More

    ರೈತರು ಕೃಷಿ ತೊರೆವುದು ಆತಂಕಕಾರಿ; ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಮಹಾ ನಿರ್ದೇಶಕ ಡಾ.ಸಿ.ಚಂದ್ರಶೇಖರ ಕಳವಳ

    ಕನಕದಾಸ ಜಯಂತಿ ಕಾರ್ಯಕ್ರಮ

    ರಾಯಚೂರು: ರೈತರು ಕೃಷಿಯನ್ನು ತೊರೆದು ಬೇರೆ ಉದ್ಯೋಗಗಳತ್ತ ತೆರಳುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಕೃಷಿ ಆದಾಯಕರ ಕ್ಷೇತ್ರವಲ್ಲ ಎನ್ನುವ ರೈತರ ಮನೋಭಾವವನ್ನು ತೊಲಗಿಸಬೇಕಾದ ಅಗತ್ಯವಿದೆ ಎಂದು ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಮಹಾ ನಿರ್ದೇಶಕ ಡಾ.ಸಿ.ಚಂದ್ರಶೇಖರ ಹೇಳಿದರು.

    ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಸೋಮವಾರ ಏರ್ಪಡಿಸಿದ್ದ 13ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರ ಆದಾಯವನ್ನು ಹೆಚ್ಚಿಸಿದಾಗ ಮಾತ್ರ ಕೃಷಿ ಕ್ಷೇತ್ರದಿಂದ ರೈತರ ವಲಸೆಯನ್ನು ತಡೆಯಬಹುದಾಗಿದೆ ಎಂದರು.

    ಸಮೀಕ್ಷೆಯೊಂದರ ಪ್ರಕಾರ ದೇಶದ ರೈತರ ವಾರ್ಷಿಕ ತಲಾದಾಯ 10,329 ರೂ. ಎಂದು ಹೇಳಲಾಗುತ್ತಿದೆ. ಇದರಿಂದ ರೈತರ ಆದಾಯ ದಿನಕ್ಕೆ 344 ರೂ.ಗಳಾಗುತ್ತದೆ. ಇದು ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಸಿಗುವ ಕೂಲಿಗಿಂತಲೂ ಕಡಿಮೆಯಾಗಿದೆ.

    ಪ್ರತಿನಿತ್ಯ 2,409 ರೈತರು ಕೃಷಿ ಕ್ಷೇತ್ರವನ್ನು ತೊರೆದು ಬೇರೆ ಉದ್ಯೋಗಗಳನ್ನು ನೋಡಿಕೊಳ್ಳುತ್ತಿದ್ದಾರೆ. ರೈತರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ರೈತರು ಕೃಷಿಯಲ್ಲಿ ಆದಾಯವನ್ನು ಗಳಿಸಬಹುದಾಗಿದೆ.

    ಹವಾಮಾನ ವೈಪರೀತ್ಯ ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾತಾವರಣದಲ್ಲಿನ ಬದಲಾವಣೆಗೆ ತಕ್ಕಂತೆ ನಮ್ಮ ಬೆಳೆ ಪದ್ಧತಿ ಮತ್ತು ವಿಧಾನವನ್ನು ಬದಲಾಯಿಸಿಕೊಳ್ಳಬೇಕು. ಜತೆಗೆ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪೌಷ್ಠಿಕ ಆಹಾರ ಉತ್ಪಾದನೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಕನಕದಾಸರ ಕುರಿತು ಮುಖ್ಯಗುರು ರಮಾದೇವಿ ಶಂಭೋಜಿ ಉಪನ್ಯಾಸ ನೀಡಿ, ಕನಕದಾಸರ ಕೀರ್ತನೆಗಳು ಇಂದಿಗೂ ಮನೆ ಮಾತಾಗಿವೆ. ಅವರ ಮುಂಡಿಗೆ ಪ್ರಕಾರವನ್ನು ಅರ್ಥೈಸಿಕೊಳ್ಳಲು ಜ್ಞಾನ ಬೇಕು. ಮುಂಡಿಗೆ ಪ್ರಕಾರದ ಕಾವ್ಯದ ಒಳಾರ್ಥ ಬೇರೆಯಾಗಿರುತ್ತದೆ. ಅವರ ಜೀವನ ಮತ್ತು ಸಾಹಿತ್ಯವನ್ನು ಆರ್ಥೈಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕಾಗಿದೆ ಎಂದರು.

    ಕೊಪ್ಪಳ ಜಿಲ್ಲೆ ತಾವರಗೇರಾ ಗ್ರಾಮದ ಪ್ರಗತಿಪರ ರೈತ ಬಸಯ್ಯ ಹಿರೇಮಠಗೆ ಕೃಷಿ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜತೆಗೆ ಅತ್ಯುತ್ತಮ ಶಿಕ್ಷಕ, ಸಂಶೋಧನಾ ವಿಜ್ಞಾನಿ, ವಿಸ್ತರಣಾ ವಿಜ್ಞಾನಿ ಹಾಗೂ ಸಿಬ್ಬಂದಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

    ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವಿವಿ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್, ಕುಲಸಚಿವ ಡಾ.ಎಂ.ವೀರನಗೌಡ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಕೊಟ್ರೇಶಪ್ಪ ಕೋರಿ, ತ್ರಿವಿಕ್ರಮ ಜೋಷಿ, ಮಹಾಂತೇಶಗೌಡ ಪಾಟೀಲ್, ಜಿ.ಶ್ರೀಧರ ಕೆಸರಹಟ್ಟಿ, ಸುನೀಲಕುಮಾರ ವರ್ಮಾ ಇದ್ದರು.

    ರೈತರು ಕೃಷಿ ತೊರೆವುದು ಆತಂಕಕಾರಿ; ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಮಹಾ ನಿರ್ದೇಶಕ ಡಾ.ಸಿ.ಚಂದ್ರಶೇಖರ ಕಳವಳ
    ರಾಯಚೂರಿನ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಸೋಮವಾರ ಜರುಗಿದ 13 ಸಂಸ್ಥಾಪನಾ ದಿನಾಚರಣೆ ಮತ್ತು ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆ ತಾವರಗೇರಾದ ಪ್ರಗತಿಪರ ರೈತ ಬಸಯ್ಯ ಹಿರೇಮಠಗೆ ಕೃಷಿ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಮಹಾ ನಿರ್ದೇಶಕ ಡಾ.ಸಿ.ಚಂದ್ರಶೇಖರ, ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್, ಕುಲಸಚಿವ ಡಾ.ಎಂ.ವೀರನಗೌಡ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಕೊಟ್ರೇಶಪ್ಪ ಕೋರಿ, ತ್ರಿವಿಕ್ರಮ ಜೋಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts