More

    ಸಂಪಾದಕೀಯ: ವರ್ಣಭೇದ ನೀತಿ ಸಲ್ಲ, ಸಮಸ್ಯೆಯನ್ನು ಅಮೆರಿಕ ವಿವೇಕದಿಂದ ಪರಿಹರಿಸಬೇಕು

    ನಾಯಕತ್ವಕ್ಕೆ ಸಂವೇದನೆ, ತಾಳ್ಮೆ, ಟೀಕೆಗಳನ್ನು ಎದುರಿಸುವ ಗುಣ ಅಗತ್ಯ. ಮುಖ್ಯವಾಗಿ, ಎಲ್ಲರನ್ನೂ ಸಮಾನವಾಗಿ ಕಾಣುವ, ಪ್ರಜೆಗಳನ್ನು ಗೌರವಿಸುವ ಮನೋಭಾವ ಮುಖ್ಯ. ಅದಿಲ್ಲದಿದ್ದಲ್ಲಿ ಏನಾಗುತ್ತದೆ ಎಂಬುದಕ್ಕೆ ಅಮೆರಿಕದ ದಾರುಣ ಸ್ಥಿತಿಯೇ ಸ್ಪಷ್ಟ ಚಿತ್ರಣವನ್ನು ಒದಗಿಸಿದೆ ಎನ್ನಬಹುದು. ಒಂದೆಡೆ, ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತ ಹೈರಾಣಾಗಿರುವ ಅಮೆರಿಕ ಈಗಾಗಲೇ 1 ಲಕ್ಷಕ್ಕೂ ಅಧಿಕ ಜನರನ್ನು ಸೋಂಕಿನಿಂದ ಕಳೆದುಕೊಂಡಿದೆ. ಹೀಗಿರುವಾಗ, ವರ್ಣಭೇದ ನೀತಿ ವಿರುದ್ಧ ಅಲ್ಲಿಯ ಜನರು ಸಿಡಿದೆದ್ದಿದ್ದು, ಜನಾಂಗೀಯ ಕಿಚ್ಚು ವ್ಯಾಪಿಸಿದೆ. ಆಫ್ರಿಕಾ ಮೂಲದ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ ವಿರುದ್ಧ ಆರಂಭಗೊಂಡಿರುವ ಜನಾಂಗೀಯ ಸಂಘರ್ಷ ತಾರಕಕ್ಕೇರಿದ್ದು, ದಶಕದಲ್ಲೇ ಭೀಕರ ಪ್ರತಿಭಟನಾ ಕಿಚ್ಚಿಗೆ ಅಮೆರಿಕ ಸಾಕ್ಷಿಯಾಗಿದೆ. 140ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿಭಟನೆ ವ್ಯಾಪಕವಾಗಿದ್ದು, ವಾಷಿಂಗ್ಟನ್, ಲಾಸ್ ಏಂಜಲಿಸ್, ಅಟ್ಲಾಂಟಾ, ಹ್ಯೂಸ್ಟನ್ ಸೇರಿ 40ಕ್ಕಿಂತ ಹೆಚ್ಚು ಪ್ರಮುಖ ನಗರಗಳಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. 4 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

    ಪರಿಸ್ಥಿತಿಯನ್ನು ಸೂಕ್ಷ್ಮ ವಾಗಿ, ವಿವೇಕಯುತವಾಗಿ ನಿಭಾಯಿಸಬೇಕಿದ್ದ ಟ್ರಂಪ್ ಆಡಳಿತ ಪ್ರತಿಭಟನಾಕಾರರ ವಿರುದ್ಧ ಕೆಟ್ಟ ಭಾಷೆಯನ್ನು ಬಳಸಿದ್ದರಿಂದ, ಪ್ರತಿಭಟನೆಯ ರೋಷಾಗ್ನಿಗೆ ತುಪ್ಪ ಸುರಿದಂತಾಗಿದೆ. ಅಮೆರಿಕಕ್ಕೆ ಈ ಸಮಸ್ಯೆ ತುಂಬ ಹಳೆಯದು. ಆದರೆ, ಜಗತ್ತು ಇಷ್ಟು ಮುಂದುವರಿದರೂ, ಮಾನವೀಯತೆಯೇ ಮುಖ್ಯ, ಅದನ್ನು ಮರೆತರೆ ಸಹಬಾಳ್ವೆ ಕಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಕೃತಿ ತೋರಿಸಿಕೊಡುತ್ತಿದೆ. ಕರೊನಾ ಕೂಡ ಇಂಥದ್ದೇ ಪಾಠ ಕಲಿಸಿದೆ. ಆದರೂ, ಜನಾಂಗೀಯ ಆಧಾರದಲ್ಲಿ, ವರ್ಣದ ಆಧಾರದಲ್ಲಿ ತಾರತಮ್ಯ ಮಾಡುವುದು ಅಕ್ಷಮ್ಯವೇ ಸರಿ. ಅಷ್ಟಕ್ಕೂ, ಇಂಥದ್ದೊಂದು ಅಸಮಾಧಾನ ಕಳೆದ ಕೆಲ ತಿಂಗಳುಗಳಿಂದಲೂ ಹೊಗೆಯಾಡುತ್ತಲೇ ಇತ್ತು. ಏಕೆಂದರೆ, ಕರೊನಾ ಸೋಂಕಿತರ ಬಗ್ಗೆ ನ್ಯೂಯಾರ್ಕ್​ನ ವೈದ್ಯಕೀಯ ಮತ್ತು ನಾಗರಿಕ ಆಡಳಿತ ವ್ಯವಸ್ಥೆ ತಾರತಮ್ಯವನ್ನು ಢಾಳಾಗಿಯೇ ಪ್ರದರ್ಶಿಸಿತು. ಕಪು್ಪವರ್ಣೀಯ ಮತ್ತು ಹಿಸ್ಪಾ್ಯನಿಕ್ಸ್ (ಸ್ಪಾ್ಯನಿಷ್ ಮೂಲದವರು) ಜನರಿಗೆ ಅಗತ್ಯ ವೈದ್ಯಕೀಯ ಸೇವೆ ಸೂಕ್ತ ಸಮಯದಲ್ಲಿ ದೊರೆಯಲಿಲ್ಲ. ಶೇಕಡ 70ರಷ್ಟು ವರ್ಣಿಯ ಮತ್ತು ಶೇಕಡ 47ರಷ್ಟು ಹಿಸ್ಪಾ್ಯನಿಕ್ಸ್ ಸೋಂಕಿತರು ತಾರತಮ್ಯಕ್ಕೊಳಗಾದರು ಎನ್ನುತ್ತವೆ ಮೂಲಗಳು. ಪರಿಣಾಮವಾಗಿ ಮೃತಪಟ್ಟವರಲ್ಲಿ ಹೆಚ್ಚಿನವರು ಆ ಎರಡು ಜನಾಂಗದವರೇ.

    ಇತ್ತೀಚೆಗಂತೂ ಪೊಲೀಸ್ ಅಧಿಕಾರಿ ಆಫ್ರಿಕನ್ ವ್ಯಕ್ತಿಯನ್ನು ಅಮಾನುಷ ವಾಗಿ ಹತ್ಯೆ ಮಾಡಿರುವುದು ಕಪು್ಪವರ್ಣೀಯರನ್ನು ಕೆರಳಿಸಿದೆ. ‘ನಮಗೆ ಕಪು್ಪ ಬಣ್ಣದ ಮಕ್ಕಳು, ಸಹೋದರ-ಸಹೋದರಿಯರಿದ್ದಾರೆ. ನಾವು ಅವರನ್ನೆಲ್ಲ ಸಾಯಲು ಬಿಡುವುದಿಲ್ಲ’ ಎಂಬ ಪ್ರತಿಭಟನಾಕಾರರ ನೋವನ್ನು ಟ್ರಂಪ್ ಆಡಳಿತ ಮಾನವೀಯ ದೃಷ್ಟಿಯಿಂದ ನೋಡಿ, ತಾರತಮ್ಯವನ್ನು ಕೊನೆಗಾಣಿಸಲು ಮುಂದಾಗಬೇಕಿದೆ. ವರ್ಣಭೇದ ನೀತಿ ಮಾನವ ಸಮುದಾಯಕ್ಕೆ ದೊಡ್ಡ ಕಳಂಕ. ವಿಶ್ವದ ಇತರ ದೇಶಗಳಿಗೆಲ್ಲ ಮಾನವೀಯತೆಯ ಪಾಠ ಮಾಡುವ ಅಮೆರಿಕ ತನ್ನದೇ ದೇಶದಲ್ಲಿ ಎಷ್ಟು ಅಮಾನುಷ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂಬುದನ್ನು ಅವಲೋಕಿಸಿಕೊಳ್ಳಬೇಕು. ಪ್ರತಿಭಟನಾಕಾರರನ್ನು ಹತ್ತಿಕ್ಕುವ ಬದಲಾಗಿ ಅವರ ಜತೆ ಮಾತುಕತೆ ಮೂಲಕ ಟ್ರಂಪ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts