More

    ಜಗದಾಳ ಹಾಸ್ಟೆಲ್‌ನಲ್ಲಿ ‘ಕೈ ತೋಟ’

    ರಬಕವಿ/ಬನಹಟ್ಟಿ: ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾದ ವಿದ್ಯಾರ್ಥಿಗಳಿಂದ ‘ಕೈ ತೋಟ’ ನಿರ್ಮಿಸುವ ಯೋಜನೆಯನ್ನು ಸಮೀಪದ ಜಗದಾಳ ಗ್ರಾಮದ ಸರ್ಕಾರಿ ವಸತಿ ನಿಲಯವೊಂದು ಜಾರಿಗೆ ತಂದಿದೆ.

    ಸರ್ಕಾರಿ ಶಾಲೆ, ಅಂಗನವಾಡಿ, ವಸತಿ ನಿಲಯಗಳಲ್ಲಿ ಕೈ ತೋಟ ನಿರ್ಮಿಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕೆಂಬ ಮಹತ್ತರ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಅಲ್ಲಿಯ ಸಿಬ್ಬಂದಿ ವಿದ್ಯಾರ್ಥಿಗಳ ಮಚ್ಚುಗೆಗೆ ಪಾತ್ರವಾಗಿದೆ.

    ನಾಲ್ಕು ವರ್ಷಗಳಿಂದ ವಸತಿ ನಿಲಯದ 4 ಗುಂಟೆ ಪ್ರದೇಶದಲ್ಲಿ ಪಾಲಕ್, ಕೊತಂಬರಿ, ಕ್ಯಾಬೇಜ್ , ಟೊಮ್ಯಾಟೊ, ಚಿಕ್ಕು, ಪೇರು, ಸೀತಾಲ ಹೀಗೆ ಅನೇಕ ತರಕಾರಿಗಳನ್ನು ಬೆಳೆಸಿ ನಿತ್ಯ ಅಡುಗೆಗೆ ಬಳಸಲಾಗುತ್ತಿದೆ.

    ಇಲ್ಲಿನ ವಸತಿ ನಿಲಯದ ಪಾಲಕ ಮಂಜುನಾಥ ಆಲಗೂರ ಅವರ ಶ್ರಮದಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಬಿಡುವಿನ ಸಮಯದಲ್ಲಿ ಈ ಕೈ ತೋಟ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಸಾವಯವ ಕೃಷಿ
    ವಸತಿ ನಿಲಯದಲ್ಲಿನ ಕೊಳೆತ ವಸ್ತುಗಳು, ಅನ್ನದ ಮುಸುರೆ, ತಪ್ಪಲನ್ನು ಸಂಗ್ರಹಿಸಿ ತಿಪ್ಪೆ ಗುಂಡಿಯಲ್ಲಿ ಇರಿಸಿ ನಂತರ ಅದನ್ನೇ ಗೊಬ್ಬರ ಮಾಡಿಕೊಂಡು ಸಂಪೂರ್ಣ ಸಾವಯವ ಕೃಷಿ ಮಾಡುತ್ತಿರುವುದು ವಿಶೇಷ.

    ಮಾದರಿ ವಸತಿ ನಿಲಯ
    ಸರ್ಕಾರಿ ವಸತಿ ನಿಲಯ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು. ಉತ್ತಮ ಪರಿಸರದ ಜತೆಗೆ ಮಕ್ಕಳಲ್ಲಿ ಶಿಸ್ತು, ಸ್ವಾವಲಂಬನೆ ಮೂಡಿಸಲಾಗುತ್ತಿದೆ. ಇದು ಖಾಸಗಿ ವಸತಿ ನಿಲಯಗಳಿಗೂ ಮಾದರಿಯಾಗಿದೆ.

    5 ರಿಂದ 10ನೇ ತರಗತಿ ಓದುವ 130 ಕ್ಕೂ ಅಧಿಕ ಬಾಲಕರು ಈ ವಸತಿ ನಿಲಯದಲ್ಲಿದ್ದಾರೆ. ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿ ಪರಿಸರ ಸ್ವಚ್ಛವಾಗಿದ್ದು, ಪ್ರತ್ಯೇಕವಾದ ಸ್ನಾನ, ಬಟ್ಟೆ ತೊಳೆಯುವ ಸ್ಥಳ, ಶೌಚಗೃಹ ಸೇರಿ ಇತರ ಸೌಕರ್ಯ ಇವೆ. ಮರಗಳಿಂದಲೇ ಕೂಡಿರುವ ಸುತ್ತಲಿನ ಆವರಣ ಎಂಥವರನ್ನೂ ಮೂಕವಿಸ್ಮಯವನ್ನಾಗಿಸುತ್ತದೆ.

    ಜಿಲ್ಲೆಯಲ್ಲಿಯೇ ಬೇಡಿಕೆ
    ಈ ವಸತಿ ನಿಲಯಕ್ಕೆ ಮಕ್ಕಳನ್ನು ಸೇರಿಸಲು ಪೈಪೋಟಿ ಹೆಚ್ಚಿದೆ. ಇದಕ್ಕೆ ಅಂಟಿಕೊಂಡೇ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು, ಎರಡೂ ಸಮರ್ಪಕವಾಗಿ ಹೊಂದಾಣಿಕೆ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವಲ್ಲಿ ಯಶಸ್ಸು ಕಾಣುತ್ತಿವೆ. ಪ್ರಸಕ್ತ ವರ್ಷ ಕೇವಲ 75 ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳುವ ನಿಯಮವಿತ್ತು. ಅದನ್ನು ಮೀರಿ 130 ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿರುವುದು ಮತ್ತೊಂದು ವಿಶೇಷ. ಕಳೆದ ತಿಂಗಳು ಸಮಾಜ ಕಲ್ಯಾಣ ಇಲಾಖೆ ಅನುದಾನಡಿ 92 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿಯಾಗಿ 5 ಕೊಠಡಿಗಳು ಹಾಗೂ ಊಟದ ಕೋಣೆಯನ್ನು ಶಾಸಕ ಸಿದ್ದು ಸವದಿ ಮಂಜೂರುಗೊಳಿಸಿದ್ದು, ಕಾರ್ಯ ಭರದಿಂದ ಸಾಗಿದೆ.

    ಸ್ವಚ್ಛ ಅಡುಗೆ ಕೋಣೆ
    ಅಡುಗೆ ಕೋಣೆಯಲ್ಲಿ ಕಣ್ಣು ಹಾಯಿಸಿದರೆ ಎಲ್ಲೆಂದರಲ್ಲಿ ಸ್ವಚ್ಛತೆ ಎದ್ದು ಕಾಣುತ್ತದೆ. ಅಡುಗೆ ತಯಾರಕರಿಂದ ಕೋಣೆ ಸಂಪೂರ್ಣ ಸ್ವಚ್ಛಂದವಾಗಿ ಹೊಳೆಯುತ್ತದೆ.

    ವಸತಿ ನಿಲಯ ತರಕಾರಿ ಬೆಳೆಯಲು ಸ್ವಾವಲಂಬಿಯಾಗಿರುವುದಕ್ಕೆ ವಿದ್ಯಾರ್ಥಿಗಳೇ ಕಾರಣ. ಇದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆಯ ಬಾಗಲಕೋಟೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ ಹಾಗೂ ಜಮಖಂಡಿಯ ಸಹಾಯಕ ನಿರ್ದೇಶಕ ಸಿ. ಎಸ್. ಗಡ್ಡದೇವರಮಠ ಅವರ ಪ್ರೋತ್ಸಾಹ, ಜಗದಾಳ ಗ್ರಾಮಸ್ಥರ ಸಹಾಯ, ಸಹಕಾರದಿಂದ ಸ್ವಚ್ಛತೆ ಹಾಗೂ ಮಾದರಿ ಸರ್ಕಾರಿ ವಸತಿ ನಿಲಯವಾಗಲು ಕಾರಣವಾಗಿದೆ.
    ಮಂಜುನಾಥ ಆಲಗೂರ, ವಸತಿ ನಿಲಯ ಪಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts