More

    ಹಿಂಸಾಚಾರಕ್ಕೆ ಪ್ರಚೋದನೆ ಆರೋಪ: ರಾಹುಲ್​ ಗಾಂಧಿ ವಿರುದ್ಧ ದೂರು ದಾಖಲು

    ಗುವಾಹಟಿ: ಭಾರತ್​​ ಜೋಡೋ ನ್ಯಾಯ ಯಾತ್ರೆಯ ವೇಳೆ ಹಿಂಸಾಚಾರ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಸಂಸದ ರಾಹುಲ್​ ಗಾಂಧಿ ಮತ್ತು ಇತರೆ ಕಾಂಗ್ರೆಸ್​ ನಾಯಕರ ವಿರುದ್ಧ ಅಸ್ಸಾಂ ಪೊಲೀಸರು ದೂರು ದಾಖಲಿಸಿದ್ದಾರೆ. ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮ ತಮ್ಮ ಎಕ್ಸ್​ ಖಾತೆಯ ಮೂಲಕ ತಿಳಿಸಿದ್ದಾರೆ.

    ಪೊಲೀಸ್​ ಬಲವನ್ನು ಬಳಸಿಕೊಂಡು ಭಾರತ್​ ಜೋಡೋ ಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ಅಸ್ಸಾಂ ಸರ್ಕಾರ ಮಾಡುತ್ತಿದೆ ಎಂಬುದು ಕಾಂಗ್ರೆಸ್​ ಆರೋಪ. ಆದರೆ, ಕಾಂಗ್ರೆಸ್​ ವಿನಾಕಾರಣ ಗೊಂದಲ ಸೃಷ್ಟಿ ಮಾಡಿ, ಹಿಂಸಾಚಾರ ಸೃಷ್ಟಿಸುತ್ತಿದೆ ಎಂಬುದು ಆಡಳಿತಾರೂಢ ಬಿಜೆಪಿ ಆರೋಪ. ಅಸ್ಸಾಂ ಸರ್ಕಾರದ ವಿರುದ್ಧ ನಿನ್ನೆ ಕಾಂಗ್ರೆಸ್​ ಧರಣಿ ಸಹ ನಡೆಸಿದೆ. ರಾಹುಲ್​ ಗಾಂಧಿ ಜನಸಮೂಹವನ್ನು ಪ್ರಚೋದಿಸುತ್ತಿದ್ದಾರೆ, ಅವರ ವಿರುದ್ಧ ದೂರು ದಾಖಲಿಸುವಂತೆ ಹಿಮಂತ್​ ಬಿಸ್ವಾ, ಅಸ್ಸಾಂ ಪೊಲೀಸರಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ ಉಭಯ ನಾಯಕರು ಎಕ್ಸ್​ ಖಾತೆಯಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

    ಹಿಮಂತ್​ ಬಿಸ್ವಾ ಸೂಚನೆಯಂತೆಯೇ ಅಸ್ಸಾಂ ಪೊಲೀಸರು ರಾಹುಲ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಅಲ್ಲದೆ, ಕೆ.ಸಿ. ವೇಣುಗೋಪಾಲ್​ ಮತ್ತು ಕನ್ನಯ್ಯ ಕುಮಾರ್​ ವಿರುದ್ಧವೂ ಕೇಸು ದಾಖಲಾಗಿದೆ.

    ರಾಹುಲ್ ಗಾಂಧಿಯವರ ಯಾತ್ರೆಯು ನಿನ್ನೆ ಮೇಘಾಲಯದಿಂದ ಅಸ್ಸಾಂಗೆ ಮರುಪ್ರವೇಶಿಸಿದಾಗ ಈ ಬಿಕ್ಕಟ್ಟು ಪ್ರಾರಂಭವಾಯಿತು. ಗುವಾಹಟಿ ಮಾರ್ಗವನ್ನು ಪ್ರವೇಶಿಸಲು ಯಾತ್ರೆಗೆ ಅನುಮತಿ ನಿರಾಕರಿಸಲಾಯಿತು. ಅದರ ಬದಲಿಗೆ ನಗರವನ್ನು ಬೈಪಾಸ್ ಮಾಡುವ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ದುಕೊಳ್ಳುವಂತೆ ಸೂಚಿಸಲಾಯಿತು. ಆದರೆ, ಇದು ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ ಪ್ರಚೋದನೆ ನೀಡಿತು. ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಘೋಷಣೆಗಳನ್ನು ಕೂಗಿದರು. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಎಕ್ಸ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವಿಡಿಯೋವನ್ನು ಆಧಾರವಾಗಿ ಇಟ್ಟುಕೊಂಡು ಅಸ್ಸಾಂ ಸರ್ಕಾರವು ಪೊಲೀಸ್ ಪ್ರಕರಣವನ್ನು ದಾಖಲಿಸಲು “ಸಾಕ್ಷಿ”ಯಾಗಿ ಬಳಸಿದೆ.

    ಜನಸಮೂಹವನ್ನು ಪ್ರಚೋದಿಸಿದ್ದಕ್ಕಾಗಿ ನಿಮ್ಮ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಕರಣವನ್ನು ದಾಖಲಿಸಲು ನಾನು ಅಸ್ಸಾಂ ಡಿಜಿಪಿಗೆ ಸೂಚನೆ ನೀಡಿದ್ದೇನೆ ಮತ್ತು ನಿಮ್ಮ ಎಕ್ಸ್​ ಖಾತೆಗಳಲ್ಲಿ ನೀವು ಪೋಸ್ಟ್ ಮಾಡಿದ ದೃಶ್ಯಗಳನ್ನು ಸಾಕ್ಷಿಯಾಗಿ ಬಳಸುತ್ತೇವೆ. ನಿಮ್ಮ ಅಶಿಸ್ತಿನ ನಡವಳಿಕೆ ಮತ್ತು ಮಾರ್ಗಸೂಚಿಗಳ ಉಲ್ಲಂಘನೆಯು ಗುವಾಹಟಿಯಲ್ಲಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ ಎಂದು ಹಿಮಂತ್​ ಬಿಸ್ವಾ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಹಿಂದಿನ ಯಾತ್ರೆಯ ಪರಿಣಾಮದಿಂದಾಗಿ ಬಿಜೆಪಿಯು ನಮ್ಮ ಯಾತ್ರೆಗೆ ಅಡ್ಡಿಪಡಿಸಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಹಿಂದಿನ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಯಿತು. ನಮ್ಮ ಮೇಲೆ ಈ ಯಾತ್ರೆ ಯಾವುದೇ ಪರಿಣಾಮ ಬೀರಲ್ಲ ಎಂದು ಬಿಜೆಪಿ ಭಾವಿಸಿತ್ತು. ಆದರೆ, ನಿಧಾನವಾಗಿ ಯಾತ್ರೆಯ ಪ್ರಭಾವ ಅವರ ಮೇಲೆ ಬೀರಲು ಆರಂಭವಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೆಸೆಂಡೋ ರೂಪುಗೊಂಡಿತು. ಹೀಗಾಗಿ ಮೊದಲು ಯಾತ್ರೆಯನ್ನು ಅಡ್ಡಿಪಡಿಸಲು ಚಿಂತಿಸುತ್ತಿದ್ದಾರೆ. ಯಾತ್ರೆಗೆ ಅಡ್ಡಿಪಡಿಸುವುದೇ ಬಿಜೆಪಿಗೆ ಸಮಸ್ಯೆಯಾಗಿದೆ. ಆದರೆ, ಅಡ್ಡಿಪಡಿಸುವ ಮೂಲಕ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ರಾಹುಲ್​ ಗಾಂಧಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸೂಚನೆ ಮೇರೆಗೆ ಮೇಘಾಲಯದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ನನಗೆ ಅನುಮತಿ ನೀಡಿಲ್ಲ ಎಂದು ರಾಹುಲ್​ ಆರೋಪ ಮಾಡಿದರು. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ಜಟಾಪಟಿ ಮುಂದುವರೆದಿದೆ. ಗುರುವಾರದವರೆಗೆ ಅಸ್ಸಾಂನಲ್ಲಿ ನಡೆಯಲಿರುವ ರಾಹುಲ್ ನೇತೃತ್ವದ ಯಾತ್ರೆಗೆ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

    6,713 ಕಿಮೀ ಉದ್ದದ ಯಾತ್ರೆಯು ಮಣಿಪುರದಿಂದ ಜನವರಿ 14 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. (ಏಜೆನ್ಸೀಸ್​)

    ಗ್ರಾ.ಪಂಚಾಯ್ತಿಗಳಿಗೆ ಅಧಿಕಾರ ನೀಡಲು ಅಡ್ಡಿ: ಸಿಎಂ ಅಂಗಳಕ್ಕೆ ಪ್ರಕರಣ, ಬಜೆಟ್​ನಲ್ಲಿ ಹೇಳಿದ್ದಕ್ಕೂ ಸೊಪ್ಪು ಹಾಕದ ಇಲಾಖೆಗಳು

    ವೃದ್ಧರ ಪಿಂಚಣಿಗೆ ಕುತ್ತು: ಕುಟುಂಬದ ವಾರ್ಷಿಕ ಆದಾಯಕ್ಕೆ 32 ಸಾವಿರ ರೂ. ಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts