More

    ಇಂದು ವಿಂಡೀಸ್ ವಿರುದ್ಧ 2ನೇ ಏಕದಿನ, ಸರಣಿ ಗೆಲುವಿಗೆ ಸಜ್ಜಾದ ಟೀಮ್ ಇಂಡಿಯಾ

    ಅಹಮದಾಬಾದ್: ಸಾವಿರನೇ ಏಕದಿನ ಪಂದ್ಯವನ್ನು ಸುಲಭವಾಗಿ ಗೆದ್ದು ಸ್ಮರಣೀಯವಾಗಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ ಸರಣಿ ವಶಪಡಿಸಿಕೊಳ್ಳಲು ಸಜ್ಜಾಗಿದೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿದ್ದು, ಸತತ 2 ಗೆಲುವಿನೊಂದಿಗೆ ಸರಣಿ ಒಲಿಸಿಕೊಳ್ಳುವ ಅವಕಾಶ ರೋಹಿತ್ ಶರ್ಮ ಬಳಗದ ಮುಂದಿದೆ. ಸಹೋದರಿಯ ವಿವಾಹದಿಂದಾಗಿ ಮೊದಲ ಏಕದಿನ ತಪ್ಪಿಸಿಕೊಂಡಿದ್ದ ಉಪನಾಯಕ ಕೆಎಲ್ ರಾಹುಲ್, 2ನೇ ಪಂದ್ಯಕ್ಕೆ ಲಭ್ಯರಾಗಿದ್ದು, ಭಾರತ ತಂಡದ ಬಲ ಹೆಚ್ಚಿದೆ.

    ಯಜುವೇಂದ್ರ ಚಾಹಲ್-ವಾಷಿಂಗ್ಟನ್ ಸುಂದರ್ ಜೋಡಿಯ ಸ್ಪಿನ್ ಮೋಡಿ ಮೊದಲ ಏಕದಿನದಲ್ಲಿ ವಿಂಡೀಸ್ ತಂಡವನ್ನು ಕಂಗೆಡಿಸಿದ್ದರೆ, ನಾಯಕ ರೋಹಿತ್ ಶರ್ಮ ಅವರ ಬಿರುಸಿನ ಅರ್ಧಶತಕವೂ ಭಾರತದ ಚೇಸಿಂಗ್ ಸರಾಗಗೊಳಿಸಿತ್ತು. ಈ ಮೂಲಕ ಭಾರತ, ರೋಹಿತ್ ಶರ್ಮ ಸಾರಥ್ಯದಲ್ಲಿ 2023ರ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ಕೆಲಸ ಆರಂಭಿಸಿದೆ. ಕಳೆದ 20 ವರ್ಷಗಳಿಂದ ಭಾರತದಲ್ಲಿ ಏಕದಿನ ಸರಣಿ ಗೆಲುವು ಕಾಣದ ವಿಂಡೀಸ್, ಈ ಸಲವಾದರೂ ಆ ಕನಸು ನನಸಾಗಿಸಿಕೊಳ್ಳುವ ಆಸೆ ಜೀವಂತವಿಡಬೇಕಾದರೆ ಗೆಲ್ಲಲೇಬೇಕಾದ ಸವಾಲು ಎದುರಿಸುತ್ತಿದೆ.

    ರಾಹುಲ್ ಕ್ರಮಾಂಕ ಗೊಂದಲ
    ಕೆಎಲ್ ರಾಹುಲ್ ತಂಡಕ್ಕೆ ಮರಳಿರುವುದು ಬಲ ತುಂಬಿರುವ ಜತೆಗೆ ತಂಡ ಸಂಯೋಜನೆಯ ತಲೆನೋವನ್ನೂ ಹೆಚ್ಚಿಸಿದೆ. ಅವರು ಆರಂಭಿಕರಾಗಿ ಆಥವಾ ಮಧ್ಯಮ ಕ್ರಮಾಂಕದಲ್ಲಿ ಆಡುವರೇ ಎಂಬ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಇನ್ನೂ ಸ್ಪಷ್ಟತೆ ನೀಡಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ನಿರ್ವಹಣೆ ತೋರಿದ ಹೊರತಾಗಿಯೂ, ಆಡುವ 11ರ ಬಳಗದಲ್ಲಿ ಉಪನಾಯಕನಿಗೆ ಸ್ಥಾನ ಕಲ್ಪಿಸಲೇಬೇಕಾದ ಅನಿವಾರ‌್ಯತೆಯೂ ಎದುರಾಗಿದೆ.

    ಟೀಮ್ ನ್ಯೂಸ್:

    ಭಾರತ: ಕನ್ನಡಿಗ ಕೆಎಲ್ ರಾಹುಲ್ ವಾಪಸಾತಿಯಿಂದ ತಂಡ ಸಂಯೋಜನೆ ಬದಲಾಗುವುದು ನಿಶ್ಚಿತ. ಆರಂಭಿಕರಾಗಿ ಕಣಕ್ಕಿಳಿದರೆ ಇಶಾನ್ ಕಿಶನ್ ಹೊರಗುಳಿಯಬಹುದು. ಮಧ್ಯಮ ಕ್ರಮಾಂಕದಲ್ಲಿ ಆಡಿದರೆ, ಪದಾರ್ಪಣೆ ಪಂದ್ಯದಲ್ಲಿ ಉಪಯುಕ್ತ ಆಟವಾಡಿದ ಹೊರತಾಗಿಯೂ ದೀಪಕ್ ಹೂಡಾಗೆ ಕೊಕ್ ನೀಡಬಹುದು. ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ.

    ವೆಸ್ಟ್ ಇಂಡೀಸ್: ಮೊದಲ ಪಂದ್ಯದಲ್ಲಿ ನಾಟಕೀಯ ಕುಸಿತ ಕಂಡಿದ್ದ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ವಿಂಡೀಸ್ ಗಮನಹರಿಸಿದೆ. ಆದರೂ ಬ್ಯಾಟರ್‌ಗಳ ಬದಲಾವಣೆಗಿಂತ ಹೊಡೆತಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಬೇಕೆಂಬ ಸಂದೇಶ ರವಾನೆಯಾಗಿದೆ. ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲ ವೇಗಿ ರೊಮಾರಿಯೊ ಶೆರ್ಡ್ 11ರ ಬಳಗದಲ್ಲಿ ಸ್ಥಾನ ಪಡೆದರೆ ಅಚ್ಚರಿ ಇಲ್ಲ.

    *ಆರಂಭ: ಮಧ್ಯಾಹ್ನ 1.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    7: ಭಾರತ ಗೆದ್ದರೆ ವಿಂಡೀಸ್ ವಿರುದ್ಧ ತವರಿನಲ್ಲಿ ಸತತ 7ನೇ ಬಾರಿ ಏಕದಿನ ಸರಣಿ ಗೆದ್ದಂತಾಗಲಿದೆ. 2002ರಲ್ಲಿ ಕೊನೆಯದಾಗಿ ಭಾರತ ಸರಣಿ ಸೋತಿದ್ದರೆ, ಬಳಿಕ 2006-07, 2011-12, 2013-14, 2014-15, 2018-19, 2019-20ರಲ್ಲಿ ಸರಣಿ ಜಯಿಸಿತ್ತು.

    10: ಕಳೆದ 16 ಏಕದಿನ ಪಂದ್ಯಗಳಲ್ಲಿ ವಿಂಡೀಸ್ 10ರಲ್ಲಿ 50 ಓವರ್ ಪೂರ್ತಿ ಆಡಿಲ್ಲ.

    ವಿಶೇಷ ದಾಖಲೆಯತ್ತ ಕೊಹ್ಲಿ-ರೋಹಿತ್
    ರೋಹಿತ್ ಶರ್ಮ ನಾಯಕತ್ವದಡಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಅವರ ಜತೆಗೂಡಿ ಬ್ಯಾಟಿಂಗ್ ಮಾಡುವ ಅವಕಾಶ ತಪ್ಪಿಸಿಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ, 2ನೇ ಪಂದ್ಯದಲ್ಲಿ ಅವರ ಜತೆ 94 ರನ್ ಜತೆಯಾಟವಾಡಿದರೆ ವಿಶೇಷ ದಾಖಲೆ ಬರೆಯಲಿದ್ದಾರೆ. ಕೊಹ್ಲಿ-ರೋಹಿತ್ ಜೋಡಿ ಇದುವರೆಗೆ 81 ಇನಿಂಗ್ಸ್‌ಗಳಲ್ಲಿ ಜತೆಯಾಗಿ ಆಡಿ 4,906 ರನ್ ಸೇರಿಸಿದೆ. ಏಕದಿನದಲ್ಲಿ 5 ಸಾವಿರ ರನ್ ಜತೆಯಾಟವಾಡಿದ ಭಾರತ 3ನೇ ಜೋಡಿ ಎನಿಸಿಕೊಳ್ಳುವ ಅವಕಾಶ ಅವರ ಮುಂದಿದೆ. ಸಚಿನ್ ತೆಂಡುಲ್ಕರ್-ಸೌರವ್ ಗಂಗೂಲಿ ಜೋಡಿ 176 ಇನಿಂಗ್ಸ್‌ಗಳಲ್ಲಿ 8,227 ರನ್ ಸೇರಿಸಿದ್ದರೆ, ರೋಹಿತ್ ಶರ್ಮ-ಶಿಖರ್ ಧವನ್ ಜೋಡಿ 112 ಇನಿಂಗ್ಸ್‌ಗಳಲ್ಲಿ 5,023 ರನ್ ಪೇರಿಸಿದೆ.

    ಕೊಹ್ಲಿಗೆ ತವರಲ್ಲಿ 100ನೇ ಏಕದಿನ
    ಕಳೆದ ಪಂದ್ಯದಲ್ಲಿ ತವರಿನಲ್ಲಿ 5 ಸಾವಿರ ರನ್ ಪೂರೈಸಿದ್ದ ವಿರಾಟ್ ಕೊಹ್ಲಿಗೆ ಇದು 259ನೇ ಏಕದಿನ ಮತ್ತು ತವರಿನಲ್ಲಿ 100ನೇ ಏಕದಿನ ಪಂದ್ಯವಾಗಿದೆ. ಅವರು ಈ ಸಾಧನೆ ಮಾಡುತ್ತಿರುವ 5ನೇ ಭಾರತೀಯರಾಗಿದ್ದಾರೆ. ಸಚಿನ್ ತೆಂಡುಲ್ಕರ್ (164), ಎಂಎಸ್ ಧೋನಿ (127), ಅಜರುದ್ದೀನ್ (113) ಮತ್ತು ಯುವರಾಜ್ ಸಿಂಗ್ (108) ಈಗಾಗಲೆ ತವರಿನಲ್ಲಿ 100ಕ್ಕೂ ಅಧಿಕ ಏಕದಿನ ಆಡಿರುವ ಭಾರತೀಯರು. ಎಂದಿನಂತೆ ಅಭಿಮಾನಿಗಳು, ಕಳೆದೆರಡು ವರ್ಷಗಳಿಂದ ಕೈಗೆಟುಕದಿರುವ ವಿರಾಟ್ ಕೊಹ್ಲಿ ಅವರ 71ನೇ ಅಂತಾರಾಷ್ಟ್ರೀಯ ಶತಕದೊಂದಿಗೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

    ಕರೊನಾ ಗೆದ್ದ ಧವನ್, ಅಯ್ಯರ್
    ಕಳೆದ ವಾರ ಕರೊನಾ ಸೋಂಕಿತರಾಗಿದ್ದ ಆರಂಭಿಕ ಶಿಖರ್ ಧವನ್ ಮತ್ತು ಶ್ರೇಯಸ್ ಅಯ್ಯರ್ ಇದೀಗ ಗುಣಮುಖರಾಗಿದ್ದು, ಮಂಗಳವಾರ ಸಂಜೆ ಅಭ್ಯಾಸಕ್ಕೆ ಮರಳಿದ್ದಾರೆ. 2 ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಇವರಿಬ್ಬರೂ ಐಸೋಲೇಷನ್‌ನಿಂದ ಹೊರಬಂದಿದ್ದಾರೆ. ಆದರೆ ಇವರು 2ನೇ ಏಕದಿನಕ್ಕೆ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿಲ್ಲ. ಮತ್ತೋರ್ವ ಆರಂಭಿಕ ಋತುರಾಜ್ ಗಾಯಕ್ವಾಡ್ ಇನ್ನೂ ಕ್ವಾರಂಟೈನ್‌ನಲ್ಲಿದ್ದಾರೆ.

    ಭಾರತ ತಂಡದ ಆಯ್ಕೆ ಸಭೆಯಲ್ಲಿ ಹಸ್ತಕ್ಷೇಪದ ಆರೋಪ; ಇಲ್ಲಿದೆ ಗಂಗೂಲಿ ಉತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts