗಳು ಕೊಳೆಯುವ ಭೀತಿ ರೈತರಲ್ಲಿ ಮೂಡಿದೆ.

    ಬುಧವಾರ ರಾತ್ರಿ ರಾಯಚೂರು ನಗರದಲ್ಲಿ 7.2 ಮಿ.ಮೀ., ತಾಲೂಕಿನ ಯರಮರಸ್‌ನಲ್ಲಿ 6.2 ಮಿ.ಮೀ., ಯರಗೇರಾದಲ್ಲಿ 7 ಮಿ.ಮೀ., ಗಿಲ್ಲೆಸುಗೂರಿನಲ್ಲಿ 5.5 ಮಿ.ಮೀ., ಕಲ್ಮಲಾದಲ್ಲಿ 10 ಮಿ.ಮೀ., ಜೇಗರಕಲ್‌ನಲ್ಲಿ 8.6 ಮಿ.ಮೀ., ದೇವಸೂಗೂರಿನಲ್ಲಿ 6.6 ಮಿ.ಮೀ., ಚಂದ್ರಬಂಡಾದಲ್ಲಿ 12.2 ಮಿ.ಮೀ. ಮಳೆಯಾಗಿದೆ.

    ಮಾನ್ವಿ ಪಟ್ಟಣದಲ್ಲಿ 7.2 ಮಿ.ಮೀ., ತಾಲೂಕಿನ ಕುರ್ಡಿಯಲ್ಲಿ 4.6 ಮಿ.ಮೀ., ರಾಜೋಳ್ಳಿಬಂಡಾದಲ್ಲಿ 5 ಮಿ.ಮೀ. ಮಳೆಯಾಗಿದೆ. ಸಿರವಾರ ಪಟ್ಟಣದಲ್ಲಿ 5.8 ಮಿ.ಮೀ., ತಾಲೂಕಿನಲ್ಲಿ ಕಲ್ಲೂರಿನಲ್ಲಿ 7.3 ಮಿ.ಮೀ., ಮಲ್ಲಟದಲ್ಲಿ 6.4 ಮಿ.ಮೀ., ಕುರಕುಂದಾದಲ್ಲಿ 5.4 ಮಿ.ಮೀ., ಕವಿತಾಳನಲ್ಲಿ 5 ಮಿ.ಮೀ. ಮಳೆಯಾಗಿದೆ.

    ದೇವದುರ್ಗ ಪಟ್ಟಣದಲ್ಲಿ 5.8 ಮಿ.ಮೀ., ತಾಲೂಕಿನ ಅರಕೇರಾದಲ್ಲಿ 3.6 ಮಿ.ಮೀ., ಗಬ್ಬೂರಿನಲ್ಲಿ 4.2 ಮಿ.ಮೀ., ಗಲಗನಲ್ಲಿ 6.1 ಮಿ.ಮೀ., ಜಾಲಹಳ್ಳಿಯಲ್ಲಿ 7 ಮಿ.ಮೀ., ಲಿಂಗಸುಗೂರು ಪಟ್ಟಣದಲ್ಲಿ 2 ಮಿ.ಮೀ., ತಾಲೂಕಿನ ಗುರುಗುಂಟಾದಲ್ಲಿ 6 ಮಿ.ಮೀ., ಹಟ್ಟಿಯಲ್ಲಿ 5 ಮಿ.ಮೀ. ಮಳೆಯಾಗಿದೆ.

    ಸಿಂಧನೂರು ತಾಲೂಕಿನ ಗೊರೆಬಾಳನಲ್ಲಿ 3.4 ಮಿ.ಮೀ., ವಲ್ಕಂದಿನ್ನಿಯಲ್ಲಿ 1 ಮಿ.ಮೀ., ಜಾಲಿಹಾಳನಲ್ಲಿ 1.2 ಮಿ.ಮೀ., ಹುಡಾದಲ್ಲಿ 3.4 ಮಿ.ಮೀ., ಹೆಡಗಿನಾಳನಲ್ಲಿ 4.6 ಮಿ.ಮೀ. ಮಳೆಯಾಗಿದೆ. ಮಸ್ಕಿ ತಾಲೂಕಿನ ಬಳಗಾನೂರಿನಲ್ಲಿ 1.2 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

    ಜಿಲ್ಲಾಡಳಿತದಿಂದ ಎಚ್ಚರಿಕೆ: ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ನಾಲ್ಕೈದು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಗಳಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಜನರಿಗೆ ಸೂಚನೆ ನೀಡಿದೆ. ನದಿ, ಹಳ್ಳ, ಕೆರೆ ದಂಡೆಯಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ನದಿಯ ತೆಪ್ಪದಲ್ಲಿ ಪ್ರಾಯಾಣಿಸುವುದನ್ನು ನಿಷೇಧಿಸಲಾಗಿದೆ. ಅಪಾಯಕರ ಸೇತುವೆಗಳ ಮೇಲೆ ಸಂಚಾರ ಮಾಡದಂತೆ ಹಾಗೂ ತಗ್ಗು ಪ್ರದೇಶಗಳಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.

    ಹಾಳಾಗುತ್ತಿದೆ ಹತ್ತಿ ಬೆಳೆ
    ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತ ಗುರುವಾರ ನಿರಂತರ ಮಳೆ ಸುರಿದ ಪರಿಣಾಮ ರೈತರಿಗೆ ಕಿರಿಕಿರಿಯಾಗಿದೆ. ಹತ್ತಿ ಬೆಳೆದ ರೈತರು ಫಸಲನ್ನು ಬಿಡಿಸಿಕೊಳ್ಳಲಾಗದ ಪರಿಸ್ಥಿತಿ ಉಂಟಾಗಿದೆ. ಸದ್ಯ ಹತ್ತಿಗೆ ಬೆಲೆಯಿದ್ದು, ಈಗ ಮಳೆಯಿಂದ ಕೊಳೆತು ಹೋಗುವ ಭೀತಿ ಎದುರಾಗಿದೆ ಎನ್ನುತ್ತಾರೆ ರೈತರಾದ ರಾಮಣ್ಣ, ಹುಸೇನಪ್ಪ, ಅಯ್ಯಪ್ಪ ಕುರಬರ, ಬಸವರಾಜ. ಹಾಲಪೂರ, ತೋರಣ ದಿನ್ನಿ, ಹಣಗಿ, ಅಮೀನಗಡ, ಪಾಮನಕಲ್ಲೂರು, ಬಾಗಲವಾಡ, ಚಿಂಚರಕಿ ಗ್ರಾಪಂ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಗೆ ಹತ್ತಿ ಬೆಳೆದ ರೈತರು ತೊಂದರೆಪಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts