More

    ಸರ್ಕಾರದ ಆದೇಶ ಧಿಕ್ಕರಿಸಿ ರ್ಯಾಫ್ಟಿಂಗ್

    ಕಾರವಾರ: ಸರ್ಕಾರದ ಆದೇಶ ಗಾಳಿಗೆ ತೂರಿ ಕಾಳಿ ನದಿಯಲ್ಲಿ ಗಣೇಶಗುಡಿ ಸಮೀಪ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಜು. 28ರಂದು ನೋಟಿಸ್ ಜಾರಿ ಮಾಡಿ ಅದನ್ನು ತಕ್ಷಣ ಸ್ಥಗಿತ ಮಾಡುವಂತೆ ಸೂಚನೆ ನೀಡಿದೆ.
    ಕೋವಿಡ್ ಕಾರಣ ರದ್ದಾಗಿದ್ದ ಕೆಲ ಪ್ರವಾಸೋದ್ಯಮ ಚಟುವಟಿಕೆ ಮರು ಪ್ರಾರಂಭಕ್ಕೆ ಎರಡು ತಿಂಗಳ ಹಿಂದೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಬೋಟಿಂಗ್ ಹಾಗೂ ರ್ಯಾಫ್ಟಿಂಗ್ ಮುಂತಾದ ಜಲ ಸಾಹಸ ಕ್ರೀಡೆಗಳ ಪ್ರಾರಂಭಕ್ಕೆ ಯಾವುದೇ ಸ್ಪಷ್ಟ ಆದೇಶವಿರಲಿಲ್ಲ. ಆದರೂ ತಾಲೂಕು ಆಡಳಿತ ಜಲ ಸಾಹಸ ಕ್ರೀಡೆ ನಡೆಸುವ 10ಕ್ಕೂ ಹೆಚ್ಚು ಮಾಲೀಕರನ್ನು ಜುಲೈ 17ರಂದು ಕಚೇರಿಗೆ ಕರೆಸಿಕೊಂಡು ಬಾಂಡ್ ಬರೆಸಿಕೊಂಡು ಮೌಖಿಕವಾಗಿ ಅನುಮತಿ ನೀಡಿತ್ತು ಎನ್ನಲಾಗಿದೆ. ಕಾಳಿ ನದಿಯಲ್ಲಿ ನಡೆಯುವ ಎಲ್ಲ ಜಲ ಸಾಹಸ ಕ್ರೀಡೆಗಳು ಅವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಸ್ಥಳೀಯ ಆಡಳಿತದ ಅನುಮತಿಯೂ ಬೇಕಿದೆ. ಆದರೆ, ಸದ್ಯ ಮೂರು ಮಾಲೀಕರನ್ನು ಹೊರತುಪಡಿಸಿ ಉಳಿದವರು ಗ್ರಾಪಂನಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿಲ್ಲ ಎಂದು ಗ್ರಾಪಂ ಮಾಹಿತಿ ನೀಡಿದೆ. ಈ ಬಗ್ಗೆ ಪ್ರಶ್ನಿಸಿದಲ್ಲಿ ಅಧಿಕಾರಿಗಳು ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹಾಕಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
    ಅಪಾಯಕಾರಿ…
    ಒಂದು ಮಾಹಿತಿಯ ಪ್ರಕಾರ ಕಾಳಿ ನದಿಯಲ್ಲಿ 80ಕ್ಕೂ ಹೆಚ್ಚು ಬೋಟ್​ಗಳು ರ್ಯಾಫ್ಟಿಂಗ್ ನಡೆಸುತ್ತಿವೆ. ಅದಕ್ಕೆ ಸಾರಂಗ ಎಂಬ ಜಲ ಸಾಹಸದ ತರಬೇತಿ ಪಡೆದವರ ಅವಶ್ಯಕತೆ ಇದೆ. ಆದರೆ, 55ಕ್ಕಿಂತ ಹೆಚ್ಚು ಜನ ಸಾರಂಗ ಪ್ರಮಾಣಪತ್ರ ಇಲ್ಲದವರು ಯಾವುದೇ ಸುರಕ್ಷತೆ ಇಲ್ಲದೆ ಪ್ರವಾಸಿಗರನ್ನು ರ್ಯಾಫ್ಟಿಂಗ್​ಗೆ ಕರೆದೊಯ್ಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಸರ್ಕಾರ ಹೊರಡಿಸಿದ ಕೋವಿಡ್-19 ಮಾರ್ಗಸೂಚಿಯಲ್ಲಿ ಜಲಸಾಹಸ ಕ್ರೀಡೆ ನಡೆಸಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಮುದ್ರ ದಡಗಳಲ್ಲಿ ಹಾಗೂ ಕಾಳಿ ನದಿಯಲ್ಲಿ ನಡೆಸುತ್ತಿರುವ ಜಲಸಾಹಸ ಕ್ರೀಡೆಗಳನ್ನು ಸ್ಥಗಿತ ಮಾಡುವಂತೆ ಎಲ್ಲ ಪರವಾನಗಿದಾರರಿಗೆ ಹಾಗೂ ಸಂಬಂಧಪಟ್ಟ ತಹಸೀಲ್ದಾರರಿಗೆ ಸೂಚನೆ ನೀಡಿ ಪತ್ರ ಕಳಿಸಲಾಗಿದೆ.
    | ಎಸ್.ಪುರುಷೋತ್ತಮ
    ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts