More

    ಅಧಿಕ ಮಳೆಗೆ ಮೊಳಕೆ ಒಡೆದ ರಾಗಿ: ಅಕಾಲಿಕ ಮಳೆಯಿಂದ ಅಪಾರ ಬೆಳೆಹಾನಿ ಸಂಕಷ್ಟದಲ್ಲಿ ಅನ್ನದಾತ

    ಬೂದಿಕೋಟೆ : ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಹಂತಕ್ಕೆ ಬಂದಿದ್ದ ರಾಗಿ ಮೊಳಕೆ ಒಡೆದಿದ್ದು ಬೆಳೆಹಾನಿಗೆ ರೈತ ತತ್ತರಿಸುವಂತಾಗಿದೆ.
    ಮುಂಗಾರಿನಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಬಂಗಾರಪೇಟೆ ತಾಲೂಕಿನಲ್ಲಿ 16346 ಹೆಕ್ಟೇರ್ ರಾಗಿ ಬಿತ್ತನೆ ಮಾಡಲಾಗಿತ್ತು. ಇಳುವರಿಯೂ ನಿರೀಕ್ಷೆಗೂ ಮೀರಿ ಬಂದಿದ್ದು, ಕಟಾವು ಹಂತಕ್ಕೂ ಬಂದಿತ್ತು. ಈಗಾಗಲೆ ಮೊದಲ ಹಂತದಲ್ಲಿ ಬಿತ್ತನೆ ಮಾಡಿದ್ದ ಶೇ.20 ಬೆಳೆಯನ್ನು ರೈತರು ಕಟಾವು ಮಾಡಿಕೊಂಡಿದ್ದಾರೆ.

    ಉಳಿದ ಬೆಳೆ ಇನ್ನೇನು ಕಟಾವು ಮಾಡಿ ಒಕ್ಕಣೆಯಿಂದ ರಾಗಿ ಬೇರ್ಪಡಿಸಿ ರಾಗಿಯನ್ನು ಮನೆಗೆ ತುಂಬಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅನ್ನದಾತ ಕಂಡ ಕನಸನ್ನು ಅಕಾಲಿಕ ಮಳೆ ನುಚ್ಚು ನೂರು ಮಾಡಿದೆ. ಕೃಷಿ ಇಲಾಖೆ ಅಧಿಕಾರಿಗಳು ವಿವಿಧ ಇಲಾಖೆ ಸೇರಿ ಜಂಟಿಯಾಗಿ ಸರ್ವೇ ನಡೆಸಲಾಗಿದ್ದು, ಒಟ್ಟು 7733 ಹೆಕ್ಟೇರ್ ಬೆಳೆ ನಷ್ಟ ಉಂಟಾಗಿರುವ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

    ಅಂಗಾತ ಮಲಗಿದ ಭತ್ತ: ವಾಯುಭಾರ ಕುಸಿತದಿಂದ ಸುರಿದ ಮಳೆಗೆ ಗಡಿಭಾಗದ ಗ್ರಾಮಗಳಲ್ಲಿ ರೈತರು ಬೆಳೆದಿರುವ ಭತ್ತದ ಬೆಳೆ ಅಂಗಾತ ಮಲಗಿದೆ. ಕಳೆದ ಹಲವು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗದೆ ಅನ್ನದಾತ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ.

    ಈಗಾಗಲೆ ಸಾಕಷ್ಟು ರೈತರು ಕಟಾವು ಮಾಡಿ ರಾಗಿ ತೆನೆಯನ್ನು ಒಕ್ಕಣೆ ಮಾಡಲು ಜಮೀನಿನ ಬಳಿ ಟಾರ್ಪಾಲಿನ್ ಸಹಾಯದಿಂದ ಶೇಖರಣೆ ಮಾಡಿಟ್ಟಿದ್ದಾರೆ. ಶೇಖರಣೆ ಮಾಡಿರುವ ತೆನೆಯನ್ನೂ ಬಿಸಿಲಿಗೆ ಒಣಗಿಸಿ ಒಕ್ಕಣೆ ಮಾಡಲು ಸಾಧ್ಯವಾಗದೆ ಬೂದು ಹಿಡಿಯುತ್ತಿದೆ. ಮಳೆ ಅವಾಂತರದಿಂದ ಬೆಳೆ ಕಳೆದುಕೊಂಡ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ.

    ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನಲ್ಲಿ 7733 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಳೆನಷ್ಟದ ವರದಿಯನ್ನು ಸರ್ಕಾರ ಸಲ್ಲಿಸಲಾಗಿದೆ.
    ಅಸೀಫ್ ಉಲ್ಲಾ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಬಂಗಾರಪೇಟೆ

    ಸಾಲ ಮಾಡಿ ಬೆಳೆದ ರಾಗಿ ಮಳೆಗೆ ಹಾನಿಯಾಗಿದ್ದು, ತೆನೆಗಳಲ್ಲಿ ಮೊಳಕೆ ಬಂದಿದೆ. ಇದರಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಶೀಘ್ರ ಪರಿಹಾರ ಘೋಷಿಸಬೇಕು.
    ನಾಗರಾಜ, ರೈತ ಗುಲ್ಲಹಳ್ಳಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts