More

    ವೃದ್ಧರ ಪಿಂಚಣಿಗೆ ಕುತ್ತು: ಕುಟುಂಬದ ವಾರ್ಷಿಕ ಆದಾಯಕ್ಕೆ 32 ಸಾವಿರ ರೂ. ಮಿತಿ

    | ಪಂಕಜ ಕೆ.ಎಂ. ಬೆಂಗಳೂರು

    ಪ್ರತಿಯೊಬ್ಬರಿಗೂ ಸಾರ್ವತ್ರಿಕ ಮೂಲ ಆದಾಯ (ಯೂನಿವರ್ಸಲ್ ಬೇಸಿಕ್ ಇನ್​ಕಂ) ಖಚಿತಪಡಿಸುವಲ್ಲಿ ಶ್ರಮಿಸಲಾಗುತ್ತಿದೆ ಎಂದು ಸರ್ಕಾರ ಪದೇಪದೆ ಹೇಳುತ್ತಲೇ ಇದೆ. ಇದೇ ಕಾರಣಕ್ಕೆ ಗ್ಯಾರಂಟಿ ಯೋಜನೆಗಳ ಮೂಲಕ ಅವರ ಆರ್ಥಿಕ ಮಟ್ಟವನ್ನು ಉತ್ತಮಪಡಿಸಲಾಗುತ್ತಿದೆ ಎಂದು ಉಚಿತ ಕೊಡುಗೆಗಳನ್ನು ಸಮರ್ಥಿಸಿಕೊಳ್ಳುತ್ತದೆ. ಆದರೆ, ಇದಕ್ಕೆ ವೈರುಧ್ಯವೆಂಬಂತೆ ಸರ್ಕಾರಿ ಸೌಲಭ್ಯಕ್ಕೆ ಅವರ ಆದಾಯವೇ ಮೂಲವಾಗುವ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕೆ ನಿದರ್ಶನವಾಗಿ ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರೂ.ಗಿಂತ ಕಡಿಮೆ ಇದ್ದರಷ್ಟೇ ಇನ್ನು ಮುಂದೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಸೌಲಭ್ಯ ಸಿಗಲಿದೆ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ..!

    ಸುಳ್ಳು ಮಾಹಿತಿ ನೀಡಿ ಸೌಲಭ್ಯ ಪಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಹೊಸ ನಿಯಮ ಜಾರಿಗೆ ತಂದಿದೆ. ಆದರೆ, ಇದು ಅವೈಜ್ಞಾನಿಕ ನಿಯಮವಾಗಿದ್ದು, ಸಂಧ್ಯಾಕಾಲದಲ್ಲಿ ಪಿಂಚಣಿಯ ಆಸರೆ ಬಯಸುವ ವೃದ್ಧರಿಗೆ ಮಾರಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಮಾಸಿಕ ಪಿಂಚಣಿಗಾಗಿ 60 ವರ್ಷ ಮೇಲ್ಪಟ್ಟವರು ಸಂಧ್ಯಾ ಸುರಕ್ಷಾ ಯೋಜನೆಯಡಿ ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಹಾಗೂ ವಿಧವಾ ವೇತನಕ್ಕಾಗಿ ಪತಿಯ ಮರಣಪ್ರಮಾಣ ಪತ್ರ, ಪಡಿತರ ಚೀಟಿಯೊಂದಿಗೆ ಈವರೆಗೆ ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಲಾಗುತ್ತಿತ್ತು. ಆದರೆ, ಈಗ ಇವುಗಳ ಜತೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಹೊಸ ವ್ಯವಸ್ಥೆಯಲ್ಲಿ 32 ಸಾವಿರ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.

    ಬಿಪಿಎಲ್ ಕಾರ್ಡ್​ನ ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ. ಇದೆ. ಹೊಸ ವ್ಯವಸ್ಥೆಯಲ್ಲಿ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಜೋಡಣೆ ಕಡ್ಡಾಯವಾಗಿರುವುದರಿಂದ 32 ಸಾವಿರ ಆದಾಯವಿರುವುದಾಗಿ ಪ್ರಮಾಣಪತ್ರ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದಿರುವವರು ಮಾತ್ರವೇ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ. ಈಗ ಪಿಂಚಣಿಗೆ ಸಲ್ಲಿಕೆಯಾಗುತ್ತಿರುವ ಬಹುತೇಕ ಅರ್ಜಿಗಳು 30 ಸಾವಿರ ಆದಾಯ ಮಿತಿಗೆ ಹೊಂದಾಣಿಕೆಯಾಗದೆ ಸಲ್ಲಿಕೆ ಸಂದರ್ಭದಲ್ಲೇ ಸ್ವೀಕೃತಿಯಾಗುತ್ತಿಲ್ಲ. ಬಿಪಿಎಲ್ ಪಡಿತರ ಚೀಟಿಗೆ 1.20 ಲಕ್ಷ ರೂ. ಅದಾಯ ಮಿತಿಯಿರುವಾಗ, ಪಿಂಚಣಿಗಾಗಿ ಈ ಮಿತಿಯನ್ನು 32 ಸಾವಿರ ರೂ.ಗಳಿಗೆ ನಿರ್ಬಂಧಿಸಿರುವುದು ಎಷ್ಟು ಸರಿ ಎಂದು ಹಿರಿಯ ನಾಗರಿಕರು ಪ್ರಶ್ನಿಸಿದ್ದಾರೆ. ಪಿಂಚಣಿಗೆ ಹೊಸ ಆದಾಯ ಪ್ರಮಾಣಪತ್ರ ಹಾಗೂ ಪಡಿತರ ಚೀಟಿ ಪಡೆಯಬೇಕಾದ ಅನಿವಾರ್ಯತೆ ಬಂದಿದೆ. ನಿತ್ಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಸೌಲಭ್ಯ ಪಡೆಯುವಷ್ಟರಲ್ಲಿ ಮತ್ತಿನ್ನೇನು ನಿಯಮ ತರುತ್ತಾರೋ? ಮನಬಂದಂತೆ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊದಲನೇ ಪುಟದಿಂದ…

    ಕೊಟ್ಟು ಕಸಿಯುತ್ತಿರುವ ಸರ್ಕಾರ
    ಸರ್ಕಾರ ಒಂದೆಡೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಪದವಿ ಪಡೆದವರಿಗೆ ಯುವನಿಧಿ, ಗೃಹಲಕ್ಷ್ಮಿಯೋಜನೆಯಡಿ ಮಹಿಳೆಯರಿಗೆ 2 ಸಾವಿರ ರೂ. ಕೊಟ್ಟು, ಮತ್ತೊಂದೆಡೆ ಕುಟುಂಬಕ್ಕೆ ಅದಾಯ ಮಿತಿ ಹೇರಿ ವೃದ್ಧರಿಗೆ ನೀಡುತ್ತಿದ್ದ ಸೌಲಭ್ಯವನ್ನು ಕಸಿಯಲು ಮುಂದಾಗಿದೆ ಎಂದು ಹಿರಿಯ ನಾಗರಿಕರು ಹಾಗೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳು ಹೇಳೋದ್ಹೇನು?
    ಈ ನಿಯಮ 2021ರಿಂದಲೇ ಜಾರಿಯಲ್ಲಿದೆ. ಈ ಹಿಂದೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲೂ ಬಹಳಷ್ಟು ಅನರ್ಹರನ್ನು ತಿರಸ್ಕರಿಸಲಾಗಿತ್ತು. ಅಲ್ಲದೆ, ರಾಜ್ಯದಲ್ಲಿ ವೃದ್ಧಾಪ್ಯ, ವಿಧವಾ ವೇತನ ಸೇರಿ ವಿವಿಧ ಯೋಜನೆಗಳಡಿ 70 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದಾರೆ. ಈ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿದರೆ ಇನ್ನಷ್ಟು ಮಂದಿ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ದುರ್ಬಲರು, ಅಸಹಾಯಕರು, ಬಡತನ ರೇಖೆಗಿಂತ ಕೆಳಗಿನವರಿಗೆ ಜೀವನ ನಿರ್ವಹಣೆಗೆ ಅನುಕೂಲವಾಗಲಿ ಎಂದು ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಆದರೆ, ಸೌಲಭ್ಯ ಪಡೆಯುತ್ತಿರುವವರಲ್ಲಿ ಹೆಚ್ಚು ಆದಾಯ ಹೊಂದಿರುವವರೂ ಇದ್ದಾರೆ. ಹೀಗಾಗಿ ಇಂತಹವರನ್ನು ಮೂಲದಲ್ಲೇ ತಡೆದು ಯೋಜನೆಯಿಂದ ದೂರ ಇಡುವ ಉದ್ದೇಶದಿಂದ ಪಿಂಚಣಿಗೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್​ನ ಜೋಡಣೆ ಮಾಡಲಾಗುತ್ತಿದೆ. ಇದರಿಂದ ಆದಾಯ ಹೊಂದಾಣಿಕೆ ಆಗದ ಅರ್ಜಿಗಳು ತಿರಸ್ಕೃತಗೊಳ್ಳಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

    * ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆ ಜೋಡಣೆ ನಿಯಮ ಜಾರಿ

    * ಹೊಸ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸುವಾಗಲೇ ಅನರ್ಹರ ತಿರಸ್ಕಾರ

    * ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ

    * ಬಿಪಿಎಲ್ ಕಾರ್ಡ್ ಆದಾಯವೇ 1.20 ಲಕ್ಷ ರೂ. ನಿಗದಿಯಾಗಿದೆ

    ಗ್ಯಾರಂಟಿ ದುಡ್ಡೇ 33,000 ರೂ.
    ಸರ್ಕಾರ ಗ್ಯಾರಂಟಿ ಯೋಜನೆಗಳಡಿ ಕೊಡುತ್ತಿರುವ ಹಣದ ಲೆಕ್ಕಾಚಾರದಲ್ಲೇ ವಾರ್ಷಿಕ 33 ಸಾವಿರ ರೂ. ಆಗುತ್ತದೆ. ಗೃಹಲಕ್ಷಿ್ಮ ಯೋಜನೆಯಡಿ ಮಾಸಿಕ 2 ಸಾವಿರ ರೂ.ನಂತೆ ವಾರ್ಷಿಕ 24 ಸಾವಿರ ರೂ. ಆಗುತ್ತದೆ. ಅನ್ನಭಾಗ್ಯ ಅಕ್ಕಿ ಹಣ ತಲಾ ಒಬ್ಬರಿಗೆ 750 ರೂ.ನಂತೆ ಐವರಿಗೆ ಲೆಕ್ಕ ಹಾಕಿದರೂ ವಾರ್ಷಿಕ 9,000 ರೂ. ಆಗುತ್ತೆ. ಇವೆರಡರಿಂದಲೇ ವಾರ್ಷಿಕ 33 ಸಾವಿರ ರೂ. ದೊರೆಯಲಿದೆ. ಇನ್ನು ಯುವನಿಧಿ ಫಲಾನುಭವಿಯಾದರೆ ಕನಿಷ್ಠ 18 ಸಾವಿರ ಹಾಗೂ ಗರಿಷ್ಠ 36 ಸಾವಿರ ರೂ.ವರೆಗೆ (ಎರಡು ವರ್ಷದ ಅವಧಿಗೆ) ದೊರೆಯುತ್ತದೆ.

    ಬಿಪಿಎಲ್ ಕಾರ್ಡ್​ಗೆ -ಠಿ;1.20 ಲಕ್ಷ ಆದಾಯ ಮಿತಿ ಇದೆ. ಆದರೆ, ಪಿಂಚಣಿಗೆ 32 ಸಾವಿರ ಅದಾಯ ಮಿತಿಗೊಳಿಸಿರುವುದು ಸರ್ಕಾರ ವೃದ್ಧರಿಗೆ ಮಾಡುತ್ತಿರುವ ಅನ್ಯಾಯ. ಸರ್ಕಾರವೇ ಹೀಗೆ ಮಾಡಿದರೆ ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು.

    | ಟಿ.ಕೆ. ರಿಜೀಶ್ ಸಾಮಾಜಿಕ ಕಾರ್ಯಕರ್ತ

    ಸಿದ್ದರಾಮಯ್ಯ ಅವರೇ ಸರಿಯಾಗಿ ವಿಡಿಯೋ ನೋಡಿ: ಸಿಎಂ ಸಿದ್ದು ಆರೋಪಕ್ಕೆ ಅಸ್ಸಾಂ ಸಿಎಂ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts