More

    ರಾಜಕೀಯ ಸನ್ಯಾಸತ್ವ ಸ್ವೀಕರಿಸಿ

    ರಾಯಚೂರು: ಜಿಲ್ಲೆಗೆ ಏಮ್ಸ್ ತರುವುದಾಗಿ ಜನರನ್ನು ನಂಬಿಸಿ ಸುಳ್ಳು ಭರವಸೆ ನೀಡಿದ್ದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅ.11ರಂದು ಗಿಲ್ಲೆಸುಗೂರಿನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಸಿಎಂ ಎದುರು ತಾವು ವಚನ ಭ್ರಷ್ಟರೆಂದು ಘೋಷಿಸಿಕೊಂಡು ರಾಜಕೀಯ ಸನ್ಯಾಸತ್ವ ಸ್ವೀಕರಿಸಬೇಕೆಂದು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯಾಗುವುದಕ್ಕೆ ಸರ್ಕಾರಕ್ಕಿಂತ ಇಲ್ಲಿನ ಸ್ಥಳೀಯ ಶಾಸಕರ ಇಚ್ಛಾಶಕ್ತಿ ಅತ್ಯಂತ ಮುಖ್ಯ. ಆದರೆ, ಇಲ್ಲಿನ ಕೆಲ ಶಾಸಕರಿಗೆ ಏಮ್ಸ್ ಕುರಿತು ಗಂಭೀರತೆಯೇ ಇಲ್ಲದಂತಾಗಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಕುರಿತು ಸದನದಲ್ಲಿ ಧ್ವನಿ ಎತ್ತಿದ್ದಾಗ ಅಲ್ಲಿಯೇ ಇದ್ದ ಉಳಿದ ಶಾಸಕರು ಕನಿಷ್ಠ ಬೆಂಬಲ ನೀಡದೆ ತಮಗೂ ಮತ್ತು ಜಿಲ್ಲೆಗೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಾ ಅಮರೇಶ್ವರ ನಾಯಕ ಚುನಾವಣೆಗೆ ಸ್ಪರ್ಧಿಸಿದ್ದಾಗ ಚುನಾವಣೆ ಪ್ರಚಾರದ ವೇಳೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಏಮ್ಸ್ ತರಲಾಗುವುದು ಒಂದು ವೇಳೆ ಮಂಜೂರು ಮಾಡಿಸದೆ ಇದ್ದಲ್ಲಿ ರಾಜಕೀಯ ಸನ್ಯಾಸತ್ವವನ್ನು ಸ್ವೀಕರಿಸುವುದಾಗಿ ಹೇಳಿದ್ದರು. ಹೇಳಿದ ಮಾತಿನಂತೆ ಶಾಸಕ ಶಿವನಗೌಡ ನಾಯಕ ರಾಜಕೀಯ ಸನ್ಯಾಸತ್ವವನ್ನು ಸ್ವೀಕರಿಸಿ ರಾಜಕೀಯ ಜೀವನ ತ್ಯಜಿಸಬೇಕು ಇಲ್ಲವಾದರೆ ವಚನ ಭ್ರಷ್ಟರಾಗುತ್ತಾರೆ ಎಂದರು.

    ಅ.15ರೊಳಗಾಗಿ ಶಾಸಕ ಶಿವನಗೌಡ ನಾಯಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಲ್ಲವಾದರೆ ಅ.14ರಂದು ರಾಯಚೂರಿನಿಂದ ಪಾದಯಾತ್ರೆ ಆರಂಭಿಸಿ ಅ.16ಕ್ಕೆ ಕಂದಾಯ ಸಚಿವ ಆರ್.ಅಶೋಕಗೆ ಮುತ್ತಿಗೆ ಹಾಕಿ, ಶಾಸಕ ಶಿವನಗೌಡ ನಾಯಕ ನಿವಾಸದ ಮೇಲೆಯೂ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಂಚಾಲಕರಾದ ಎಸ್.ಮಾರೆಪ್ಪ, ಅಶೋಕಕುಮಾರ ಜೈನ್, ಚಾಂದ್‌ಪಾಷಾ, ಬಸವರಾಜ ಮಿಮಿಕ್ರಿ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts