More

    ಐಐಐಟಿ ತರಗತಿ ಆರಂಭ ಮುಂದಕ್ಕೆ? 9ರಂದು ನಡೆಯಲಿರುವ ನಿರ್ದೇಶಕ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ


    ಆ.16ರಿಂದ ತರಗತಿ ಆರಂಭವಾಗುವುದಿತ್ತು | ಕೋವಿಡ್ ಕಾರಣ ಶುರುವಾಗುವುದು ಅನುಮಾನ

    ರಾಯಚೂರು: ಜಿಲ್ಲೆಗೆ ಐಐಟಿ ಕೈತಪ್ಪಿದ ನಂತರ ಸಮಾಧಾನ ಪಟ್ಟುಕೊಳ್ಳಲು ದೊರೆತಿರುವ ಐಐಐಟಿ ಆರಂಭಕ್ಕೂ ವಿಘ್ನಗಳು ಎದುರಾಗಿದ್ದು, ಕೋವಿಡ್ ಕಾರಣದಿಂದ ತರಗತಿ ಆರಂಭ ಮುಂದೂಡುವ ಸಾಧ್ಯತೆಗಳು ದಟ್ಟವಾಗಿದೆ.

    ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ ಐಐಐಟಿ ತರಗತಿಗಳನ್ನು ಆ.16ರಿಂದ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕರೊನಾ ಮೂರನೇ ಅಲೆ ಕಾರಣ ತರಗತಿ ಆರಂಭವಾಗುವುದಿಲ್ಲ ಎಂದು ತಿಳಿದು ಬಂದಿದೆ.

    2019ರಲ್ಲಿ ಜಿಲ್ಲೆಗೆ ಐಐಐಟಿಯನ್ನು ಮಂಜೂರು ಮಾಡಲಾಗಿದ್ದು, ತಾಲೂಕಿನ ವಡವಾಟಿ ಹತ್ತಿರ ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಕ್ಯಾಂಪಸ್‌ಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಒದಗಿಸುವುದು, ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳನ್ನು ಹೈದರಾಬಾದ್‌ನ ಐಐಟಿ ಕ್ಯಾಂಪಸ್‌ನಲ್ಲೇ ಪ್ರಾರಂಭಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 2ನೇ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರವೇಶದ ನಂತರದಲ್ಲಿ ನಗರದ ಯರಮರಸ್ ಕ್ಯಾಂಪ್‌ನಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

    ತರಗತಿಗಳಲ್ಲಿ ಕಂಪ್ಯೂಟರ್ ವ್ಯವಸ್ಥೆ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯವನ್ನು ಸಜ್ಜುಗೊಳಿಸಿ ಆ.16ರಿಂದ ಸ್ಥಳೀಯ ಕಟ್ಟಡದಲ್ಲಿಯೇ ತರಗತಿ ಆರಂಭಿಸಲು ನಿರ್ದೇಶಕ ಮಂಡಳಿ ತೀರ್ಮಾನಿಸಿತ್ತು. ಈ ನಿಟ್ಟಿನಲ್ಲಿ ನಿರ್ದೇಶಕರು ಎರಡು ಸುತ್ತಿನ ಮಾತುಕತೆ ನಡೆಸಿದ್ದರು. ದೇಶದ ಇತರ ರಾಜ್ಯಗಳಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗಿರುವುದರಿಂದ ಆಫ್‌ಲೈನ್ ತರಗತಿಗಳನ್ನು ನಡೆಸಬೇಕೆ, ಬೇಡವೇ ಎನ್ನುವ ಬಗ್ಗೆ ಗೊಂದಲ ಉಂಟಾಗಿದೆ. ತರಗತಿ ಆರಂಭಿಸಿದ ನಂತರ ಕೋವಿಡ್ ಪ್ರಭಾವ ಹೆಚ್ಚಾದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದಾಗಿದೆ. ಹೀಗಾಗಿ ತರಗತಿಗಳನ್ನು ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ. ಆಫ್‌ಲೈನ್ ತರಗತಿ ಆರಂಭವಾಗುವವರೆಗೂ ಆನ್‌ಲೈನ್ ತರಗತಿಗಳನ್ನು ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳಿವೆ.

    55 ವಿದ್ಯಾರ್ಥಿಗಳು: ರಾಯಚೂರಿನ ಐಐಐಟಿಯ ಬಿಟೆಕ್‌ನ ಮೊದಲ ಬ್ಯಾಚ್‌ನಲ್ಲಿ 28 ಹಾಗೂ 2ನೇ ಬ್ಯಾಚ್‌ನಲ್ಲಿ 27 ವಿದ್ಯಾರ್ಥಿಗಳು ಸೇರಿ ಒಟ್ಟು 55 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಹೈದರಾಬಾದ್‌ನ ಐಐಟಿ ಕ್ಯಾಂಪಸ್‌ನಲ್ಲಿ ತರಗತಿಗಳು ಆರಂಭವಾಗಿದ್ದರೂ ಕೋವಿಡ್ ಕಾರಣ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಆಫ್‌ಲೈನ್ ತರಗತಿ ಆರಂಭಿಸುವ ನಿಟ್ಟಿನಲ್ಲಿ ಆ.9ರಂದು ನಿರ್ದೇಶಕ ಮಂಡಳಿ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

    ಆ.16ರಿಂದ ಸ್ಥಳೀಯ ಕಟ್ಟಡದಲ್ಲಿ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿತ್ತು. ಆ.9ರಂದು ನಿರ್ದೇಶಕ ಮಂಡಳಿ ಸಭೆ ಸೇರಲಿದ್ದು, ತರಗತಿ ಆರಂಭ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
    | ಡಾ.ರಮೇಶ ರಾಯಚೂರು ಐಐಐಟಿ ಉಪನ್ಯಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts